Home ಟಾಪ್ ಸುದ್ದಿಗಳು ಮಾನವ–ವನ್ಯಜೀವಿ ಸಂಘರ್ಷ: ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ; ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಸೂಚನೆ

ಮಾನವ–ವನ್ಯಜೀವಿ ಸಂಘರ್ಷ: ಸಿಎಂ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ; ಕಾಡುಪ್ರಾಣಿಗಳು ನಾಡಿಗೆ ಬರದಂತೆ ತಡೆಯಲು ಸೂಚನೆ

ಬೆಂಗಳೂರು: ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಡುತ್ತಿರುವವರ ಸಂಖ್ಯೆ ಅಧಿಕವಾಗಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ  ಮುಖ್ಯಮಂತ್ರಿ ಸಿದ್ದರಾಮಯ್ಯ, ವನ್ಯ ಮೃಗಗಳು ನಾಡಿಗೆ ಬಾರದ ರೀತಿಯಲ್ಲಿ ಅರಣ್ಯದೊಳಗೆ ಅವುಗಳಿಗೆ ಸಾಕಷ್ಟು ಪ್ರಮಾಣದ ಆಹಾರ ಮತ್ತು ನೀರು ಲಭ್ಯವಾಗುವಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ವನ್ಯಮೃಗ-ಮಾನವ ಸಂಘರ್ಷದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಮತ್ತು ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಗೃಹ ಕಚೇರಿ ಕೃಷ್ಣಾದಲ್ಲಿಂದು ಉನ್ನತ ಮಟ್ಟದ ಸಭೆ ನಡೆಸಿದ ಅವರು, ಮಳೆಯ ಅಭಾವ ಇರುವ ಹಿನ್ನೆಲೆಯಲ್ಲಿ ವನ್ಯ ಜೀವಿಗಳು ನಾಡಿಗೆ ಬರುತ್ತವೆ. ಇದನ್ನು ನಿಯಂತ್ರಿಸಲು ಎಲ್ಲ ಸಾಧ್ಯ ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟ ನಿರ್ದೇಶನ ನೀಡಿದರು.

ಹೆಚ್ಚಿನ ಅನುದಾನಕ್ಕೆ ಖಂಡ್ರೆ ಮನವಿ: ಆನೆಗಳ ದಾಳಿಯಿಂದ ಕಳೆದ ಐದೂವರೆ ವರ್ಷಗಳಲ್ಲಿ 148 ಜನರು ಮೃತಪಟ್ಟಿರುವ ವಿಷಯವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು, ಆನೆಗಳು ನಾಡಿಗೆ ಲಗ್ಗೆ ಇಡದಂತೆ ತಡೆಯಲು ರೈಲ್ವೆ ಬ್ಯಾರಿಕೇಡ್ ಮತ್ತು ಸೌರ ತಂತಿಬೇಲಿ ಹಾಕುವ ಹಾಗೂ ಆನೆ ಕಂದಕ ತೋಡುವ ಅಗತ್ಯವಿದ್ದು, ಇಲಾಖೆಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಈಗಾಗಲೇ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ಬಜೆಟ್ ನಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಈಗ ಹೆಚ್ಚುವರಿ 100 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭಿಸಿ ಎಂದು ಸೂಚಿಸಿದರು.

ಅರಣ್ಯ ಭೂಮಿ ಒತ್ತುವರಿ  ತೆರವಿಗೆ ಸೂಚನೆ:  ಸಣ್ಣ ಹಿಡುವಳಿದಾರರಿಗೆ ತೊಂದರೆ ನೀಡದೆ, ದೊಡ್ಡ ಪ್ರಮಾಣದಲ್ಲಿ ಆಗಿರುವ ಅರಣ್ಯ ಭೂಮಿ ಒತ್ತುವರಿಯನ್ನು ತೆರವುಗೊಳಿಸಿ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಅರಣ್ಯ ಹಕ್ಕು ಕಾಯಿದೆಯಡಿ ಅರ್ಜಿ ಸಲ್ಲಿಸಿರುವವರಿಗೆ, ಅರಣ್ಯಭೂಮಿ ಮೀಸಲು ರದ್ದಾಗಿರುವ ಪ್ರಕರಣ ಹೊರತು ಪಡಿಸಿ, ಹತ್ತಾರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿರುವವರ ವಿರುದ್ಧ ಕ್ರಮ ಜರುಗಿಸಿ ಎಂದು ಸೂಚಿಸಿದರು.

ಹಸಿರು ವಲಯದ ಮಾಹಿತಿ: ಜಾಗತಿಕ ತಾಪಮಾನ ಏರಿಕೆ, ಹವಾಮಾನ ವೈಪರೀತ್ಯದಂತಹ ಸಮಸ್ಯೆಗಳ ಪರಿಹಾರಕ್ಕೆ ಹಸಿರು ವಲಯ ವ್ಯಾಪ್ತಿಯ ಹೆಚ್ಚಳವೇ ಪರಿಹಾರವಾಗಿದ್ದು, ಅರಣ್ಯ ಇಲಾಖೆ ಈ ವರ್ಷ 5 ಕೋಟಿ ಗಿಡ ನೆಟ್ಟು ಪೋಷಿಸುವ ಸಂಕಲ್ಪ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮುಖ್ಯಮಂತ್ರಿಯವರು, ನೆಟ್ಟ ಸಸಿಗಳು ಬೆಳೆದು ಉಳಿಯುವುದನ್ನು ಖಾತ್ರಿ ಪಡಿಸಿಕೊಳ್ಳಲು ನೈಜ ಪರಿಶೋಧನೆ ಆಗಬೇಕು. ಜಿಯೋ ಟ್ಯಾಗ್ ಸಮರ್ಪಕವಾಗಿ ಆಗಬೇಕು ಎಂದು ಸೂಚಿಸಿದರು.

ಅರಣ್ಯ ಇಲಾಖೆಯ ವತಿಯಿಂದ ಪ್ರಸ್ತುತ ಪಡಿಸಲಾದ ಪ್ರಾತ್ಯಕ್ಷಿಕೆ ವೀಕ್ಷಿಸಿದ ತರುವಾಯ ವಿಸ್ತೃತವಾಗಿ ಮಾನವ – ವನ್ಯಮೃಗ ಸಂಘರ್ಷದ ಕಾರಣಗಳು ಮತ್ತು ಅವುಗಳ ಪರಿಹಾರೋಪಾಯಗಳ ಬಗ್ಗೆ ಮುಖ್ಯಮಂತ್ರಿಗಳು ಅರಣ್ಯ ಸಚಿವರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ವಿಸ್ತೃತವಾಗಿ ಚರ್ಚಿಸಿದರು.

ಸಭೆಯಲ್ಲಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಹಿರಿಯ ಐ.ಪಿ.ಎಸ್. ಅಧಿಕಾರಿಗಳಾದ ರಾಜೀವ್ ರಂಜನ್, ಸುಭಾಷ್ ಮಾಲ್ಕಡೆ, ಸಂಜಯ್ ಬಿಜ್ಜೂರ್, ಶಾಶ್ವತಿ,  ಮತ್ತಿತರರು ಪಾಲ್ಗೊಂಡಿದ್ದರು.

Join Whatsapp
Exit mobile version