ರಸ್ತೆಯಲ್ಲೆಲ್ಲಾ ಪತ್ನಿಯನ್ನು ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆಗೈದ ಪತಿ!

Prasthutha|

ಹಾಸನ: ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ರಸ್ತೆಯಲ್ಲೆಲ್ಲಾ ಅಟ್ಟಾಡಿಸಿ ಮಚ್ಚಿನಿಂದ ಹಲ್ಲೆಗೈದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ತಿರುಮಲಾಪುರದಲ್ಲಿ ನಡೆದಿದೆ.

- Advertisement -

ಪತಿ ಶ್ರೀನಿವಾಸ್ ತನ್ನ ಪತ್ನಿ ಸವಿತಾಳನ್ನು ಸಾರ್ವಜನಿಕರ ಮುಂದೆಯೇ ರಸ್ತೆ ತುಂಬಾ ಅಟ್ಟಾಡಿಸಿ ಮನಬಂದಂತೆ ರಾಡ್, ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಪತ್ನಿ ಮೇಲೆ ಪತಿ ಅಮಾನುಷವಾಗಿ ಹಲ್ಲೆ ಮಾಡುವ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದೆ.

ವರ್ಷಗಳ ಹಿಂದೆ ವಿವಾಹವಾಗಿದ್ದ ಶ್ರೀನಿವಾಸ್ ಹಾಗೂ ಸವಿತಾ ಕಳೆದ ಎರಡು ವರ್ಷಗಳಿಂದ ಒಂದೇ ಮನೆಯಲ್ಲಿ ವಿಭಾಗ ಮಾಡಿಕೊಂಡು ವಾಸ ಮಾಡುತ್ತಿದ್ದರು. ಪತಿಯಿಂದ ವಿಚ್ಛೇದನಕ್ಕಾಗಿ ಕಾನೂನು ಹೋರಾಟ ನಡೆಸುತ್ತಿರುವ ಸವಿತಾ ಆಸ್ತಿ ವಿಭಾಗಕ್ಕೂ ಪತಿ ಮೇಲೆ ಕೇಸ್ ಹಾಕಿದ್ದಳು.

- Advertisement -

ಶನಿವಾರ ಸಂಜೆ ಸೈಟ್ ಸೇಲ್ ಸಂಬಂಧ ಸವಿತಾ ಜೊತೆ ಶ್ರೀನಿವಾಸ್ ಜಗಳ ಮಾಡಿದ್ದಾನೆ. ಈ ವೇಳೆ ಎದುರು ಮಾತನಾಡಿದ ಪತ್ನಿ ಮೇಲೆ ಮಚ್ಚು ಹಾಗೂ ರಾಡ್‍ನಿಂದ ಹಲ್ಲೆ ಮಾಡಿದ್ದಾನೆ. ಪತಿಯ ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದರೂ ಬಿಡದೆ ಮಚ್ಚಿನಿಂದ ಅಮಾನುಷವಾಗಿ ಹಲ್ಲೆಗೈದಿದ್ದಾನೆ. ಅಲ್ಲದೆ ಪತ್ನಿ ಸವಿತಾ ತಂಗಿ ಅನಿತಾ ಕಾರಿನ ಮೇಲೂ ದಾಳಿ ಮಾಡಿ ಗ್ಲಾಸನ್ನು ಪುಡಿ ಪುಡಿ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

ಸದ್ಯ ಗಾಯಾಳು ಸವಿತಾಗೆ ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗ್ತಿದೆ. ಇತ್ತ ಆರೋಪಿಗೆ ಮಚ್ಚು ನೀಡಿದ ಶ್ರೀನಿವಾಸ್ ಸಂಬಂಧಿಯನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಆರೋಪಿ ಶ್ರೀನಿವಾಸ್ ಬಂಧನಕ್ಕೆ ಎಸ್‍ಪಿ ಹರಿರಾಂ ಶಂಕರ್ ಎರಡು ತಂಡ ರಚಿಸಿದ್ದಾರೆ. ಘಟನೆ ಸಂಬಂಧ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.