ಗದಗ: ಸರಕಾರಿ ಬಸ್ ಹಾಗೂ ಲಾರಿ ಮಧ್ಯೆ ಮುಖಾಮುಖಿ ಡಿಕ್ಕಿ ಆದ ಪರಿಣಾಮವಾಗಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊಪ್ಪಳ ರಸ್ತೆಯ ಹಳ್ಳಿಕೇರಿ- ಬನ್ನಿಕೊಪ್ಪ ನಡುವೆ ಜರುಗಿದೆ.
ಭೀಕರ ಘಟನೆಯಲ್ಲಿ ಬಸ್ ನುಜ್ಜುಗುಜ್ಜಾಗಿದ್ದು, ಲಾರಿ ಚಾಲಕ ಹಾಗೂ ಬಸ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಲಾರಿ ಚಾಲಕ ವಿನೋದಕುಮಾರ್ ಹಾಗೂ ಕೊಪ್ಪಳ ಜಿಲ್ಲೆಯ ಭಾಗ್ಯನಗರ ನಿವಾಸಿ ಗೀತಾ ಎನ್ನಲಾಗಿದೆ. ಮೃತ ಮಹಿಳೆ ಸವದತ್ತಿ ತಾಲೂಕಿನ ಯಲ್ಲಮ್ಮನಗುಡ್ಡಕ್ಕೆ ಹೊರಟಿದ್ದರು ಎನ್ನಲಾಗಿದೆ.
ಕೊಪ್ಪಳದಿಂದ ಗದಗ ಕಡೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಾಗೂ ಗದಗದಿಂದ ಕೊಪ್ಪಳಕ್ಕೆ ತೆರಳುತ್ತಿದ್ದ ತಮಿಳುನಾಡು ಮೂಲದ ಲಾರಿ ನಡುವೆ ಈ ಅಪಘಾತ ಸಂಭವಿಸಿದೆ.
ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪ್ರಭುಗೌಡ, ಇನ್ಸ್‌ಪೆಕ್ಟರ್ ಮಂಜುನಾಥ್ ಕುಸಗಲ್ ಹಾಗೂ ಸಿಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.