ಬೂಟಾಟಿಕೆ ಬೊಮ್ಮಾಯಿಯ ಜಂಗಲ್ ಜಸ್ಟೀಸ್ !

Prasthutha|

ಸಮಾಜದಲ್ಲಿ ಜನರ ಭಾವನೆಗಳಿಗೆ ಧಕ್ಕೆ ಆಗದಂತೆ ನಡೆದುಕೊಳ್ಳಬೇಕಾಗುತ್ತದೆ. ಪರಸ್ಪರರ ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿಯೇ ಕ್ರಿಯೆ ಮತ್ತು ಪ್ರತಿಕ್ರಿಯೆ (action & reaction) ಇದ್ದೇ ಇರುತ್ತವೆ. ಇದು ಈ ನಾಡಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಹಿರಂಗವಾಗಿ ಆಡಿದ ಮಾತುಗಳು.!

- Advertisement -


ಈ ನಾಡಿನ ಶಾಂತಿ, ಸೌಹಾರ್ದತೆಯನ್ನು ನುಚ್ಚುನೂರು ಮಾಡ ಹೊರಟಿರುವ ಮತೀಯ ಗೂಂಡಾಗಿರಿಯನ್ನು ಇಷ್ಟೊಂದು ಹಗುರವಾಗಿ ವ್ಯಾಖ್ಯಾನಿಸಿದ ಬಸವರಾಜ ಬೊಮ್ಮಾಯಿ ಅವರು ತಾವೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದೇನೆ ಎಂಬುದನ್ನು ಮರೆತಿದ್ದಾರೆಯೇ ಅಥವಾ ಈ ಮಾತಿಗಾಗಿಯೇ ಮುಖ್ಯಮಂತ್ರಿ ಸ್ಥಾನದ ಘನತೆಯನ್ನು ಹರಾಜು ಹಾಕಿದ್ದಾರೆಯೇ ಎಂಬ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿದೆ. ರಾಜ್ಯದಲ್ಲಿ ನೈತಿಕ ಪೊಲೀಸ್ಗಿರಿ ಎನ್ನುವುದು ಒಂದು ಪಿಡುಗಾಗಿ ಜನರ ನೆಮ್ಮದಿ, ಸೌಹಾರ್ದತೆಯನ್ನು ಬಾಧಿಸುತ್ತಿರುವಾಗ ಅದನ್ನು ನಿರ್ಮೂಲನೆ ಮಾಡಬೇಕಾದ ಸರ್ಕಾರದ ಮುಖ್ಯಸ್ಥನೇ ಇದನ್ನು ‘ಕ್ರಿಯೆ ಮತ್ತು ಪ್ರತಿಕ್ರಿಯೆ’ ಎಂಬ ಕಾಡು ನ್ಯಾಯದ ಚೌಕಟ್ಟಿಗೆ ತಂದು ನಿಲ್ಲಿಸಿ ಬಿಟ್ಟಿರೆ ಜನರು ಯಾರ ಮೇಲೆ ಭರವಸೆಯನ್ನಿಡಬೇಕು?
ಬಸವರಾಜ ಬೊಮ್ಮಾಯಿ ಅವರ ಈ ಹೇಳಿಕೆಯ ಹಿನ್ನೆಲೆ, ಇದರೊಳಗೆ ಅಡಗಿರಬಹುದಾದ ರಾಜಕೀಯ ಹಿತಾಸಕ್ತಿಯನ್ನು ತಕ್ಷಣಕ್ಕೆ ಗುರುತಿಸಿಬಿಡಬಹುದು. ಹೇಗಿದ್ದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗುತ್ತಿದ್ದಂತೆ ಹೇಗಾದರು? ಅವರಿಗೊಂದು ಮುಖವಾಡವಿತ್ತಾ ? ಅಥವಾ ಸಿ.