ನವದೆಹಲಿ: ಕಾನೂನನ್ನು ಉಲ್ಲಂಘಿಸಿದ್ದಾರೆಂದು ಆರೋಪಿಸಿ ಕ್ಷುಲ್ಲಕ ಕಾರಣಗಳನ್ನು ಇಟ್ಟುಕೊಂಡು ಮುಸ್ಲಿಮರ ಮೇಲೆ ಭಾರತದ ಅಧಿಕಾರಿ ವರ್ಗ ನಿಂದನೀಯ ರೂಪದಲ್ಲಿ ಶಿಕ್ಷಿಸಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಕಳವಳ ವ್ಯಕ್ತಪಡಿಸಿದೆ.
ಗುಜರಾತ್ನ ಖೇಡಾದಲ್ಲಿ ಗರ್ಬಾ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕೆಲವು ಮುಸ್ಲಿಂ ಯುವಕರನ್ನು ಪೊಲೀಸರು ಕಂಬಗಳಿಗೆ ಕಟ್ಟಿ ಹಾಕಿ ದೊಣ್ಣೆಗಳಿಂದ ಥಳಿಸಿರುವ ಘಟನೆಯು ಜಗಜ್ಜಾಹೀರಾದ ಬಳಿಕ ಈ ರೀತಿಯ ಆಕ್ಷೇಪವನ್ನು ಹ್ಯೂಮನ್ ರೈಟ್ಸ್ ವಾಚ್ ವ್ಯಕ್ತಪಡಿಸಿದೆ.
ದ್ವಂದ್ವ ನಿಲುವನ್ನು ತೋರಿ ಮುಸ್ಲಿಮರನ್ನೇ ಗುರಿಪಡಿಸಿ ಭಾರತದ ಅಧಿಕಾರಿ ವರ್ಗದವರು ನೀಡುತ್ತಿರುವ ಶಿಕ್ಷೆಗಳು ತಾರತಮ್ಯ ನೀತಿಯನ್ನು ಎತ್ತಿ ತೋರಿಸುತ್ತದೆ. ಈ ಮೂಲಕ ತನ್ನ ಕಾನೂನಿನ ನಿಯಮ ಪಾಲನೆಯನ್ನು ಅಲ್ಲಗಳೆಯಲಾಗುತ್ತಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸೌತ್ ಏಷ್ಯಾ ಡೈರೆಕ್ಟರ್ ಮೀನಾಕ್ಷಿ ಗಂಗೂಲಿ ಹೇಳಿದ್ದಾರೆ.
ನಿರ್ದಿಷ್ಟವಾಗಿ ಮುಸ್ಲಿಮರನ್ನು ಗುರಿಪಡಿಸಿಕೊಂಡಿರುವ ಇಂತಹ ಅಸಮಂಜಸ ಆಲೋಚನೆ ಮತ್ತು ಕ್ರಿಯೆಗಳಿಂದ ಭಾರತದ ಅಧಿಕಾರಿಗಳು ವಿಮುಕ್ತರಾಗಬೇಕು ಎಂದೂ ಅವರು ಆಗ್ರಹಿಸಿದ್ದಾರೆ.