ಪತ್ನಿಯನ್ನು ಕೊಲೆಗೈದ ಪತಿ; ಮಗು ನೀಡಿದ ಸುಳಿವಿನ ಮೇರೆಗೆ ಆರೋಪಿಯನ್ನು ಬಂಧಿಸಿದ ಪೊಲೀಸರು

ಅಮರಾವತಿ: ಪತ್ನಿಯನ್ನು ಕೊಲೆ ಮಾಡಿ ಹೃದಯಾಘಾತದ ನಾಟಕ ಮಾಡಿದ್ದ ಪತಿ ಮಹಾಶಯನನ್ನು ಪೊಲೀಸರು ಬಂಧಿಸಿದ ಘಟನೆ ಆಂಧ್ರಪ್ರದೇಶದ ಕಾಕಿನಾಡ್‌ನಲ್ಲಿ ನಡೆದಿದೆ.


ಆರೋಪಿ ಒಡಿಶಾ ಮೂಲದ ಮಣಿಕ್ ಘೋಷ್ ಎಂಬಾತನನ್ನು ಆತನ ಮೂರುವರೆ ವರ್ಷದ ಮಗು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಬಂಧಿಸಿದ್ದಾರೆ.

- Advertisement -


ಪತ್ನಿ ಲಿಪಿಕಾ ಮತ್ತು ಮಗು ಕೃಷಿಕಾ ಘೋಷ್‌ ಜೊತೆ ಜೀವನ ಮಾಡುತ್ತಿದ್ದ ಮಣಿಕ್ ಘೋಷ್ ಇದ್ದಕ್ಕಿದ್ದಂತೆ ಪತ್ನಿಯ ಮನೆಯವರಿಗೆ ಕರೆ ಮಾಡಿ ಲಿಪಿಕಾ ಎದೆನೋವಿನಿಂದ ಮೃತಪಟ್ಟಿರುವುದಾಗಿ ಹೇಳಿದ್ದಾನೆ. ಅಳಿಯನ ಮಾತನ್ನು ನಂಬಿದ ಲಿಪಿಕಾ ಪೋಷಕರು ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸದೆ ಮಗಳ ಅಂತ್ಯಸಂಸ್ಕಾರ ನಡೆಸಿಮೊಮ್ಮಗಳನ್ನು ಕರೆದುಕೊಂಡು ಊರಿಗೆ ಹೋಗಿದ್ದರು. ಆದರೆ ಮಗು ಅಜ್ಜಿ, ತಾತನ ಬಳಿ ತನ್ನದೇ ಭಾಷೆಯಲ್ಲಿ ಅಪ್ಪ ಅಮ್ಮನಿಗೆ ಹೊಡೆದಿದ್ದು, ಬಳಿಕ ಆಕೆಯ ಕತ್ತು ಹಿಸುಕಿ ದೇಹ ಕೊಂದಿರುವುದನ್ನು ಹೇಳಿದ್ದಾಳೆ. ಇದರಿಂದ ಅನುಮಾನಗೊಂಡ ಲಿಪಿಕಾ ಪೋಷಕರು ಮಗವನ್ನು ಕರೆದುಕೊಂಡು ಕಾಕಿನಾಡಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಬಳಿಯೂ ಮಗು ನಡೆದ ಘಟನೆಯನ್ನು ವಿವರಿಸಿದೆ.

ಮಗು ಹುಟ್ಟಿದ ನಂತರ ಮಣಿಕ್ ಘೋಷ್‌ಗೆ ತನ್ನ ಪತ್ನಿ ಮೇಲೆ ಅನುಮಾನ ಶುರುವಾಗಿತ್ತು. ಮಗು ಇವರ ಬಣ್ಣಕ್ಕಿಂತ ಸ್ವಲ್ಪ ಕಡು ಬಣ್ಣವನ್ನು ಹೊಂದಿದ್ದು ಇದೇ ಕಾರಣಕ್ಕೆ ಪತ್ನಿ ಲಿಪಿಕಾ ಮೇಲೆ ಪತಿ ಸದಾ ಅನುಮಾನಪಟ್ಟು ಜಗಳವಾಡುತ್ತಿದ್ದ. ತನಿಖೆ ವೇಳೆ ಈತ ತಾನು ಪತ್ನಿಯನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ‌.