Home ಟಾಪ್ ಸುದ್ದಿಗಳು ಪ್ರವಾಸಿ ತಾಣದಲ್ಲಿ ಬೋಟ್ ವಿಹಾರಿಗಳ ಮೇಲೆ ಬೃಹತ್ ಗಾತ್ರದ ಕಲ್ಲಿನ ಗುಡ್ಡ ಕುಸಿತ: 7 ಮಂದಿ...

ಪ್ರವಾಸಿ ತಾಣದಲ್ಲಿ ಬೋಟ್ ವಿಹಾರಿಗಳ ಮೇಲೆ ಬೃಹತ್ ಗಾತ್ರದ ಕಲ್ಲಿನ ಗುಡ್ಡ ಕುಸಿತ: 7 ಮಂದಿ ಸಾವು

ಬ್ರೆಝಿಲ್: ಪ್ರಕೃತಿ ರಮಣೀಯ ಪ್ರವಾಸಿ ತಾಣವೊಂದರಲ್ಲಿ ಬೋಟ್’ನಲ್ಲಿ ವಿಹರಿಸುತ್ತಿದ್ದ ಪ್ರವಾಸಿಗರ ಮೇಲೆ ಬೃಹತ್ ಗಾತ್ರದ ಕಲ್ಲಿನ ಗುಡ್ಡದ ಒಂದು ಭಾಗ ಕುಸಿದುಬಿದ್ದ ಪರಿಣಾಮ 7 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ಬ್ರೆಝಿಲ್ ದೇಶದ ಕ್ಯಾಪಿಟೊಲಿಯೊದಲ್ಲಿನ ಫುರ್ನಾಸ್ ಸರೋವರದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿ ಕಣ್ಮರೆಯಾಗಿದ್ದು, 9 ಮಂದಿ ಗಾಯಗೊಂಡಿದ್ದಾರೆ.

ಘಟನೆ ನಡೆಯುವ ವೇಳೆ ಸರೋವರದಲ್ಲಿದ್ದ ಇತರ ಪ್ರವಾಸಿಗರು ಮೊಬೈಲ್’ನಲ್ಲಿ ಚಿತ್ರೀಕರಿಸಿದ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಫುರ್ನಾಸ್ ಸರೋವರವು ಬ್ರೆಝಿಲ್’ನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದ್ದು, ವಾರಾಂತ್ಯದ ಮೂಡ್’ನಲ್ಲಿದ್ದ ಪ್ರವಾಸಿಗರು ದೋಣಿ ವಿಹಾರ ನಡೆಸುತ್ತಿದ್ದ ವೇಳೆ ದುರಂತ ಸಂಭವಿಸಿದೆ. ಸರೋವರದ ಒಂದು ಬದಿಯಲ್ಲಿ ಉದ್ದುದ್ದ ಚಾಚಿ ನಿಂತಿದ್ದ ಬೃಹತ್ ಕಲ್ಲು ಬಂಡೆಗಳ ಸಾಲಿನಿಂದ ಒಂದು ಭಾಗ ಸಂಪೂರ್ಣವಾಗಿ ಕುಸಿದು ಮೂರು ದೋಣಿಗಳ ಮೇಲೆಯೇ ಬಿದ್ದಿದೆ. ಕಾಣೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಮಿನಾಸ್ ಗೆರಿಯಾಸ್ ಅಗ್ನಿಶಾಮಕ ದಳದ ಕಮಾಂಡರ್ ಕರ್ನಲ್ ಎಡ್ಗಾರ್ಡ್ ಎಸ್ಟೆವೊ ಡಿ ಸಿಲ್ವಾ ಹೇಳಿದ್ದಾರೆ.

ಪ್ರವಾಸಿಗರ ನೆಚ್ಚಿನ ತಾಣವಾಗಿರುವ ಫುರ್ನಾಸ್ ಸರೋವರದ ಮೇಲ್ಭಾಗದಲ್ಲಿ ಜಲವಿದ್ಯುತ್ ಸ್ಥಾವರದ ಅಣೆಕಟ್ಟು ಇದೆ. ಪ್ರವಾಸಿಗರು ದೋಣಿಗಳಲ್ಲಿ ವಿಹರಿಸುತ್ತಿದ್ದ ವೇಳೆ ಜಲಪಾತದ ಪಕ್ಕದಲ್ಲಿನ ಬಂಡೆಯೊಂದರಿಂದ ಕಲ್ಲುಗಳು ಸಣ್ಣನೆ ಉರುಳಲು ಆರಂಭಿಸಿದ್ದವು. ಜಲಪಾತದ ಸಮೀಪ ಮೂರು ದೋಣಿಗಳನ್ನು ನಡೆಸುವವರು ಅಪಾಯವನ್ನು ಗ್ರಹಿಸಿ ಕೂಡಲೇ ಅಲ್ಲಿಂದ ದೂರ ಸಾಗಲು ಪ್ರಯತ್ನಿಸಿದರು. ಆದರೆ ಬೆಟ್ಟದ ಒಂದು ಭಾಗ ದಿಢೀರ್ ಕುಸಿದು ದೋಣಿಗಳ ಮೇಲೆ ಬಿದ್ದಿದೆ.

ಘಟನೆಯ ಎದೆನಡುಗಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕಳೆದ ಕೆಲವು ದಿನಗಳಿಂದ ೀ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಈ ಕಾರಣದಿಂದಾಗಿ ಕಲ್ಲುಬಂಡೆಯು ಕೆಳಭಾಗವು ಸಡಿಲಗೊಂಡುದು ಕುಸಿದಿರಬಹುದು ಎಂದು ಅಂದಾಜಿಸಲಾಗಿದೆ.

Join Whatsapp
Exit mobile version