ಶಾರ್ಜಾ: ಏಷ್ಯಾ ಕಪ್ ಟಿ20 ಟೂರ್ನಿಯ ನಿರ್ಣಾಯಕ ಪಂದ್ಯದಲ್ಲಿ ದುರ್ಬಲ ಹಾಂಕಾಂಗ್ ವಿರುದ್ಧ 155 ರನ್‌ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿದ ಪಾಕಿಸ್ತಾನ, ಸೂಪರ್-4 ಹಂತಕ್ಕೆ ತೇರ್ಗಡೆಯಾಗಿದೆ. ಈಗಾಗಲೇ ಅಪ್ಘಾನಿಸ್ತಾನ, ಭಾರತ ಹಾಗೂ ಶ್ರೀಲಂಕಾ ತಂಡಗಳು ಸೂಪರ್-4 ಹಂತ ಪ್ರವೇಶಿಸಿದ್ದು, ನಾಲ್ಕನೇ ತಂಡವಾಗಿ ಪಾಕಿಸ್ತಾನ ಪ್ರವೇಶ ಪಡೆದಿದೆ.
ಪಾಕಿಸ್ತಾನ ನೀಡಿದ್ದ 194 ರನ್‌ಗಳ ಕಠಿಣ ಗುರಿಯನ್ನು ಬೆನ್ನತ್ತುವ ವೇಳೆ, ಕ್ರಿಕೆಟ್ ಶಿಶು ಹಾಂಕಾಂಗ್, ಕೇವಲ 38 ರನ್‌ಗಳಿಸುವಷ್ಟರಲ್ಲೇ ಆಲೌಟ್ ಆಯಿತು. ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ದಾಖಲಾದ ಕನಿಷ್ಠ ಮೊತ್ತವಾಗಿದೆ. ಶ್ರೀಲಂಕಾ ವಿರುದ್ಧ 39 ರನ್‌ಗಳಿಗೆ ಆಲೌಟ್ ಆಗಿದ್ದ ನೆದರ್‌ಲ್ಯಾಂಡ್ ಇದುವರೆಗಿನ ಕನಿಷ್ಠ ಮೊತ್ತದ ದಾಖಲೆಯನ್ನು ಹೊಂದಿತ್ತು.
ಪಾಕ್ ಬಿಗು ಬೌಲಿಂಗ್ ದಾಳಿಯೆದುರು ಬೆದರಿದ ಹಾಂಕಾಂಗ್ ತಂಡದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ವಿಶೇಷವೆಂದರೆ ಯಾವುದೇ ಆಟಗಾರ ಎರಡಂಕಿಯ ಮೊತ್ತವನ್ನೂ ದಾಟಲಿಲ್ಲ. ನಾಯಕ, ಆರಂಭಿಕ ನಿಝಾಕತ್ ಖಾನ್ (8 ರನ್) ಟಾಪ್ ಸ್ಕೋರರ್ ಎನಿಸಿದರು. ಇಬ್ಬರು ಶೂನ್ಯಕ್ಕೆ ನಿರ್ಗಮಿಸಿದರು. ಖಾತೆ ತೆರೆಯದ ಎಹ್ಸಾನ್ ಖಾನ್ ಅಜೇಯರಾಗುಳಿದರು.
ಪಾಕಿಸ್ತಾನದ ಪರ ಅಮೋಘ ದಾಳಿ ಸಂಘಟಿಸಿದ ಶಾದಾಬ್ ಖಾನ್ 2.4 ಓವರ್‌ಗಳ ದಾಳಿಯಲ್ಲಿ ಕೇವಲ 8 ರನ್ ನೀಡಿ 4 ವಿಕೆಟ್ ಪಡೆದರು. ಎರಡು ಓವರ್ ಎಸೆದ ಮುಹಮ್ಮದ್ ನವಾಝ್ 5 ರನ್ ನೀಡಿ 3 ವಿಕೆಟ್ ಪಡೆದರು. ನಸೀಮ್ ಶಾ 2 ವಿಕೆಟ್ ಮತ್ತು ಶಾನವಾಝ್ ದಹಾನಿ ಒಂದು ವಿಕೆಟ್ ಪಡೆದರು.
ಶಾರ್ಜಾ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ಮುಹಮ್ಮದ್ ರಿಝ್ವಾನ್ ಮತ್ತು ಫಖರ್ ಝಮಾನ್ ಗಳಿಸಿದ ಆಕರ್ಷಕ ಅರ್ಧಶತಕಗಳ ನೆರವಿನಿಂದ ಎರಡು ವಿಕೆಟ್ ನಷ್ಟದಲ್ಲಿ 193 ರನ್‌ಗಳಿಸಿತ್ತು.