ಎಂ ಕುರ್ಚಿ ಉಳಿಸಿಕೊಳ್ಳಲು ಮುಖವಾಡವನ್ನು ಹಾಕಿಕೊಂಡರಾ? ಬಸವರಾಜ ಬೊಮ್ಮಾಯಿ ಅವರು ಜಾತಿಯಲ್ಲಿ ಸಾದರ ಲಿಂಗಾಯಿತರಾದರೂ ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ ಬಲಾಢ್ಯವಾಗಿರುವ ಪಂಚಮಶಾಲಿ ಲಿಂಗಾಯಿತ ಸಮುದಾಯದ ಜೊತೆ ಅಷ್ಟೇ ಪ್ರಬಲವಾಗಿರುವ ಮುಸ್ಲಿಂ ಸಮುದಾಯದೊಂದಿಗೂ ಹೊಂದಾಣಿಕೆ ಮಾಡಿಕೊಂಡ ಪರಿಣಾಮವೇ ಸತತವಾಗಿ ಮೂರನೇ ಬಾರಿಗೆ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿಯಾದ ಆರಂಭದಿಂದಲೂ ಸಜ್ಜನ, ಸಂವೇದನಾಶೀಲ ಎಂಬ ಬಿರುದಾವಳಿಗಳಲ್ಲಿ ಮುಳುಗಿ ಹೋಗಿದ್ದರು. ತಮ್ಮ ಮನೆಯ ನಾಯಿಯೊಂದು ಸತ್ತಿದ್ದಕ್ಕೆ ಕಣ್ಣೀರಿಟ್ಟು ಪರಿತಾಪ ಪಟ್ಟ ಅವರ ವ್ಯಕ್ತಿತ್ವವನ್ನು ಮಾಧ್ಯಮಗಳು ಕೊಂಡಾಡಿದವು. ಜನತಾ ಪರಿವಾರದ ತಾತ್ವಿಕತೆಯ ಸೊಗಡು ಅವರಿಂದ ಕಳಚಿಕೊಂಡಿಲ್ಲ ಎಂಬ ವಿಶ್ಲೇಷಣೆಗಳಿಗೆ ತುತ್ತಾಗಿ ಬೀಗಿದ್ದರು. ಯಡಿಯೂರಪ್ಪನವರ ಕೈಗೊಂಬೆಯಾಗಲಾರೆ ಎಂದು ಪರೋಕ್ಷವಾಗಿ ಹೇಳುತ್ತಲೆ ಆರೆಸ್ಸೆಸ್ನ ಕೈಗೊಂಬೆ ತಾನು ಎಂಬುದನ್ನು ಒಂದೇ ಮಾತಿನಿಂದ ಸಾರಿಕೊಂಡು ಬಿಟ್ಟಿದ್ದಾರೆ. ತಮ್ಮ ಮನೆಯ ನಾಯಿಯೊಂದು ಸತ್ತಾಗ ಮಿಡಿಯುವಷ್ಟು ಸಂವೇದನೆ ಮತೀಯ ಗೂಂಡಾಗಳ ನೈತಿಕ ಪೊಲೀಸ್ಗಿರಿಯಿಂದ ಸಂಭವಿಸುತ್ತಿರುವ ಹಿಂಸೆಯನ್ನು ವಿರೋಧಿಸುವಲ್ಲಿ ಜಡಗೊಂಡುಬಿಟ್ಟಿದ್ದಾದರೂ ಹೇಗೆ?


ಮುಖ್ಯಮಂತ್ರಿಗಳ ಈ ಕ್ರಿಯೆ ಮತ್ತು ಪ್ರತಿಕ್ರಿಯೆ ಸೂತ್ರವನ್ನೇ ಅನುಸರಿಸುವುದಾದರೆ ಭಾರತದ ಚರಿತ್ರೆಯನ್ನೊಮ್ಮೆ ಮುಂದಿಟ್ಟುಕೊಳ್ಳಬೇಕು. ಶ್ರೀರಾಮ ಶೂದ್ರ ಶಂಭೂಕನ ತಲೆ ಕಡಿದ, ದ್ರೋಣಾಚಾರ್ಯರು ಏಕಲವ್ಯನ ಹೆಬ್ಬೆರಳ ಬಲಿ ಪಡೆದರು, ಕರ್ಣನನ್ನು ಹೀನ ಕುಲದವನೆಂದು ಹೀಯಾಳಿಸಿ ಕೊನೆಗೆ ವಂಚನೆಯಿಂದ ಕೊಂದರು, ವರ್ಣಾಶ್ರಮ ಪದ್ಧತಿಯನ್ನು ಜಾರಿಗೊಳಿಸಿ ತಮ್ಮಂತೆ ಇರುವ ಮನುಷ್ಯರನ್ನು ಅಮಾನುಷವಾಗಿ ಹತ್ಯೆ, ಅತ್ಯಾಚಾರಗಳಿಂದ ಆಳಿಕೊಂಡು ಬರಲಾಗುತ್ತಿದೆ. ಕಲ್ಯಾಣದಲ್ಲಿ ಮಾನವ ತತ್ವ ಸಾರಿದ ಶರಣರನ್ನು ಎಳೆಹೊಟ್ಟೆ ಎಳೆಸಿ ನಿರ್ದಯವಾಗಿ ಕೊಲ್ಲಲಾಯಿತು. ಅಲ್ಲಿಂದ ಮುಂದುವರೆದು ಇಂದಿನವರೆಗೂ ದಲಿತರು ಕುದುರೆ ಸವಾರಿ ಮಾಡಿದ್ದಕ್ಕೆ, ದೇವಸ್ಥಾನದ ಜಗುಲಿಯ ಮೇಲೆ ಕುಳಿತಿದ್ದಕ್ಕೆ, ಮೇಲ್ಜಾತಿಯ ಹುಡುಗಿಯನ್ನು ಪ್ರೀತಿಸಿದ್ದಕ್ಕೆ, ಬಡ ಮುಸ್ಲಿಮನೊಬ್ಬ ತನ್ನ ಹಸಿವಿಗಾಗಿ ತುಂಡು ಮಾಂಸ ಸಂಗ್ರಹಿಸಿಟ್ಟುಕೊಂಡಿದ್ದಕ್ಕೆ ಕೊಲ್ಲಲಾಯಿತು, ಸತ್ತದನದ ಚರ್ಮ ಸುಲಿದಿದ್ದಕ್ಕೆ ನಡುಬೀದಿಯಲ್ಲಿ ಐಷಾರಾಮಿ ಕಾರಿಗೆ ಕಟ್ಟಿ ಮನುಷ್ಯರ ಚರ್ಮ ಸುಲಿಯುವಂತೆ ಬಡಿಯಲಾಯಿತು, ಕಾಶ್ಮೀರದ ಕಣಿವೆಯ ದೇವಸ್ಥಾನದಲ್ಲೇ ಹಸುಗೂಸೊಂದನ್ನು ಬರ್ಬರವಾಗಿ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಯಿತು, ಹತ್ರಾಸ್ ನಲ್ಲಿ ಜಾತಿಯ ಕಾರಣಕ್ಕಾಗಿಯೇ ದಲಿತ ಯುವತಿಯ ರೇಪ್ ಮಾಡಿ, ಪ್ರಭುತ್ವವೇ ಮುಂದೆ ನಿಂತು ರಾತ್ರೋರಾತ್ರಿ ಸುಟ್ಟು ಬಿಟ್ಟಿತು, ಪ್ರಭುತ್ವವನ್ನು ಪ್ರಶ್ನಿಸಿದರೆ ಭಯೋತ್ಪಾದಕ ಪಟ್ಟ ಕಟ್ಟಿ ವಿಚಾರಣೆ ಇಲ್ಲದೆ ಜೈಲಿನಲ್ಲಿಡಲಾಗುತ್ತಿದೆ. ಇವೆಲ್ಲವೂ ಈ ಸಮಾಜದ ಬಹುಜನರ ಭಾವನೆಗಳಿಗೆ ಧಕ್ಕೆ ತರುತ್ತಿರುವ ಕ್ರೌರ್ಯ, ಮತ್ತು ಕಾನೂನು ಬಾಹಿರ ಕ್ರಿಯೆ.

- Advertisement -


ಜಾತಿ, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಇಂತಹ ಕುಕ್ರಿಯೆಗಳನ್ನು ಹತ್ತಿಕ್ಕಬೇಕಾದ ಮತ್ತು ಸಂವಿಧಾನದ ಪರಿಚಾರಕನಂತೆ ಸಮಸಮಾಜ, ಸೌಹಾರ್ದ ನಾಡು ಕಟ್ಟಬೇಕಾದ ಮುಖ್ಯಮಂತ್ರಿಯವರು ಮತೀಯ ಶಕ್ತಿಗಳ ಪರಮ ಪಕ್ಷಪಾತಿಯಂತೆ ನಡೆದುಕೊಳ್ಳುತ್ತಿರುವುದು, ಕುರ್ಚಿ ಉಳಿಸಿಕೊಳ್ಳಲು ಆರ್ಎಸ್ಎಸ್ ನ ಮಡಿಲ ಮಗುವಾಗಲು ತಹತಹಿಸುತ್ತಿರುವುದು ಈ ರಾಜ್ಯದ ದೌರ್ಭಾಗ್ಯ ಅಂತ ಯಾರಿಗಾದರೂ ಅನಿಸಿದರೆ ತಪ್ಪೇನು?!
