Home ಟಾಪ್ ಸುದ್ದಿಗಳು ಬಸವರಾಜ ಬೊಮ್ಮಾಯಿ ಸಂಬಂಧಿಯಿಂದ ಕಿದ್ವಾಯಿ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಅಕ್ರಮ: ಎಎಪಿ ಗಂಭೀರ ಆರೋಪ

ಬಸವರಾಜ ಬೊಮ್ಮಾಯಿ ಸಂಬಂಧಿಯಿಂದ ಕಿದ್ವಾಯಿ ಸಂಸ್ಥೆಯಲ್ಲಿ ನೂರಾರು ಕೋಟಿ ರೂ. ಅಕ್ರಮ: ಎಎಪಿ ಗಂಭೀರ ಆರೋಪ

ಬೆಂಗಳೂರು: ನಿಕಟ ಪೂರ್ವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹತ್ತಿರದ ಸಂಬಂಧಿ ಕಿದ್ವಾಯಿ ಆಸ್ಪತ್ರೆ ಹೆಸರಲ್ಲಿ ನೂರಾರು ಕೋಟಿ ರೂ. ವಂಚನೆ ಮಾಡಿದ್ದಾರೆ ಎಂದು ಎಎಪಿಯ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಟಿ ನಾಗಣ್ಣ ಗಂಭೀರ ಆರೋಪ ಮಾಡಿದ್ದಾರೆ.

ಬಿಜೆಪಿ ಮುಖಂಡರು ಯಾವಾಗಲೂ ನೀತಿ ಬಗ್ಗೆ ಮಾತನಾಡುತ್ತಾರೆ. ಆದರೆ, ಭ್ರಷ್ಟಾಚಾರದಲ್ಲಿ ಮುಳುಗಿರುತ್ತಾರೆ. ಕಿದ್ವಾಯಿ ಆಸ್ಪತ್ರೆ ಹೆಸರಿನಲ್ಲಿ ನೂರಾರು ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಟೆಂಡರ್ ಕರೆಯದೆಯೇ ಹಲವು ಬಾರಿ ಆಸ್ಪತ್ರೆಗೆ ನೂರಾರು ಕೋಟಿ ರೂ. ಮೌಲ್ಯದ ಉಪಕರಣಗಳನ್ನು ಖರೀದಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಲಭ್ಯವಾಗಿವೆ. ಮುಖ್ಯಮಂತ್ರಿ ಅಥವಾ ಆರೋಗ್ಯ ಸಚಿವರ ಕುಮ್ಮಕ್ಕು ಇಲ್ಲದೆ ಇದೆಲ್ಲ ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ಯಾಕೆ ಆಸ್ಪತ್ರೆಯಲ್ಲಿ ಸಾಕಷ್ಟು ಉಪಕರಣಗಳಿದ್ದರೂ ಪಿಪಿಪಿ ಮಾದರಿಯಲ್ಲಿ ಲ್ಯಾಬ್ ನಿರ್ಮಾಣಕ್ಕೆ ನಿರ್ಧರಿಸಲಾಯಿತು? ಟೆಂಡರ್ ನಲ್ಲಿ ಭಾಗವಹಿಸುವ ಕಂಪನಿ ಕೇಂದ್ರ ಸರ್ಕಾರದಿಂದ ಮಾನ್ಯತೆ ಸೇರಿ ಐಎಸ್ಒ ಸರ್ಟಿಫಿಕೇಟ್ ಮತ್ತು ಐಸಿಎಂಆರ್ ನಿಂದಲೂ ಪ್ರಮಾಣಪತ್ರ ಪಡೆಯಬೇಕು, ಎನ್ಎಪಿಯಿಂದಲೂ ಪ್ರಮಾಣಪತ್ರ ಪಡೆದಿರಬೇಕು. ಆದರೆ, ಇದ್ಯಾವುದೂ ಇಲ್ಲದೆ ಬಿಎಂಎಸ್ (ಬೆಂಗಳೂರು ಮೆಡಿಕಲ್ ಸಿಸ್ಟಮ್ಸ್) ಎಂಬ ಕಂಪನಿ ಹೋಲ್ ಸೇಲ್ ಡಿಸ್ಟ್ರಿಬ್ಯೂಟರ್ ಆಗಿ ನೋಂದಾಯಿಸಿಕೊಂಡು ಟೆಂಡರ್ ಪಡೆದಿದೆ ಎಂದು ಅವರು ಮಾಹಿತಿ ನೀಡಿದರು.

