➤ಅಮಾಯಕರ ಬಿಡುಗಡೆಗೆ ಸಾಧ್ಯತೆ
ಹುಬ್ಬಳ್ಳಿ: ಪ್ರಚೋದನಾಕಾರಿ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ನಗರದಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿರುವ ವಾಸೀಂ ಸೇರಿ 8 ಆರೋಪಿಗಳಿಗೆ ಪೊಲೀಸರು ಡೆಡ್ ಲೈನ್ ನೀಡಿದ್ದಾರೆ.
ಆರೋಪಿಗಳು ಇಂದು ಸಂಜೆಯೊಳಗೆ ಶರಣಾಗದಿದ್ದರೆ ಮುಂದಿನ ಪರಿಣಾಮಕ್ಕೆ ನೀವೇ ಹೊಣೆ ಎಂದು ಖಡಕ್ ಸಂದೇಶ ರವಾನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಶಾಂತಿ ಕದಡಿದ ಆರೋಪಿಗಳ ಪತ್ತೆಗೆ ಪೊಲೀಸರು ಬೆಳಗಾವಿ, ಹಾವೇರಿ, ಹೈದರಾಬಾದ್‌ಗೆ ತೆರಳಿದ್ದಾರೆ. ಗಲಭೆಗೆ 4 ಮಂದಿ ಪ್ರಚೋದನೆ ನೀಡಿದ್ದು ಇವರೇ ಗಲಭೆಗೆ ನೇರ ಕಾರಣ ಎಂಬ ತೀರ್ಮಾನಕ್ಕೆ ಪೊಲೀಸರು ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಹುಬ್ಬಳ್ಳಿ ಗಲಭೆಕೋರರ ಬಂಧನಕ್ಕೆ ಪೊಲೀಸರು ತೀವ್ರಶೋಧ ಕಾರ್ಯ ಕೈಗೊಂಡಿದ್ದು, ದಿನದಿಂದ ದಿನಕ್ಕೆ ಆರೋಪಿಗಳ ಸಂಖ್ಯೆ ಸಹ ಏರಿಕೆಯಾಗುತ್ತಿದೆ. ಸಿಕ್ಕ ಸಿಕ್ಕವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ರಾಜಕೀಯ ನಾಯಕರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಅಮಾಯಕರ ಪತ್ತೆಗೂ ಸಹ ಹಲವಾರು ಮಾರ್ಗಗಳನ್ನು ಯೋಜನೆ ಹಾಕಿಕೊಂಡಿದೆ.
108 ಮಂದಿ ಸೆರೆ:
ಪ್ರಕರಣ ಸಂಬಂಧ ಈವರೆಗೆ 108 ಮಂದಿಯನ್ನು ಬಂಧಿಸಲಾಗಿದೆ. 12 ಎಫ್ ಐಆರ್ ದಾಖಲಾಗಿದೆ. ಇದರಲ್ಲಿ 6 ಮಂದಿ ರೌಡಿಗಳು, 10 ಅಪ್ರಾಪ್ತರು ಸೇರಿದ್ದಾರೆ. ಆರೋಪಿಗಳಿಗೆ ನ್ಯಾಯಾಂಗ ಬಂಧನ ಹಿನ್ನೆಲೆ ಎಲ್ಲರನ್ನು ಕಲಬುರಗಿ ಜೈಲಿಗೆ ಶಿಫ್ಟ್ ಮಾಡಲಾಗಿದೆ.
ಬಂಧಿತ ಕುಟುಂಬಸ್ಥರು ತಮ್ಮ ಮನೆಯವರನ್ನು, ಮಕ್ಕಳನ್ನು ಬಿಡುಗಡೆ ಮಾಡುವಂತೆ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾರೆ. ಇದಕ್ಕೆ ರಾಜಕೀಯ ನಾಯಕರು ಧ್ವನಿಗೊಡಿಸಿದ್ದಾರೆ. ಹೀಗಾಗಿ ಪ್ರಕರಣದಲ್ಲಿ ಭಾಗಿ ಆಗದೇ ವಶದಲ್ಲಿರುವವರ ಬಿಡುಗಡೆಗೆ ಪೊಲೀಸರು ಹೊಸ ಫಾರ್ಮುಲಾ ರಚಿಸಿದ್ದಾರೆ.
ಅಮಾಯಕರ ಬಿಡುಗಡೆ:
ಬಂಧಿತರಲ್ಲಿ ಅಮಾಯಕರನ್ನು ಬಿಡುಗಡೆ ಮಾಡಲು ಸಿಸಿಟಿವಿ ಮತ್ತು ಮೊಬೈಲ್ ವಿಡಿಯೋ ಮೂಲಕ 4 ಫಾರ್ಮುಲಾವನ್ನು ಪೊಲೀಸರು ಅಳವಡಿಸಿಕೊಂಡಿದ್ದಾರೆ.
ಗಲಾಟೆಯ ದಿನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಭಾಗಿಯಾದವರು. ಘಟನೆ ನೋಡುತ್ತಾ ನಿಂತವರು, ಪೊಲೀಸರ ಲಾಠಿ ಚಾರ್ಜ್ ವೇಳೆ ಓಡಿಹೋದವರು ಪತ್ತೆಯಾಗಿದ್ದು ಈ ಬಗ್ಗೆ ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹೀಗಾಗಿ ಇವರನ್ನು ಬಿಡುಗಡೆ ಮಾಡುವ ಸಾಧ್ಯತೆಯಿದೆ.
ಕಳೆದ ಏ.15 ರಾತ್ರಿ ಮಸೀದಿಯಿಂದ ನಮಾಝ್ ಗೆ ಹೋದವರು ಸಹ ಬಂಧನಕ್ಕೊಳಗಾಗಿದ್ದಾರೆ. ಇದರಲ್ಲಿ ನಿಜವಾಗಿಯೂ ಪ್ರಾರ್ಥನೆಗೆ ಬಂದವರು ಯಾರು, ಗಲಾಟೆ ಮಾಡಿ ಮಸೀದಿಯೊಳಗೆ ಪ್ರವೇಶ ಮಾಡಿದವರು ಯಾರು ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ.
ಘಟನೆ ನೋಡುತ್ತಾ ನಿಂತವರು, ಪ್ರಯಾಣ ಮಾಡುತ್ತಿದ್ದವರು, ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದವರ ಮುಖ ವಿಡಿಯೋದಲ್ಲಿ ಸೆರೆಯಾದ ಹಿನ್ನೆಲೆಯಲ್ಲಿ ಬಂಧನ ಮಾಡಲಾಗಿದೆ. ಇಂತವರನ್ನು ಬಿಡುವ ಸಾಧ್ಯತೆಯಿದ್ದು ವೀಡಿಯೋದಲ್ಲಿ ಹಲವು ಮಂದಿ ಪ್ರಚೋದನೆ ನೀಡಿದ್ದಾರೆ. ಪ್ರಚೋದನೆ ನೀಡಿ ಗಲಭೆ ಕಾರಣರಾದ ಮಂದಿಯ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.