ಮುಖ್ಯಮಂತ್ರಿ ಸ್ಥಾನ ಬಸವರಾಜ ಬೊಮ್ಮಾಯಿ ಅವರಿಗೆ ಬಯಸದೆ ಬಂದ ಭಾಗ್ಯ. ಯಡಿಯೂರಪ್ಪ ಅವರ ಪದಚ್ಯುತಿಯ ಫಲವಾಗಿ ದಕ್ಕಿದ ಮುಖ್ಯಮಂತ್ರಿ ಪದವಿಯ ಘನತೆಯನ್ನು, ರಾಜಧರ್ಮವನ್ನು ಕ್ಷಣ ಮಾತ್ರದಲ್ಲಿ ಗಟಾರಕ್ಕೆ ಎಸೆದುಬಿಟ್ಟರು. ಬೆಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ನಡೆದ ನೈತಿಕ ಪೊಲೀಸ್ ಗಿರಿಯಲ್ಲಿ ಸರ್ಕಾರದ ಪಕ್ಷಪಾತ ನಡೆ ಬೆತ್ತಲಾಗಿದ್ದು ಬಸವರಾಜ ಬೊಮ್ಮಾಯಿ ಹಿಂದೂ ಕೋಮುಶಕ್ತಿಗಳ ಅಡಿಯಾಳು ಎಂಬುದನ್ನು ಸಾಬೀತು ಪಡಿಸಿದೆ. ಬೆಂಗಳೂರಿನಲ್ಲಿ ಮುಸ್ಲಿಮ್ ಕೋಮುವಾದಿಗಳು ನೈತಿಕಗಿರಿಯ ವಿರುದ್ಧ ಕಠಿಣ ಕ್ರಮ ಕೈಗೊಂಡ ಸರ್ಕಾರ , ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ನೈತಿಕ ಪೊಲೀಸ್ ಗಿರಿ ವಿರುದ್ಧ ಮೆದು ಧೋರಣೆಯ ಮುಲಾಮು ಹಚ್ಚಿತು. ಮತೀಯ ಗೂಂಡಾಗಳನ್ನು ದಿನದೊಪ್ಪತ್ತಿನಲ್ಲಿ ಜಾಮೀನು ಮೇಲೆ ಬಿಡುಗಡೆ ಆಗುವಂತೆ ನೋಡಿಕೊಂಡಿತು. ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರೊಬ್ಬರು ಲಜ್ಜೆ ಇಲ್ಲದೆ ಖುದ್ದಾಗಿ ಜೈಲಿಗೆ ಹೋಗಿ ಜಾಮೀನು ಮೇಲೆ ಹಿಂದುತ್ವ ಗೂಂಡಾಗಳನ್ನು ಬಿಡಿಸಿಕೊಂಡು ಬಂದಿರುವುದನ್ನು ಈ ರಾಜ್ಯ ನೋಡಿತು. ಕೋಮುವಾದ ಕೋಮುವಾದವೇ ಆಗಿರುತ್ತದೆ. ಈ ಕೋಮುವಾದಿಗಳು ಯಾವ ಧರ್ಮಕ್ಕೂ ಸೇರಿದವರಲ್ಲ, ಅವರು ಸಮಾಜಘಾತುಕರಷ್ಟೇ ಆಗಿರುತ್ತಾರೆ. ಆದರೆ ಇಂತಹ ಘಾತುಕರಿಗೆ ಪ್ರಭುತ್ವವೇ ಬೆಂಗಾವಲಾಗಿ ನಿಂತು ಬಿಟ್ಟಿರೆ ಸಂಭವಿಸಬಹುದಾದ ಹಿಂಸೆ, ಸಾವು -ನೋವುಗಳೆಂತವು ಎಂಬುದನ್ನು 2002ರಲ್ಲಿ ಗುಜರಾತ್ ನಲ್ಲಿ ನಡೆದ ನರಮೇಧದ ಚರಿತ್ರೆ ನಮ್ಮ ಮುಂದೆ ಇದೆ.