ನವೆಂಬರ್ 06, 2019 ರಲ್ಲಿ ಆಸ್ಪತ್ರೆ ನಿರ್ದೇಶಕರಾಗಿದ್ದ ಡಾ. ರಾಮಚಂದ್ರ ಅವರು ಟೆಂಡರ್ ಗೆ ಒಪ್ಪಿಗೆ ಪತ್ರ ನೀಡಿದ್ದಾರೆ. ಆದರೆ, ಟೆಂಡರ್ ಅಪ್ರೂವ್ ಮಾಡಲು ಅಗತ್ಯವಿರುವ 22 ದಿನಕ್ಕೂ ಮುಂಚಿತವಾಗಿಯೇ ಟೆಂಡರ್ ಅಕ್ಸೆಪ್ಟೆನ್ಸ್ ಲೆಟರ್ ಅನ್ನು ರಾಮಚಂದ್ರ ಅವರು ಬಿಎಂಎಸ್ ಗೆ ನೀಡಿದ್ದಾರೆ. ಈ ರೀತಿ ಮಾಡಲು ಇವರ ಮೇಲೆ ಒತ್ತಡ ಹೇರಿದವರು ಯಾರು? ಈ ಸಂಬಂಧ ದೊಡ್ಡ ಮಟ್ಟದ ತನಿಖೆ ಅಗತ್ಯವಿದೆ ಎಂದು ಬಿಟಿ ನಾಗಣ್ಣ ಹೇಳಿದರು.

ಕಿದ್ವಾಯಿ ಆಸ್ಪತ್ರೆ ಆವರಣದಲ್ಲಿಯೇ ತೆರೆಯಬೇಕು, ಅದಕ್ಕೆ ಒಂದು ಲಕ್ಷ ರೂ. ಬಾಡಿಗೆ ನೀಡಬೇಕು ಮತ್ತು ಬರುವ ಆದಾಯ ಸಮ ಪ್ರಮಾಣದಲ್ಲಿ ಹಂಚಿಕೆಯಾಗಬೇಕೆಂದು ಬಿಎಂಎಸ್-ಕಿದ್ವಾಯಿ ನಡುವೆ ಒಪ್ಪಂದವಿದೆ. ಆದರೆ, ಬಿಎಂಎಸ್ ಈವರೆಗೂ ಬಾಡಿಗೆಯಾಗಲಿ, ಆದಾಯವನ್ನಾಗಲಿ ನೀಡಿಲ್ಲ ಎಂದು ಅವರು ಆರೋಪಿಸಿದರು.

ಕೋವಿಡ್ ಸಾಂಕ್ರಾಮಿಕದ ಕಾಲದಲ್ಲಿ ಐಸಿಎಂಆರ್ ಕೋವಿಡ್ ಪರೀಕ್ಷೆಗಾಗಿ ಕೆಲವು ಆಸ್ಪತ್ರೆಗಳನ್ನು ಆಯ್ಕೆ ಮಾಡಿತ್ತು. ಈ ಪೈಕಿ ಕಿದ್ವಾಯಿ ಆಸ್ಪತ್ರೆ ಕೂಡ ಒಂದು. ಐಸಿಎಂಆರ್ ಕಿದ್ವಾಯಿಗೆ ಒಪ್ಪಿಗೆ ನೀಡುವ ಒಂದು ತಿಂಗಳ ಮೊದಲೇ ಕಿದ್ವಾಯಿ ನಿರ್ದೇಶಕರು ಕೋವಿಡ್ ಪರೀಕ್ಷೆ ನಡೆಸಲು ಯಾವುದೇ ಅರ್ಹತಾ ಪ್ರಮಾಣಪತ್ರ ಇಲ್ಲದ ಬಿಎಂಎಸ್ ಗೆ ಕೋವಿಡ್ ಪರೀಕ್ಷೆಗೆ ಅನುಮತಿ ನೀಡಿದ್ದಾರೆ ಎಂದು ನಾಗಣ್ಣ ಹೇಳಿದರು.

