ಹೈದರಾಬಾದ್‌| ಟಿ20 ಸರಣಿ ಜಯಕ್ಕೆ ಭಾರತ-ಆಸ್ಟ್ರೇಲಿಯಾ ನಡುವೆ ʻಬಿಗ್‌ ಫೈಟ್‌ʼ

ಭಾರತ-ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ʻಫೈನಲ್‌ʼ ಣಭಾನುವಾರ ಹೈದರಾಬಾದ್‌ನಲ್ಲಿ ನಡೆಯಲಿದೆ. ಟಿ20 ವಿಶ್ವಕಪ್‌ ಟೂರ್ನಿಗೆ ಪೂರ್ವಭಾವಿಯಾಗಿ ನಡೆಯುತ್ತಿರುವ ಸರಣಿಯನ್ನು ಗೆಲ್ಲಲ್ಲು ಎರಡೂ ತಂಡಗಳು ಹುಮ್ಮಸ್ಸಿನಲ್ಲಿದ್ದು, ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.

ಹೈದರಾಬಾದ್‌ನ  ವಿದರ್ಭ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಿರ್ಣಾಯಕ ಪಂದ್ಯ ನಡೆಯಲಿದ್ದು, ರಾತ್ರಿ 7 ಗಂಟೆಗೆ ಪಂದ್ಯ ಪ್ರಾರಂಭವಾಗಲಿದೆ.

- Advertisement -

ಮೊದಲ ಪಂದ್ಯದಲ್ಲಿ 6 ವಿಕೆಟ್‌ ಅಂತರದಲ್ಲಿ ಪ್ರವಾಸಿಗರಿಗೆ ಶರಣಾಗಿದ್ದ ರೋಹಿತ್‌ ಪಡೆ, ಮಳೆಯಿಂದಾಗಿ 8 ಓವರ್ಗಳಿಗೆ ಸೀಮಿತವಾಗಿದ್ದ ಎರಡನೇ ಪಂದ್ಯದಲ್ಲಿ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ಜಯಭೇರಿ ಬಾರಿಸಿತ್ತು. ಜಸ್‌ಪ್ರೀತ್‌ ಬುಮ್ರಾ ತಂಡಕ್ಕೆ ಮರಳಿರುವುದು ಮತ್ತು ಅಕ್ಷರ್‌ ಪಟೇಲ್‌ ಬಿಗು ಸ್ಪಿನ್‌ ದಾಳಿ ದುರ್ಬಲವಾಗಿದ್ದ ಬೌಲಿಂಗ್‌ ವಿಭಾಗಕ್ಕೆ ಬಲ ತುಂಬಿದೆ. ಅದಾಗಿಯೂ ಹರ್ಷಲ್‌ ಪಟೇಲ್‌ ದುಬಾರಿಯಾಗುತ್ತಿರುವುದು ಚಿಂತೆಯುಂಟು ಮಾಡಿದೆ.

