ಬೆಂಗಳೂರು: ನಟಿ ರನ್ಯಾ ರಾವ್ ಅವರು ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಅವರ ಕುಟುಂಬಕ್ಕೆ ಮುಜುಗರ ಉಂಟಾಗಿದೆ.
ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳಾದ ರನ್ಯಾ ರಾವ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಮಗಳ ಬಂಧನದ ಬಗ್ಗೆ ರಾಮಚಂದ್ರ ರಾವ್ ಅವರು ಎಎನ್ಐ ನ್ಯೂಸ್ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮಗೂ ಕೂಡ ಈ ವಿಷಯ ಮಾಧ್ಯಮದ ಮೂಲಕ ತಿಳಿಯಿತು ಎಂದು ಅವರು ಹೇಳಿದ್ದಾರೆ. ಹಲವು ದಿನಗಳಿಂದ ಮಗಳ ಜೊತೆ ತಾವು ಸಂಪರ್ಕದಲ್ಲಿ ಇಲ್ಲ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.
ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದಾಗ ನನಗೆ ಶಾಕ್ ಆಯಿತು. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಯಾವುದೇ ತಂದೆಯ ರೀತಿಯಲ್ಲಿ ನನಗೆ ಕೂಡ ಆಘಾತ ಆಯಿತು. ರನ್ಯಾ ನಮ್ಮ ಜೊತೆ ವಾಸ ಮಾಡುತ್ತಿಲ್ಲ. ಗಂಡನ ಜೊತೆ ಅವಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾಳೆ’ ಎಂದು ರಾಮಚಂದ್ರ ರಾವ್ ಅವರು ಹೇಳಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ರನ್ಯಾ ವಿವಾಹ ನಡೆದಿತ್ತು.ಮಗಳ ಸಂಸಾರದಲ್ಲಿ ಏನೋ ಸಮಸ್ಯೆ ಉಂಟಾಗಿರಬಹುದು ಎಂದು ರಾಮಚಂದ್ರ ರಾವ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ‘ಕೌಟುಂಬಿಕ ಕಾರಣದಿಂದ ಅವರ ನಡುವೆ ಏನೋ ಸಮಸ್ಯೆ ಆಗಿರಬಹುದು. ಏನೇ ಆದರೂ ಕಾನೂನು ತನ್ನ ಕೆಲಸ ಮಾಡಲಿದೆ. ನನ್ನ ವೃತ್ತಿಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ. ಹೆಚ್ಚು ಏನೂ ಹೇಳಲು ನಾನು ಇಷ್ಟಪಡಲ್ಲ’ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.