ಈ ಹಿನ್ನೆಲೆಯಲ್ಲಿ ನೋಡುವಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ರಿಯೆ ಮತ್ತು ಪ್ರತಿಕ್ರಿಯೆ ಹೇಳಿಕೆ ಮತೀಯ ಗೂಂಡಾಗಿರಿಗೆ ನೈತಿಕ ಬೆಂಬಲವನ್ನಷ್ಟೆ ಅಲ್ಲ, ಕಾನೂನು ಬೆಂಬಲವನ್ನು ಧಾರೆ ಎರೆದ ಅಪಾಯಕಾರಿ ಮತ್ತು ತಾನು ಸ್ವೀಕರಿಸಿದ ಪ್ರಮಾಣವಿಧಿಯ ಉಲ್ಲಂಘನೆ. ಈ ಹೇಳಿಕೆ ಭವಿಷ್ಯದಲ್ಲಿ ಸಂಭವಿಸಬಹುದಾದ ಮತೀಯ ಸಂಘರ್ಷದ ಮುನ್ನುಡಿಯಂತೆಯೂ ಇರಬಹುದು. ಬಾಧಿತರ ದೂರು ಸ್ವೀಕರಿಸಬೇಕಾದ ದೊರೆಯೇ ದುಷ್ಟನಾಗಿಬಿಟ್ಟರೆ ಊರಿನ ಹಂತಕರೆಲ್ಲಾ ದೊರೆಯ ನೆಂಟರಾಗಿ ಮೆರೆದಾಡುತ್ತಾರೆ. ಈಗ ಆಗುತ್ತಿರುವುದು ಇದೇ ಆಗಿದೆ. ಬಸವರಾಜ ಬೊಮ್ಮಾಯಿ ತನ್ನ ಅಪಾಯಕಾರಿ ಹೇಳಿಕೆಯಿಂದ ರವಾನೆಯಾದ ಸಂದೇಶದ ಪರಿಣಾಮವನ್ನು ಈ ಹೊತ್ತಿಗೂ ಯೋಚಿಸಿದಂತೆ ಕಂಡು ಬರುತ್ತಿಲ್ಲ. ಬದಲಾಗಿ ಈ ಹೇಳಿಕೆಯನ್ನು ಖಂಡಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನೇ ಹಿಂದೂ ವಿರೋಧಿ ಐಕಾನ್ ಎಂದು ಟೀಕಿಸುವ ಮೂಲಕ ಅಸಂವೇದನಾ ಶೀಲದ ಗುಂಪಿನ ಅಡಿಯಾಳಿನಂತೆ ಹಿಂದೂ ಮತೀಯ ಗೂಂಡಾಗಳನ್ನು ಪ್ರಚೋದಿಸುವ ಕೆಲಸಕ್ಕಿಳಿದಿದ್ದಾರೆ.
ಬಸವರಾಜ ಬೊಮ್ಮಾಯಿ ಮಾತು ಉದ್ದೇಶಪೂರ್ವಕವಾಗಿಯೇ ಆಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ತಮ್ಮ ಹೇಳಿಕೆಗೆ ಅವರು ಬದ್ಧರಾಗಿರುವುದನ್ನು ಅವರ ದೇಹ ಭಾಷೆ, ಮುಂದುವರೆದ ಮಾತುಗಳೇ ಸಾಬೀತು ಪಡಿಸುತ್ತಿವೆ. ಈ ಮೂಲಕ ಅವರು ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳುವ ಭವಿಷ್ಯದಲ್ಲಿ ಬಿಜೆಪಿಯ ಮುಂಚೂಣಿ ನಾಯಕನಾಗಿಯೇ ಮುಂದುವರೆಯುವ ಮಹತ್ವಾಕಾಂಕ್ಷೆಗೆ ತಮ್ಮನ್ನು ತಾವು ಅಣಿಗೊಳಿಸಿಕೊಳ್ಳುತ್ತಿರುವುದನ್ನು ಮರೆಮಾಚಲಾಗುವುದಿಲ್ಲ. ಜನರೆ ತಮ್ಮ ಭಾವನೆಗಳಿಗೆ ಧಕ್ಕೆಯಾದಾಗ ಕ್ರಿಯೆ ಮತ್ತು ಪ್ರತಿಕ್ರಿಯೆಯಲ್ಲಿ ತೊಡಗಿಬಿಡುವುದಾದರೆ ಈ ರಾಜ್ಯದಲ್ಲಿ ಕಾನೂನು, ಕಟ್ಟಳೆಗಳು, ನ್ಯಾಯಪೀಠಗಳಾದರೂ ಏಕೆ ಬೇಕು, ಯಾಕಾದರೂ ಮುಖ್ಯಮಂತ್ರಿ, ಸರ್ಕಾರ ಅಸ್ತಿತ್ವದಲ್ಲಿರಬೇಕು?


