ನವದೆಹಲಿ: ಭಾರತೀಯ ರೈಲಿನಲ್ಲಿ ಪ್ರತಿನಿತ್ಯ ಕೋಟ್ಯಂತರ ಜನರು ಪ್ರಯಾಣಿಸುತ್ತಾರೆ ಮತ್ತು ಲಕ್ಷಾಂತರ ರೈಲುಗಳು ಸಂಚರಿಸುತ್ತವೆ. ಇಷ್ಟು ಮಾತ್ರವಲ್ಲ ಬೈಕ್ ಮತ್ತು ಕಾರುಗಳನ್ನು ರೈಲುಗಳ ಮೂಲಕ ಕಳುಹಿಸಬಹುದಾಗಿದೆ.
ರೈಲು ಪ್ರಯಾಣ ದರ ಇತರೆ ಸಾರಿಗೆಗಳಿಗಿಂತ ಕಡಿಮೆಯಾಗಿರುತ್ತದೆ. ಅದೇ ರೀತಿ ಸರಕು ಸಾಗಣೆಗೂ ರೈಲ್ವೆ ತನ್ನದೇ ಆದ ದರಗಳನ್ನು ನಿಗದಿ ಮಾಡುತ್ತಾರೆ. ಒಂದು ಕಾರ್ ಅಥವಾ ಬೈಕ್ ನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಭಾರತೀಯ ರೈಲ್ವೆ ಎಷ್ಟು ಚಾರ್ಜ್ ಮಾಡುತ್ತೆ ಎಂಬುದನ್ನು ತಿಳಿಯೋಣ.
ರೈಲು ಪ್ರಯಾಣ ಸಂದರ್ಭದಲ್ಲಿ ನಿಮ್ಮ ಬೈಕ್ ನ್ನು ಸಹ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಅವಕಾಶವನ್ನು ರೈಲ್ವೆ ಕಲ್ಪಿಸುತ್ತದೆ. ನೀವು ಪ್ರಯಾಣಿಸುವ ರೈಲಿನಲ್ಲಿಯೇ ಲಗೇಜ್ ಕೋಚ್ ಸಹ ಇರುತ್ತದೆ. ಈ ಕೋಚ್ ನಲ್ಲಿ ನಿಮ್ಮ ಬೈಕ್ ಪಾರ್ಸೆಲ್ ಮಾಡಲಾಗುತ್ತದೆ. ನಿಮ್ಮ ಗಮ್ಯ ಸ್ಥಾನ ತಲುಪಿದ ಬಳಿಕ ರೈಲ್ವೆ ಇಲಾಖೆಯಿಂದ ನಿಮ್ಮ ಬೈಕ್ ಪಡೆದುಕೊಂಡು ಹೋಗಬಹುದು. ಇದಕ್ಕಾಗಿ ನೀವು ಮುಂಗಡವಾಗಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಕೆಲವು ಸಂದರ್ಭಗಳಲ್ಲಿ ಬೈಕ್ ತಲುಪುವ ಸಮಯದಲ್ಲಿ ವ್ಯತ್ಯಾಸ ಉಂಟಾಗಬಹುದು. ಬೈಕ್ ನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸುವಾಗ ನಿಗಧಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ನೀವು ಆಟೋಮೊಬೈಲ್ ಕ್ಯಾರಿಯಿಂಗ್ ವೆಹಿಕಲ್ ಮೂಲಕ ಕಾರನ್ನು ಕಳುಹಿಸಬಹುದು. ನೀವು ಅದನ್ನು ಪಾರ್ಸೆಲ್ ಆಗಿ ಬುಕ್ ಮಾಡಬೇಕು. ಈ ಮೂಲಕ ನಿಮ್ಮ ಕಾರ್ ನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಬಹುದು. ಕಾರ್ ಗಳನ್ನು ರವಾನಿಸಲು ವಿಶೇಷ ರೈಲುಗಳಿರುತ್ತವೆ. ಪ್ರಯಾಣದ ಸಂದರ್ಭದಲ್ಲಿ ಕಾರ್ ಗಳನ್ನು ಸಾಗಿಸುವ ಗೂಡ್ಸ್ ರೈಲುಗಳನ್ನು ನೀವು ಗಮನಿಸಿರಬಹುದು. ಎಷ್ಟು ದೂರ ನಿಮ್ಮ ವಾಹನ ಕಳುಹಿಸುತ್ತೀರಿ ಎಂಬುದರ ಮೇಲೆ ಶುಲ್ಕ ನಿಗಧಿ ಮಾಡಲಾಗುತ್ತದೆ. ನಿಮ್ಮ ವಾಹನ ಹೆಚ್ಚು ದೂರ ಹೋದಂತೆ ಶುಲ್ಕವೂ ಏರಿಕೆಯಾಗುತ್ತದೆ.
ಬೈಕ್ ನ್ನು 500 ಕಿಮೀ ದೂರದವರೆಗೆ ಕಳುಹಿಸುತ್ತಿದ್ದರೆ ಅಂದಾಜು 2,000 ರೂಪಾಯಿ ಚಾರ್ಜ್ ಮಾಡಲಾಗುತ್ತದೆ. ಇನ್ನು ಕಾರ್ ನ್ನು 500 ಕಿಮೀವರೆಗೆ ಕಳುಹಿಸುತ್ತಿದ್ದರೆ 8,000 ರೂಪಾಯಿವರೆಗೆ ಚಾರ್ಜ್ ಮಾಡಲಾಗುತ್ತದೆ. ಪ್ಯಾಕಿಂಗ್ ಗಾಗಿ ಪ್ರತ್ಯೇಕ ಶುಲ್ಕ ಪಾವತಿಸಬೇಕಾಗುತ್ತದೆ.