ಮೈಸೂರು: ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಗಿ, ‘ಯಾರು ರಾಜ?’ ಎಂದು ಪ್ರಶ್ನಿಸಿದ್ದನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಸಮರ್ಥಿಸಿಕೊಂಡಿದ್ದಾರೆ.
ಈ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಹುಳುಕು ಹುಡುಕುವುದು ತಪ್ಪು. ಸಂವಿಧಾನ ಜಾರಿಯಾದ ದಿನದಿಂದ ದೇಶದಲ್ಲಿ ರಾಜ, ಮಹಾರಾಜ ಎಂಬ ಪರಿಕಲ್ಪನೆ ಇಲ್ಲ ಎಂದು ಹೇಳಿದ್ದಾರೆ. ಯದುವೀರ್ ಒಡೆಯರ್ ಮೈಸೂರು ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿರುವುದರಲ್ಲಿ ಏನು ತಪ್ಪಿಲ್ಲ. ಈಗ ದೇಶದಲ್ಲಿ ರಾಜಾಡಳಿತ ಇಲ್ಲ. ಖಾಸಗಿ ದರ್ಬಾರ್ ವೇಳೆ ಮಾತ್ರ ರಾಜರು ಅಲ್ಲಿಗೆ ಸೀಮಿತವಾಗಿ ಮಾತ್ರ ಇರುತ್ತಾರೆ. ಸಿಎಂ ಸಿದ್ದರಾಮಯ್ಯ ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತೇನೆ. ಆದರೆ ಯದುವೀರ್ ಬಗ್ಗೆ ನೀಡಿರುವ ಹೇಳಿಕೆ ವಿಚಾರದಲ್ಲಿ ಸಹಮತ ಇದೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.
ಯದುವೀರ್ ಒಡೆಯರ್ ಈಗ ಅರಮನೆಗೆ ಸೀಮಿತವಾಗಿರದೆ ಜನಪ್ರತಿನಿಧಿಯಾಗಲು ಬಂದಿದ್ದಾರೆ. ಹೀಗಾಗಿ ಸಿದ್ದರಾಮಯ್ಯ ಕರೆದಿರುವುದರಲ್ಲಿ ತಪ್ಪಿಲ್ಲ ಎಂದು ಪ್ರತಾಪ್ ಸಿಂಹ ಸಮರ್ಥನೆ ಮಾಡಿದ್ದಾರೆ.