ಸರಣಿ ಜಯಕ್ಕೆ 9 ವರ್ಷಗಳ ಕಾತರ

2013ರ ಬಳಿಕ ಆಸ್ಟ್ರೇಲಿಯಾ ವಿರುದ್ಧ ತಮ್ಮದೇ ನೆಲದಲ್ಲಿ ಟೀಮ್‌ ಇಂಡಿಯಾ ಸರಣಿ ಗೆದ್ದಿಲ್ಲ.  ಕಳೆದ 9 ವರ್ಷಗಳ ಕಾತರಕ್ಕೆ ಹೈದರಾಬಾದ್‌ನಲ್ಲಿ ಶುಭಾಪ್ತಿಯಾಗುವ ವಿಶ್ವಾಸದಲ್ಲಿ ಟೀಮ್‌ ಇಂಡಿಯಾ ಅಭಿಮಾನಿಗಳಿದ್ದಾರೆ. ಉಭಯ ತಂಡಗಳ ಮಧ್ಯೆ ಇದುವರೆಗೂ ಒಟ್ಟು 25 ಟಿ20 ಪಂದ್ಯಗಳು ನಡೆದಿದ್ದು, 13ರಲ್ಲಿ ಭಾರತ ಮತ್ತು 11ರಲ್ಲಿ ಆಸ್ಟ್ರೇಲಿಯಾ ಗೆಲುವು ಸಾಧಿಸಿದೆ. ಭಾರತದ ನೆಲದಲ್ಲಿ ಆಡಿರುವ 8 ಪಂದ್ಯಗಳಲ್ಲಿ ತಲಾ ನಾಲ್ಕು ಪಂದ್ಯಗಳಲ್ಲಿ ಉಭಯ ತಂಡಗಳು ಗೆಲುವು ಕಂಡಿದೆ. ಕಳೆದ 6 ಪಂದ್ಯಗಳಲ್ಲಿ ಆಸ್ಟ್ರೇಲಿಯಾ 4 ಪಂದ್ಯಗಳಲ್ಲಿ ಮತ್ತು ಭಾರತ 2 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ತಂಡದ ಸಮತೋಲನ ಸಮಸ್ಯೆ

ಟಿ20 ವಿಶ್ವಕಪ್‌ ಟೂರ್ನಿ ಆರಂಭವಾಗಲು ಕೆಲ ವಾರಗಳಷ್ಟೇ ಉಳಿದಿದೆ. ಆದರೆ ಇದುವರೆಗೂ ಬಲಿಷ್ಠ 11ರ ಬಳಗವನ್ನು ಅಂತಿಮಗೊಳಿಸಲು ದ್ರಾವಿಡ್‌-ರೋಹಿತ್‌ ಜೋಡಿಗೆ ಇನ್ನೂ ಸಾಧ್ಯವಾಗಿಲ್ಲ. ಅಗ್ರ ಕ್ರಮಾಂಕದ ನಾಲ್ವರ ಆಯ್ಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಆದರೆ 5ನೇ ಸ್ಥಾನದ ಗೊಂದಲ ಮುಂದುವರಿದಿದೆ. ದಿನೇಶ್‌ ಕಾರ್ತಿಕ್‌-ರಿಷಭ್‌ ಪಂತ್‌ ನಡುವೆ ಆಯ್ಕೆ ತಲೆನೋವು ತಂದಿಟ್ಟಿದೆ. ಮತ್ತೊಂದೆಡೆ ದುರ್ಬಲ ಬೌಲಿಂಗ್‌ ವಿಭಾಗ ಮತ್ತಷ್ಟು ಚಿಂತೆಯನ್ನುಂಟುಮಾಡಿದೆ.

ಸಂಭಾವ್ಯ ಹನ್ನೊಂದರ ಬಳಗ

ಭಾರತ XI: ರೋಹಿತ್ ಶರ್ಮಾ(ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್(ವಿಕೆಟ್‌ ಕೀಪರ್), ಅಕ್ಸರ್ ಪಟೇಲ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಉಮೇಶ್ ಯಾದವ್, ಯಜುವೇಂದ್ರ ಚಾಹಲ್

ಆಸ್ಟ್ರೇಲಿಯಾ XI: ಆರನ್ ಫಿಂಚ್ (ನಾಯಕ), ಕ್ಯಾಮೆರಾನ್ ಗ್ರೀನ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಟಿಮ್ ಡೇವಿಡ್, ಮ್ಯಾಥ್ಯೂ ವೇಡ್ (ವಿಕೆಟ್‌ ಕೀಪರ್), ಪ್ಯಾಟ್ ಕಮಿನ್ಸ್, ನಾಥನ್ ಎಲ್ಲಿಸ್, ಆಡಮ್ ಝಂಪಾ, ಜೋಶ್ ಹ್ಯಾಜಲ್‌ವುಡ್

- Advertisement -