ಯಡಿಯೂರಪ್ಪಅವರ ಪದಚ್ಯುತಿ ಆರ್ಎಸ್ಎಸ್ ನ ನಿರ್ದೇಶನದಂತೆ ನಡೆದುಹೋಗಿದೆ. ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ ನ ಅಡಿಯಾಳಾಗುವುದು ಒಂದು ಸವಾಲಿನ ಕೆಲಸ, ಅದನ್ನು ಮನಸಾರೆ ಸ್ವೀಕರಿಸಲು ಅಣಿಯಾಗಿದ್ದಂತೆ ಕಂಡು ಬರುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಪ್ರಭಾವಳಿಯಿಂದ ಹೊರಬಂದು ತಮ್ಮ ನಾಯಕತ್ವವನ್ನು ಸಾಬೀತು ಪಡಿಸಿಕೊಳ್ಳಬೇಕಾಗಿದೆ ನಿಜ, ಆದರೆ ಅದಕ್ಕಿಂತ ಮುಖ್ಯವಾಗಿ ಬಸವರಾಜ ಬೊಮ್ಮಾಯಿ ಆರ್ಎಸ್ಎಸ್ನ ಜೀತದಾಳುವಾಗಿ ದುಡಿಯಬೇಕಿದೆ. ಮೂಲತಃ ಜನತಾ ಪರಿವಾರದವರಾದ ಬಸವರಾಜ ಬೊಮ್ಮಾಯಿ ಅವರು ಆರಂಭದಲ್ಲಿ ಸಮನ್ವಯದಿಂದ ನಾಜೂಕಾಗಿ ರಾಜ್ಯಭಾರ ಮಾಡಲಿದ್ದಾರೆ ಎಂದು ಭಾವಿಸಿದ್ದ ಜನರಿಗೆ ಅವರ ಬಣ್ಣ ಬಯಲಾಗಲು ಹೆಚ್ಚು ಕಾಲ ಬೇಕಾಗಿಲ್ಲ. ಹಿಂದೂ ರಾಷ್ಟ್ರವಾದ ಪ್ರೇಣಿತ (ಮನುವಾದ) ರಾಷ್ಟ್ರೀಯ ಶಿಕ್ಷಣನೀತಿ, ಹಿಂದೂ ಮತೀಯ ಗೂಂಡಾಗಳ ಮೇಲಿನ ಕೇಸುಗಳ ಹಿಂಪಡೆಯುವಿಕೆ, ಹಾಗೂ ಮತೀಯ ಗೂಂಡಾಗಿರಿಯನ್ನು ಬೆಂಬಲಿಸುವಂತಹ ಕ್ರಿಯೆ ಮತ್ತು ಪ್ರತಿಕ್ರಿಯೆ ಹೇಳಿಕೆ ಬಸವರಾಜ ಬೊಮ್ಮಾಯಿಯೊಳಗಿನ ನಾಗಪುರದ ಗುಲಾಮನನ್ನು ಹೊರಚಿಮ್ಮಿತು. ಓರ್ವ ಕಟ್ಟರ್ ಆರೆಸ್ಸೆಸ್ಸಿಗನಿಗಿಂತಲೂ ಮಿಗಿಲಾದ ಉತ್ಸಾಹದಲ್ಲಿರುವ ಬಸವರಾಜ ಬೊಮ್ಮಾಯಿಯ ಬೂಟಾಟಿಕೆಯ ಮುಖವಾಡ ಕಳಚಿದೆ.
ಬಸವರಾಜ ಬೊಮ್ಮಾಯಿ ಅವರ ಕ್ರಿಯೆ ಮತ್ತು ಪ್ರತಿಕ್ರಿಯೇ ಸೂತ್ರವನ್ನೆ ಅಳವಡಿಸಿಕೊಳ್ಳುವುದಾದರೆ ಬಹುಶಃ ಪ್ರತಿಕ್ರಿಯೆಯ ಪ್ರತಿಕಾರದ ಧಗೆಯಲ್ಲಿ ರಾಜ್ಯ ರಣರಂಗವಾಗಿಬಿಡುವ ಊಹೆಯೇ ಎದೆನಡುಗಿಸಿ ಬಿಡುತ್ತದೆ. ವರ್ತಮಾನ ಭಾರತ ಭಯ, ಹಿಂಸೆ, ಸುಳ್ಳುಗಳಿಂದ ಆಳಲ್ಪಡುತ್ತಿರುವಾಗ ಅದೇ ಹಾದಿಯಲ್ಲಿ ಈ ರಾಜ್ಯದ ಮುಖ್ಯಮಂತ್ರಿ ತನ್ನ ಕುರ್ಚಿ ಉಳಿಸಿಕೊಳ್ಳಲು ಮತೀಯ ಶಕ್ತಿಯ ಸಂತೃಪ್ತಿಗೆ ಮುಂದಾಗಿರುವುದು ಇದಕ್ಕಿಂತ ನಿರ್ಲಜ್ಯಗೇಡಿತನ ಇನ್ನೊಂದಿರಲಾರದು. ಮುಖ್ಯಮಂತ್ರಿಗಳ ತಂದೆ ಎಸ್.ಆರ್. ಬೊಮ್ಮಾಯಿ ಅವರು ಜನತಾಪರಿವಾರದಲ್ಲಿದ್ದಷ್ಟು ದಿನ ಆ ಪಕ್ಷದ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದರು. ಒಂದು ಹಂತದವರೆಗೂ ಬಿಜೆಪಿಯನ್ನು ವಿರೋಧಿಸಿದ್ದರು. ಅವರಲ್ಲೊಂದು ತಾತ್ವಿಕ ಬದ್ಧತೆಯಿತ್ತು. ಆದರೆ ಅವೆಲ್ಲವನ್ನೂ ಅವರ ಮಗ ಬಸವರಾಜ ಬೊಮ್ಮಾಯಿ ಅವರಲ್ಲಿಯೂ ನಿರೀಕ್ಷಿಸುವುದು ಒಂದು ಭ್ರಮೆಯಷ್ಟೆ ಎನ್ನಬಹುದು.


