Home ಟಾಪ್ ಸುದ್ದಿಗಳು ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಗೃಹ ಸಚಿವರ ದಿಢೀರ್ ಭೇಟಿ, ಪರಿಶೀಲನೆ

ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಗೃಹ ಸಚಿವರ ದಿಢೀರ್ ಭೇಟಿ, ಪರಿಶೀಲನೆ

ಬೆಂಗಳೂರು: ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಿಢೀರ್ ಭೇಟಿ ನೀಡಿರುವ ಸಚಿವರು, ಕೆಲವು ಹೈ ಸೆಕ್ಯೂರಿಟಿ ಬ್ಯಾರಕ್ ಗಳ ಪರಿಶೀಲನೆ ಹಾಗೂ ಮೊಬೈಲ್ ಅಥವಾ ಇನ್ನಿತರ ನಿಷೇಧಿತ ವಸ್ತುಗಳನ್ನು ಜೈಲಿನೊಳಗೆ ಸಾಗಿಸಲಾಗಿದೆಯೇ ಎಂಬುದರ ಬಗ್ಗೆ ವಿಚಾರಣೆ ಮಾಡಿ ಸ್ವತಃ ತಪಾಸಣೆ ನಡೆಸಿದರು.
ತಮ್ಮ ಭೇಟಿಯ ಸಮಯದಲ್ಲಿ ಕಾರಾಗೃಹದಲ್ಲಿ, ಮಹಿಳಾ ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಸಚಿವರು ಕೈದಿಗಳ ಜತೆಗೆ ಸಂವಾದ ನಡೆಸಲಿದ್ದಾರೆ.

ಭೇಟಿಯ ಸಂದರ್ಭದಲ್ಲಿ, ಕಾರಾಗೃಹದ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜತೆ ಸಮಾಲೋಚನೆ ನಡೆಸಿ, ಜೈಲಿನ ಒಳಗೆ, ಕೈದಿಗಳು ಎದುರಿಸುತ್ತಿರುವ ಸಮಸ್ಯೆಗಳು, ರಕ್ಷಣಾ ವ್ಯವಸ್ಥೆ, ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಿದ್ದೇನೆ ಎಂದರು.

ಇತ್ತೀಚೆಗೆ ಶಿವಮೊಗ್ಗದ ಬಜರಂಗ ದಳದ ಹರ್ಷ ಹತ್ಯೆಯ ಆರೋಪಿಗಳು ಜೈಲಿನಿನಲ್ಲಿ ಮೊಬೈಲ್ ಫೋನ್  ಬಳಕೆ ಬಗ್ಗೆ, ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಗಂಭೀರವಾದ ತನಿಖೆ ನಡೆಯುತ್ತಿದ್ದು, ಇದುವರೆಗೆ ಒಬ್ಬನನ್ನು ಬಂಧಿಸಲಾಗಿದೆ ಎಂದರು.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿ ನಡೆದ ಅಕ್ರಮ ಚಟುವಟಿಕೆಗಳ ಬಗ್ಗೆ ಮುರುಗನ್ ಸಮಿತಿ ನೀಡಿದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ಹಲವಾರು ಅಧಿಕಾರಿಗಳನ್ನು ಜೈಲಿನಿಂದ ವರ್ಗಾವಣೆ ಮಾಡಲಾಗಿದೆ. ಕೆಲವು ಅಧಿಕಾರಿಗಳ ಸೇವೆಯನ್ನು ಅಮಾನತ್ತಿನಲ್ಲಿಡಲು ಸಹ ಶಿಫಾರಸು ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.

 ಕೇಂದ್ರ ಕಾರಾಗೃಹಗಳಲ್ಲಿ, ಅತ್ಯಾಧುನಿಕ ತಂತ್ರಜ್ಞಾನದ ಮೊಬೈಲ್ ಜಾಮರ್ ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, 5G ಸಾಮರ್ಥ್ಯದವರೆಗಿನ ಮೊಬೈಲ್ ಕರೆಗಳನ್ನು ನಿಷ್ಕ್ರಿಯಗೊಳಿಸುವಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜೈಲಿನ ಒಳಗಡೆ ಅಕ್ರಮವಾಗಿ ಮಾದಕ ವಸ್ತುಗಳ ಪೂರೈಕೆ, ಕಾನೂನು ಬಾಹಿರವಾಗಿ ಕೈದಿಗಳಿಗೆ ವಿಶೇಷ ಸವಲತ್ತುಗಳನ್ನು ನೀಡುವುದು ಹಾಗೂ ಮೊಬೈಲ್ ಬಳಕೆಯಂಥ ಅಕ್ರಮ ಚಟುವಟಿಕೆಗಳಿಗೆ ಅಂಕುಶ ಹಾಕಬೇಕು ಎಂದು ಸೂಚಿಸಿದ್ದೇನೆ ಎಂದು ಗೃಹ ಸಚಿವರು ತಿಳಿಸಿದರು.

ಇತ್ತೀಚೆಗೆ  ಜೈಲಿನೊಳಗೆ ಫುಟ್ ಬಾಲ್ ನಲ್ಲಿ ಮಾದಕ ವಸ್ತುಗಳನ್ನು ತುಂಬಿಸಿ ಜೈಲಿನೊಳಕ್ಕೆ ಎಸೆದ ಘಟನೆ ಬಗ್ಗೆ, ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು, ಸಚಿವರಿಗೆ ಮಾಹಿತಿ ನೀಡಿದರು

ಜೈಲಿಗೆ ಕರೆತರಲಾದ ವ್ಯಕ್ತಿಯೊಬ್ಬ ಕಾಲಿಗೆ ಬ್ಯಾಂಡೇಜ್ ಜೊತೆ ಕಟ್ಟಿಕೊಂಡಿದ್ದ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಹಾಗೂ ಈ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಯನ್ನೂ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ದಲ್ಲಿ ಕೈದಿಗಳ ಭೇಟಿಗೆ ಬರುವ ಕುಟುಂಬ ಸದಸ್ಯರ ಹಾಗೂ ಇತರರಿಂದ, ಅಕ್ರಮವಾಗಿ ಹಣ ವಸೂಲಿ ಆಗುತ್ತಿದೆ ಎಂಬ ಬಗ್ಗಯೂ ಪ್ರಸ್ತಾಪಿಸಲಾಗಿದೆ ಹಾಗೂ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಲಾಯಿತು ಎಂದರು.

ಭೇಟಿ ಸಮಯದಲ್ಲಿ ಕಾರಾಗೃಹದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ರಾಜ್ಯ ಕಾರಾಗೃಹಗಳ ಮುಖ್ಯಸ್ಥ ಅಲೋಕ್ ಮೋಹನ್, ಕೇಂದ್ರ ಕಾರಾಗೃಹ ಮುಖ್ಯಸ್ಥ ರಮೇಶ್ ಹಾಗೂ ಇತರ ಹಿರಿಯ ಅಧಿಕಾರಿಗಳು  ಉಪಸ್ಥಿತರಿದ್ದರು.

Join Whatsapp
Exit mobile version