Home ಟಾಪ್ ಸುದ್ದಿಗಳು “ಎಂಟು ವರ್ಷದಲ್ಲಿ ಎಷ್ಟು ಕಾಶ್ಮೀರಿ ಪಂಡಿತ ಕುಟುಂಬವನ್ನು ವಾಪಸ್ ಕರೆ ತಂದಿದ್ದೀರಿ?”: ಕೇಂದ್ರ ಸರಕಾರಕ್ಕೆ ಕೇಜ್ರಿವಾಲ್...

“ಎಂಟು ವರ್ಷದಲ್ಲಿ ಎಷ್ಟು ಕಾಶ್ಮೀರಿ ಪಂಡಿತ ಕುಟುಂಬವನ್ನು ವಾಪಸ್ ಕರೆ ತಂದಿದ್ದೀರಿ?”: ಕೇಂದ್ರ ಸರಕಾರಕ್ಕೆ ಕೇಜ್ರಿವಾಲ್ ಪ್ರಶ್ನೆ

ದೆಹಲಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನೆಮಾ ಮುಂದಿರಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕಳೆದ ಎಂಟು ವರ್ಷಗಳಲ್ಲಿ ಒಂದೇ ಒಂದು ಕಾಶ್ಮೀರಿ ಪಂಡಿತ ಕುಟುಂಬವನ್ನಾದರೂ ವಾಪಸ್ ಮರಳಿ ಕರೆ ತರಲು ಬಿಜೆಪಿಗೆ ಸಾಧ್ಯವಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಇದೆಲ್ಲವೂ ಬಿಜೆಪಿಯ ಪೊಳ್ಳು ರಾಜಕೀಯ ಎಂದು ಕಿಡಿ ಕಾರಿದ್ದಾರೆ.

ಅಲ್ಲದೇ, ಶನಿವಾರ ಮತ್ತೊಮ್ಮೆ ಸಿನೆಮಾವನ್ನು ಯೂಟ್ಯೂಬ್ ಗೆ ಅಪ್ಲೋಡ್ ಮಾಡುವ ಸಲಹೆ ನೀಡಿದ ದೆಹಲಿ ಸಿಎಂ, ಅದರಿಂದ ಬರುವ ಆದಾಯವನ್ನು ಕಾಶ್ಮೀರಿ ಪಂಡಿತರ ಕಲ್ಯಾಣಕ್ಕಾಗಿ ವಿನಿಯೋಗಿಸಿ ಅಂತಾ ಸವಾಲೆಸೆದರು.

ಕಳೆದ ಗುರುವಾರವಷ್ಟೇ ಕಾಶ್ಮೀರ್ ಫೈಲ್ಸ್ ಸಿನೆಮಾಕ್ಕೆ ನೀಡಿರುವ ತೆರಿಗೆ ವಿನಾಯಿತಿಗೆ ತಿರುಗೇಟು ನೀಡಿದ್ದ ಕೇಜ್ರಿವಾಲ್, ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿ ಎಲ್ಲರೂ ಉಚಿತವಾಗಿಯೇ ನೋಡಲಿ ಎಂದು ವಿಧಾನಸಭೆಯ ಅಧಿವೇಶನದಲ್ಲಿ ಹೇಳಿಕೆ ನೀಡುವ ಮೂಲಕ ಭಾರೀ ಸುದ್ದಿಗೆ ಗ್ರಾಸವಾಗಿದ್ದರು.

Join Whatsapp
Exit mobile version