ಕೋವಿಡ್ ಪರೀಕ್ಷೆಗಾಗಿ ಬಿಬಿಎಂಪಿಯವರು ಕಿದ್ವಾಯಿಗೆ ಹಂತ ಹಂತವಾಗಿ 124 ಕೋಟಿ ರೂ. ಹಣವನ್ನು ವರ್ಗಾವಣೆ ಮಾಡುತ್ತಾರೆ. ಆದರೆ, ಕಿದ್ವಾಯಿ ಆಸ್ಪತ್ರೆ ಯಾವುದೇ ಅಧಿಕೃತ ಒಪ್ಪಂದವಿಲ್ಲದೆ ಬಿಎಂಎಸ್ ಗೆ ಸಂಪೂರ್ಣ 119 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ. ಈ ಪೈಕಿ 59 ಕೋಟಿ ಹಣ ಕಿದ್ವಾಯಿ ಆಸ್ಪತ್ರೆಗೆ ಬರಬೇಕಿತ್ತು. ಆದರೆ,ಕಿದ್ವಾಯಿಗೆ ಬರಬೇಕಿದ್ದ ಹಣ ಯಾರ ಜೇಬಿಗೆ ಸೇರಿದೆ ಎಂದು ಪ್ರಶ್ನಿಸಿದರು.

ಇದಕ್ಕೆ ಸಂಬಂಧಿಸಿದಂತೆ, ಕಿದ್ವಾಯಿಗೆ ಬರಬೇಕಿದ್ದ ಹಣ ಬಿಎಂಎಸ್ ಗೆ ವರ್ಗಾವಣೆಯಾಗಿರುವುದರ ಹಿಂದೆ ಯಾವ ಮುಖ್ಯಮಂತ್ರಿ ಮತ್ತು ಸಚಿವರ ಒತ್ತಡವಿದೆ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಲ್ಲದೆ, ಕಿದ್ವಾಯಿಯಲ್ಲಿ ಅವಧಿ ಮೀರಿದ ಔಷಧಿಗಳು ಪತ್ತೆಯಾಗಿವೆ. ಜೊತೆಗೆ, ಹಲವು ಲ್ಯಾಬ್ ಗಳಲ್ಲಿನ ಉಪಕರಣಗಳು ಕೆಲಸ ಮಾಡುತ್ತಿಲ್ಲ. ಅನುಮತಿ ಪಡೆಯದೆ ಅಂಗಾಂಗ ಕಸಿ ಮಾಡಲಾಗುತ್ತಿದೆ. 21 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ಟೆಂಡರ್ ಕರೆಯದೆ ಖರೀದಿಸಲಾಗಿದೆ. ಔಷಧಿ ಖರೀದಿಸಿರುವ 3,800 ಬಿಲ್ ಗಳಲ್ಲಿಯೂ ಭ್ರಷ್ಟಾಚಾರ ಪತ್ತೆಯಾಗಿದೆ. ಔಷಧಿ ಪೂರೈಸದೆಯೇ ನಕಲಿ ಬಿಲ್ ಸೃಷ್ಟಿಸಿ ಹಣ ಪಡೆಯಲಾಗಿದೆ. ಆಡಿಟ್ ವರದಿಯಲ್ಲಿ ಇದು ಪತ್ತೆಯಾಗಿದ್ದು, ಈ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದ ನಾಗಣ್ಣ, ಇವೆಲ್ಲ ಹಗರಣಗಳ ಹಿಂದಿರುವುದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿಯವರ ಹತ್ತಿರದ ಸಂಬಂಧಿ ಬಿಎಂಎಸ್ ಕಂಪನಿ ಮಾಲೀಕ ಸಿದ್ದಲಿಂಗಪ್ಪ ಫಲೋಚನ ರಕ್ಷಿತ್ ಆಗಿದ್ದಾರೆ ಎಂದು ಹೇಳಿದರು.

