ಮೆಲ್ಬೋರ್ನ್; 2022ನೇ ಆವೃತ್ತಿಯ ಮೊದಲ ಗ್ರ್ಯಾನ್ ಸ್ಲ್ಯಾಮ್ ಆಸ್ಟ್ರೇಲಿಯನ್ ಓಪನ್’ಗೆ ಭಾನುವಾರ ಮೆಲ್ಬೋರ್ನ್’ನಲ್ಲಿ ತೆರೆಬಿದ್ದಿದೆ. ಪುರುಷರ ವಿಭಾಗದಲ್ಲಿ ಸ್ಪೇನ್’ನ ರಫೆಲ್ ನಡಾಲ್ ಹಾಗೂ ಮಹಿಳಾ ವಿಭಾಗದಲ್ಲಿ ವಿಶ್ವದ ಅಗ್ರ ಶ್ರೇಯಾಂಕಿತೆ, ಆಸೀಸ್’ನ ಆಶ್ಲಿ ಬಾರ್ಟಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ.
ಈ ನಡುವೆ ಈ ಬಾರಿಯ ಆಸ್ಟ್ರೇಲಿಯನ್ ಓಪನ್ ಟೂರ್ನಿಯ ಪ್ರಶಸ್ತಿ ವಿಜೇತರ ಬಹುಮಾನದ ಮೊತ್ತವು ಬಹಿರಂಗವಾಗಿದೆ.
ಚಾಂಪಿಯನ್ ಪಟ್ಟ ಅಲಂಕರಿಸಿರುವ ರಫೆಲ್ ನಡಾಲ್ ಹಾಗೂ ಆಶ್ಲಿ ಬಾರ್ಟಿ ಟ್ರೋಫಿ ಜೊತೆಗೆ ತಲಾ 15 ಕೋಟಿ ರೂಪಾಯಿ ನಗದು ಬಹುಮಾನವನ್ನು ಪಡೆಯಲಿದ್ದಾರೆ. ಇನ್ನು ಫೈನಲ್ ಫೈಟ್’ನಲ್ಲಿ ಅಮೋಘವಾಗಿ ಆಡಿದರೂ ಪುರುಷರ ವಿಭಾಗದಲ್ಲಿ ರನ್ನರ್’ಅಪ್ ಆದ ಡ್ಯಾನಿ ಮೆಡ್ವೆಡವ್ ಹಾಗೂ ಮಹಿಳೆಯರ ವಿಭಾಗದಲ್ಲಿ ಆಶ್ಲಿ ಬಾರ್ಟಿಗೆ ಶರಣಾದ ಡ್ಯಾನಿಯಲ್ ಕಾಲಿನ್ಸ್ ತಲಾ 8.25 ಕೋಟಿ ರೂಪಾಯಿ ಮೊತ್ತವನ್ನು ತಮ್ಮದಾಗಿಸಿಕೊಂಡಿದ್ದಾರೆ.
ನಡಾಲ್ ಈವರೆಗೆ ಗೆದ್ದಿರುವ ಬಹುಮಾನದ ಮೊತ್ತ 950 ಕೋಟಿ ರೂಪಾಯಿಗೂ ಅಧಿಕ !
ಆಸ್ಟ್ರೇಲಿಯನ್ ಓಪನ್ ಗೆಲುವಿನ ಮೂಲಕ ಟೆನಿಸ್ ಇತಿಹಾಸದಲ್ಲಿಯೇ ಅತೀ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಗೆದ್ದ ಆಟಗಾರ ಎಂಬ ಕೀರ್ತಿಗೆ ಸ್ಪೇನ್ ನ ರಫೆಲ್ ನಡಾಲ್ ಪಾತ್ರರಾಗಿದ್ದಾರೆ. 35 ವರ್ಷ ವಯಸ್ಸಿನ ನಡಾಲ್, ಇದುವರೆಗೂ 90 ಸಿಂಗಲ್ಸ್ ಕಿರೀಟ ಹಾಗೂ ಡಬಲ್ಸ್ ವಿಭಾಗದಲ್ಲಿ 11 ಟ್ರೋಫಿ’ಗಳ ಮೇಲೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ. ಆ ಮೂಲಕ 950 ಕೋಟಿ ರೂಪಾಯಿಗೂ ಅಧಿಕ ನಗದು ಬಹುಮಾನವನ್ನು ಜೇಬಿಗಿಳಿಸಿದ್ದಾರೆ.