ರಾಂಚಿ: ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಕಾಂಗ್ರೆಸ್‌ನ ರಾಜ್ಯಸಭೆ ಸದಸ್ಯ, ಜಾರ್ಖಂಡ್‌ನ ಧೀರಜ್ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲಿ ನೂರಾರು ಕೋಟಿ ಹಣದ ಕಂತೆಗಳನ್ನು ವಶಪಡಿಸಿಕೊಂಡಿದ್ದಾರೆ. ತೀವ್ರ ಟೀಕೆಗೆ ಗುರಿಯಾದ ಕಾಂಗ್ರೆಸ್ ಈ ಕುರಿತು ಹೇಳಿಕೆ ಕೊಟ್ಟಿದೆ.
ಜಾರ್ಖಂಡ್ ಕಾಂಗ್ರೆಸ್‌ನ ಹಂಗಾಮಿ ಅಧ್ಯಕ್ಷ ಅವಿನಾಶ್ ಪಾಂಡೆ, ಇದು ಧೀರಜ್ ಸಾಹು ಅವರ ವೈಯಕ್ತಿಕ ವಿಚಾರ. ಪಕ್ಷಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ದಾಖಲೆಯಿಲ್ಲದ ಹಣಕ್ಕೆ ಸಂಬಂಧಿಸಿದಂತೆ ಸಾಹು ಅವರಿಂದ ಸ್ಪಷ್ಟನೆ ಕೇಳುತ್ತೇವೆ ಎಂದು ಹೇಳಿದ್ದಾರೆ.
ಧಿರಜ್ ಸಾಹು ಕುಟುಂಬ 100 ವರ್ಷಕ್ಕೂ ಹೆಚ್ಚು ವರ್ಷಗಳಿಂದ ಉದ್ಯಮ ನಡೆಸಿಕೊಂಡು ಬರುತ್ತಿದೆ. ಅವಿಭಕ್ತ ಕುಟುಂಬದ ವ್ಯವಹಾರ ಇದಾಗಿದೆ. ಆದರೂ ಇಷ್ಟು ದೊಡ್ಡ ಮೊತ್ತ ಎಲ್ಲಿಂದ ಬಂತು ಎಂಬುದನ್ನು ಸಾಹು ಸ್ಪಷ್ಟಪಡಿಸಬೇಕು ಎಂದು ಬಯಸುತ್ತೇನೆ. ಜೊತೆಗೆ ಆದಾಯ ತೆರಿಗೆ ಇಲಾಖೆಯೂ ಸಹ ಈ ಕುರಿತು ಅಧಿಕೃತ ಹೇಳಿಕೆ ನೀಡಬೇಕು ಎಂದು ಬಯಸುತ್ತೇನೆ ಎಂದು ಅವರು ಹೇಳಿದರು.
ಕಾಂಗ್ರೆಸ್ ತನ್ನ ನಿಲುವಿನಲ್ಲಿ ಬದ್ಧವಾಗಿದೆ. ದಾಳಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಹಾಗಿದ್ದರೂ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿ ಆರೋಪ ಬರುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರು ಮದ್ಯ ತಯಾರಿಕಾ ಕಂಪನಿ ಬಲದೇವ್ ಸಾಹು ಆಂಡ್ ಗ್ರೂಪ್ ಕಂಪನಿಗಳೊಂದಿಗೆ ಸಂಬಂಧ ಹೊಂದಿದ್ದಾರೆ ಎನ್ನಲಾಗಿದೆ. ಆದಾಯ ತೆರಿಗೆ ಇಲಾಖೆಯು 10 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಅದರಲ್ಲಿ ಬಲದೇವ್ ಸಾಹು ಕಂಪನಿಯ ಬೋಲಂಗಿರ್ ಕಚೇರಿಯಿಂದ 30 ಕಿ.ಮೀ ದೂರದಲ್ಲಿರುವ ಸಾತ್ಪುರ ಕಚೇರಿಯಲ್ಲಿ 300 ಕೋಟಿ ರೂಪಾಯಿ ಪತ್ತೆಯಾಗಿದೆ. ಕಚೇರಿಯ ಒಂಬತ್ತು ಕಪಾಟುಗಳಲ್ಲಿ 500, 200 ಮತ್ತು 100 ರೂಪಾಯಿ ನೋಟುಗಳ ಬಂಡಲ್ಗಳನ್ನು ಇರಿಸಲಾಗಿತ್ತು. ಸಂಸ್ಥೆಯ ಒಂದೇ ಕಾರ್ಯಾಚರಣೆಯಲ್ಲಿ ಸಿಕ್ಕಿದ ದಾಖಲೆಯ ಮೊತ್ತ ಇದಾಗಿದೆ.