ಬಸವರಾಜ ಬೊಮ್ಮಾಯಿ ಮೂಲತಃ ಆರ್ಎಸ್ಎಸ್ ಅಲ್ಲದಿದ್ದರೂ ಅವರೋರ್ವ ಅವಕಾಶವಾದಿ ರಾಜಕಾರಣಿ. ಈಗ ದಕ್ಕಿರುವ ಮುಖ್ಯಮಂತ್ರಿ ಸ್ಥಾನ ಅಬಾಧಿತವಾಗಿ ಸಂಭಾಳಿಸಿಕೊಳ್ಳಲು ಮೂಲ ಸಂಘಪರಿವಾರಿಗಳಿಗಿಂತಲೂ ಮಿಗಿಲಾಗಿ ನಡವಳಿಕೆ, ನಿಷ್ಠೆಯನ್ನು ಮೈಗೂಡಿಸಿಕೊಳ್ಳಲು ಹಿಂಜರಿಯದವರು ಎಂಬುದು ಅವರ ಹೇಳಿಕೆಯಿಂದಲೇ ನಿಚ್ಚಳವಾಗಿದೆ. ಅಧಿಕಾರ ದಂಡ ಹಿಡಿದವರು ಸಂವಿಧಾನ ಬದ್ಧ ಪ್ರಮಾಣವಚನಕ್ಕೆ ಬದ್ಧರಾಗಿರಬೇಕು ಎಂಬ ಹೊಣೆಗಾರಿಕೆಯ ಪ್ರಜ್ಞೆಯಿಂದ ಬಸವರಾಜ ಬೊಮ್ಮಾಯಿ ಜಾರಿಬೀಳತೊಡಗಿದ್ದಾರೆ. ‘ಅಳಿಯನ ಕುರುಡು ತಿಳಿಯಲು ಕತ್ತಲಾಗಬೇಕು’ ಎಂಬ ಗಾದೆ ಈ ಹೊತ್ತಿಗೆ ನೆನಪಾಗುತ್ತಿದೆ. ಯಡಿಯೂರಪ್ಪ ಅವರ ಉತ್ತರಾಧಿಕಾರಿಯಂತೆ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯ ಕುರುಡುತನ ತಿಳಿಯಲು ಕತ್ತಲಾಗಬೇಕಿಲ್ಲ. ಹಗಲಿನಲ್ಲೇ ಬಯಲಾಗಿ ಹೋಗಿದೆ.


ಬಿಜೆಪಿ, ಆರ್ಎಸ್ಎಸ್ ನ ರಾಜಕೀಯ ಸಂಘಟನೆ. ಆರ್ಎಸ್ಎಸ್ ತನ್ನ ಅಜೆಂಡಾವನ್ನು ಬಿಜೆಪಿ ಮೂಲಕ ಅನುಷ್ಠಾನಗೊಳಿಸುವ ಉದ್ದೇಶವನ್ನು ಹೊಂದಿದೆ ಎಂಬುದು ಅದರ ಅಂತರಂಗವನ್ನು ಬಲ್ಲವರಿಗೆ ಹೊಸತೇನಲ್ಲ. ಇದನ್ನೆ ಖ್ಯಾತ ನ್ಯಾಯವಾದಿ. ಸಂವಿಧಾನ ತಜ್ಞ, ರಾಜಕೀಯ ವಿಮರ್ಶಕರಾದ ಎ.ಜಿ. ನೂರಾನಿ ಅವರು ತಮ್ಮ ‘ಆರ್ಎಸ್ಎಸ್ ಮತ್ತು ಬಿಜೆಪಿ’ ಕೃತಿಯಲ್ಲಿ ಬರೆಯುತ್ತಾರೆ. ಬಿಜೆಪಿ ಜನಾಡಳಿತದ ನೇತೃತ್ವ ವಹಿಸಿಕೊಂಡಂತಹ ಸಂದರ್ಭಗಳಲ್ಲಿ ಪಕ್ಷದ ಮೇಲೆ ಅಧಿಕಾರ ಚಲಾಯಿಸುವ ಬಹುತಲೆಗಳ ರಾಕ್ಷಸನೆಂದರೆ ಇದೇ ಆರ್ಎಸ್ಎಸ್.


