Home ಟಾಪ್ ಸುದ್ದಿಗಳು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ : ಭಾರತಕ್ಕೆ ಕಂಚಿನ ಪದಕ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ : ಭಾರತಕ್ಕೆ ಕಂಚಿನ ಪದಕ

ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ ಪುರುಷರ ಸಿಂಗಲ್ಸ್ ಸೆಮಿಫೈನಲ್‌ನಲ್ಲಿ ಭಾರತದ ಆಟಗಾರ ಎಚ್‌ಎಸ್ ಪ್ರಣಯ್ ಹಿನ್ನಡೆ ಅನುಭವಿಸಿದ್ದಾರೆ. ಆಗಸ್ಟ್ 26ರ ಶನಿವಾರ ನಡೆದ ಈ ಪಂದ್ಯದಲ್ಲಿ ಥಾಯ್ಲೆಂಡ್​ನ ಕುನ್ಲವುಟ್ ವಿಟಿಡ್ಸರ್ನ್ ವಿರುದ್ಧ ಸೋತ ಪ್ರಣಯ್ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ.

ಈ ಮೂಲಕ BWF ವಿಶ್ವ ಚಾಂಪಿಯನ್‌ಶಿಪ್ 2023ರಲ್ಲಿ ಚಿನ್ನದ ಪದಕ ಗೆಲ್ಲುವ ಎಚ್‌ಎಸ್ ಪ್ರಣಯ್ ಅವರ ಕನಸು ಭಗ್ನಗೊಂಡಿದೆ. ಸೆಮಿಫೈನಲ್​ನಲ್ಲಿ ಪ್ರಣಯ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಮೂರು ಬಾರಿಯ ಮಾಜಿ ವಿಶ್ವ ಜೂನಿಯರ್ ಚಾಂಪಿಯನ್ ಕುನ್ಲವುಟ್ ವಿಟಿಡ್ಸರ್ನ್ 18-21, 21-13, 21-14 ರಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರು.

ಈ ಸೋಲಿನ ನಡುವೆಯೂ ಭಾರತದ ಪರ ದಾಖಲೆ ಬರೆದ ಪ್ರಣಯ್, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ 5ನೇ ಭಾರತೀಯ ಪುರುಷರ ಸಿಂಗಲ್ಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಅನುಕ್ರಮದಲ್ಲಿ ಪದಕಗಳ ಬೇಟೆಯಲ್ಲಿ ಭಾರತ ನಿರ್ವಿವಾದ ದಾಖಲೆ ಬರೆದಿದೆ. ಪ್ರಣಯ್​ಗಿಂತ ಮೊದಲು, ಪುರುಷರ ಸಿಂಗಲ್ಸ್‌ನಲ್ಲಿ ಕಿಡಂಬಿ ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು), ಬಿಸಾಯಿ ಪ್ರಣೀತ್ (ಕಂಚು) ಮತ್ತು ಪ್ರಕಾಶ್ ಪಡುಕೋಣೆ (ಕಂಚು) ಪದಕ ಗೆದ್ದಿದ್ದರು.

ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧು ಒಂದು ಚಿನ್ನ (2019) ಸೇರಿದಂತೆ 5 ಸಿಂಗಲ್ಸ್ ಪದಕಗಳನ್ನು ಗೆದ್ದಿದ್ದಾರೆ. ಸೈನಾ ನೆಹ್ವಾಲ್ (ಬೆಳ್ಳಿ, ಕಂಚು) ಎರಡು ಪದಕ ಗೆದ್ದರೆ, ಮಹಿಳೆಯರ ಡಬಲ್ಸ್ ಜೋಡಿ ಜ್ವಾಲಾ ಗುಟ್ಟಾ ಮತ್ತು ಅಶ್ವಿನಿ ಪೊನ್ನಪ್ಪ 2011ರಲ್ಲಿ ಕಂಚಿನ ಪದಕ ಗೆದ್ದಿದ್ದರು.

ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ 2022ರಲ್ಲಿ ಕಂಚಿನ ಪದಕ ಗೆದ್ದಿತ್ತು.

Join Whatsapp
Exit mobile version