ಶಿವಮೊಗ್ಗ: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡುತ್ತಾರೆ ಎಂದು ವೈಯಕ್ತಿಕವಾಗಿ ನನಗೆ ವಿಶ್ವಾಸವಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಹೇಳಿದರು.
ಕಾನೂನಿಗಿಂತಲೂ ಯಾರು ದೊಡ್ಡವರಲ್ಲ. ಸಿದ್ದರಾಮಯ್ಯ ಜೊತೆಗೆ ಈ ಹಿಂದೆ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಅವರೊಬ್ಬ ಸೂಕ್ಷ್ಮ ಮನಸ್ಸಿನ ರಾಜಕಾರಣಿ. ಇದೀಗ ಅವರ ಮೇಲೆ ತನಿಖೆಗೆ ಆದೇಶಿಸಲಾಗಿದೆ. ಸಿಎಂ ಇದನ್ನು ಅರಿತುಕೊಳ್ಳುವ ಅಗತ್ಯವಿದೆ ಎಂದು ಗುರುವಾರ ಇಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
‘ಕಾನೂನು ತನ್ನ ಪಾಡಿಗೆ ತಾನು ಕೆಲಸ ಮಾಡುತ್ತದೆ. ಹೀಗಾಗಿಯೇ ಆ ವಿಷಯದಲ್ಲಿ ನಾನು ಹೆಚ್ಚು ಮಾತನಾಡುವುದಿಲ್ಲ’ ಎಂದು ಹೇಳಿದರು.