ಇಷ್ಟೆಲ್ಲ ಆರೋಪಗಳು ಕೇಳಿಬಂದಿದ್ದರೂ ರಾಜ್ಯ ಸರ್ಕಾರ ಕಿದ್ವಾಯಿ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ರಾಮಚಂದ್ರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಹೀಗಾಗಿ, ಭ್ರಷ್ಟಾಚಾರದ ಕುರಿತು ಮಾತನಾಡಲು ಯಾವ ನೈತಿಕತೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು. ನಿಮ್ಮ ಅವಧಿಯಲ್ಲಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬಿನೆಪಿ ಸರ್ಕಾರ ತನಿಖೆ ನಡೆಸದಿದ್ದಕ್ಕೆ ಈಗ ಋಣಸಂದಾಯ ಮಾಡಲು ಬೊಮ್ಮಾಯಿ ಕುಂಟುಂಬದೊಂದಿಗೆ ಶಾಮೀಲಾಗಿದ್ದೀರಾ ಎಂದರು.

ಕೂಡಲೇ ಸಿ ರಾಮಚಂದ್ರ ಅವರಿಗೆ ನೀಡಿರುವ ರಾಜ್ಯೋತ್ಸವ ಪ್ರಶಸ್ತಿಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಕಿದ್ವಾಯಿ ಆಸ್ಪತ್ರೆಯೊಂದರಲ್ಲೇ ಇಷ್ಟು ಕೋಟಿ ಅವ್ಯವಹಾರ ನಡೆದಿದ್ದರೆ, ಮಾಜಿ ಸಚಿವ ಸುಧಾಕರ್ ಮತ್ತು ಬೊಮ್ಮಾಯಿ ಅಧಿಕಾರದ ಅವಧಿಯಲ್ಲಿ ರಾಜ್ಯಾದ್ಯಂತ ಇನ್ನೆಷ್ಟು ಅವ್ಯವಹಾರ ನಡೆದಿರಬೇಕು, ಈ ಬಗ್ಗೆ ತನಿಖೆಗೆ ಆದೇಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದರು.

ಕಾನೂನು ಹೋರಾಟ

ಈ ಹಗರಣವನ್ನು ಸುಮ್ಮನೆ ಬಿಡುವುದಿಲ್ಲ, ಇದನ್ನು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗುತ್ತೇವೆ, ಎಲ್ಲಾ ಅವ್ಯವಹಾರಗಳ ಬಗ್ಗೆ ದಾಖಲೆ ಇದೆ, ಆಮ್ ಅದ್ಮಿ ಪಕ್ಷ ಈ ಭ್ರಷ್ಟಾಚಾರ ಹಗರಣದ ವಿರುದ್ಧ ಕಾನೂನು ಹೋರಾಟ ಮಾಡಲಿದೆ ಎಂದು ಪಕ್ಷದ ಉಪಾಧ್ಯಕ್ಷ ಹಾಗೂ ವಕೀಲರಾದ ನಂಜಪ್ಪ ಕಾಳೇಗೌಡ ತಿಳಿಸಿದರು.

ಡಾ. ಸಿ ರಾಮಚಂದ್ರ ಅವರ ಮೇಲೆ ಸಾಕಷ್ಟು ಭ್ರಷ್ಟಾಚಾರ ಆರೋಪಗಳಿದ್ದರೂ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ಯಾಕೆ? ಇದರಲ್ಲೂ ನೀವು ಕಿಕ್ ಬ್ಯಾಕ್ ಪಡೆದಿದ್ದೀರಾ ಎಂದು ರಾಜ್ಯ ಸರ್ಕಾರವನ್ನು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ತರಾಟೆಗೆ ತೆಗೆದುಕೊಂಡರು.

ಹಗರಣಗಳಲ್ಲಿ ಭಾಗಿಯಾದವರಿಗೂ ಪ್ರಶಸ್ತಿ ಕೊಡುತ್ತಿದ್ದಾರೆ. ಬಿಜೆಪಿ ಹಗರಣಗಳನ್ನು ಮುಚ್ಚಿ ಹಾಕಲು ಕಾಂಗ್ರೆಸ್ ಸರ್ಕಾರ ಪ್ರಯತ್ನಿಸುತ್ತಿದೆಯಾ? ಎಂದು ಜಗದೀಶ್ ಪ್ರಶ್ನಿಸಿದರು.

Join Whatsapp
Exit mobile version