ಇಂತಹ ಬಹುತಲೆ ರಾಕ್ಷಸನನ್ನು ಬಸವರಾಜ ಬೊಮ್ಮಾಯಿ ಸಂಪ್ರೀತಿಗೊಳಿಸಲು ಹೊರಟರೆ ಅದಕ್ಕಿಂತ ಘೋರ ಜನದ್ರೋಹ ಇನ್ನೊಂದಿರಲಾರದು ಎಂಬುದನ್ನು ಬಸವಾದಿ ಶರಣರ ಪರಂಪರೆಯ ಬಸವರಾಜ ಬೊಮ್ಮಾಯಿ ಅವರು ಅರ್ಥಮಾಡಿಕೊಳ್ಳಬೇಕು. ನೈತಿಕತೆ ಎಂಬುದು ಈ ರಾಜ್ಯದ ಜನರನ್ನು ಜಾತಿ, ಧರ್ಮ ಭೇದವಿಲ್ಲದೆ ಸಮಾನವಾಗಿ ಕಾಣುತ್ತೇನೆ ಎಂದು ಸಂವಿಧಾನಬದ್ಧ ಪ್ರಮಾಣವಚನ ಸ್ವೀಕರಿಸಿದ ಬಸವರಾಜ ಬೊಮ್ಮಾಯಿ ಅವರಿಗೂ ಇರಬೇಕಾದ ಪ್ರಜ್ಞೆ ಮತ್ತು ಹೊಣೆಗಾರಿಕೆಯಲ್ಲವೇ?
ಕೊನೆ ಮಾತು: ಯಡಿಯೂರಪ್ಪಆರ್ಎಸ್ಎಸ್ಗೆ ಅಪಥ್ಯವಾಗಿದ್ದರು, ಕಾರಣ ಯಡಿಯೂರಪ್ಪ ಅವರು ಆರ್ಎಸ್ಎಸ್ನ ತಾಳಕ್ಕೆ ತಕ್ಕಂತೆ ಕುಣಿಯಲಿಲ್ಲ. ರಾಜ್ಯದಲ್ಲಿ ಕೊರೋನಾ ಕಾಲಿಟ್ಟಿದ್ದು ತಬ್ಲಿಗಿಗಳಿಂದ ಎಂಬ ಹಸಿಸುಳ್ಳು, ಹಿಂಸೆಯನ್ನು ಪ್ರಚೋದಿಸುವ ದೊಡ್ಡ ಷಡ್ಯಂತ್ರ ಹಿಂದೂ ಮತೀಯವಾದಿಗಳಿಂದ ಆರಂಭಗೊಂಡಿತು. ಮುಂದುವರೆದ ಭಾಗವಾಗಿ ಗೋ ಸಂರಕ್ಷಣೆ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ನೈತಿಕ ಪೊಲೀಸ್ಗಿರಿಯ ದಾಳಿಗಳು ನಡೆಯತೊಡಗಿದವು. ರಾಜ್ಯದ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ರಾಜ್ಯದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿ ನಡೆಯುವುದನ್ನು ಸಹಿಸಿಕೊಳ್ಳಲಾಗದು, ಅಂತಹವರ ಮೇಲೆ ಕಠಿಣ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಘೋಷಿಸುವ ಮೂಲಕ ಆ ಮಟ್ಟಿಗಾದರೂ ರಾಜಧರ್ಮವನ್ನು ಪಾಲಿಸಿದರು.
ಆದರೆ ಯಡಿಯೂರಪ್ಪಅವರ ಉತ್ತರಾಧಿಕಾರಿಯಾಗಿ ಬಂದ ಬಸವರಾಜ ಬೊಮ್ಮಾಯಿ ಎಂಬ ಮನುಷ್ಯ ನೈತಿಕ ಪೊಲೀಸ್ಗಿರಿಯನ್ನು ಕ್ರಿಯೆ ಮತ್ತು ಪ್ರತಿಕ್ರಿಯೆ ಎಂಬ ಕಾಡುನ್ಯಾಯದ ಜಗುಲಿಗೆ ತಂದು ಸಮರ್ಥಿಸಿಕೊಂಡಿದ್ದು ಈ ನಾಡಿನ ದುರಂತ.
ಬಿಜೆಪಿಯ ಮಟ್ಟಿಗೆ ಹೇಳುವುದಾದರೆ ಎಲ್ಲಿಯ ಯಡಿಯೂರಪ್ಪ, ? ಎಲ್ಲಿಯ ಬಸವರಾಜ ಬೊಮ್ಮಾಯಿ?!

Join Whatsapp