Home ಟಾಪ್ ಸುದ್ದಿಗಳು ಗೃಹಸಚಿವರ ನಿವಾಸಕ್ಕೆ ಮುತ್ತಿಗೆ ರಂಪಾಟ; ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ

ಗೃಹಸಚಿವರ ನಿವಾಸಕ್ಕೆ ಮುತ್ತಿಗೆ ರಂಪಾಟ; ಎಬಿವಿಪಿ ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ

ಬೆಂಗಳೂರು: ಬಿಜೆಪಿ ಯುವ ಮುಖಂಡ ಪ್ರವೀಣ್ ಕೊಲೆ ಖಂಡಿಸಿ ನಗರದ ಗೃಹ ಸಚಿವರ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ರಂಪಾಟ ನಡೆಸಲು‌ ಮುಂದಾದ ಎಬಿವಿಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಜಯಮಹಲ್ ರಸ್ತೆಯಲ್ಲಿನ ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಮನೆಗೆ ಮುತ್ತಿಗೆ ಹಾಕಿದ ನೂರಾರು ಎಬಿವಿಪಿ ಕಾರ್ಯಯರ್ತರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಗೃಹ ಇಲಾಖೆಯನ್ನು ನಿಭಾಯಿಸುವುದರಲ್ಲಿ ಆರಗ ಜ್ಞಾನೇಂದ್ರ ಅವರು ವಿಫಲರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ನಿಭಾಯಿಸುವಲ್ಲಿ ವಿಫಲರಾದ ಗೃಹ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಇದರ ಜೊತೆಗೆ ಎಸ್‍ಡಿಪಿಐ, ಪಿಎಫ್‍ಐ ನಿಷೇಧಿಸಬೇಕು ಎಂದು ಒತ್ತಾಯಿಸಿದ ಎಬಿವಿಪಿ ಕಾರ್ಯಕರ್ತರು ಅಸಮರ್ಥ ಸಿಎಂ ಬಸವರಾಜ ಬೊಮ್ಮಾಯಿ ಎಂದು ಘೋಷಣೆ ಕೂಗಿದ್ದಾರೆ. ಈ ಪ್ರತಿಭಟನೆ ಅತಿರೇಕಕ್ಕೆ ಹೋಗಿದ್ದು, ಎಬಿವಿಪಿ ಕಾರ್ಯಕರ್ತರು ಗೇಟ್ ಹಾರಿ ಗೃಹ ಸಚಿವರ ನಿವಾಸಕ್ಕೆ ನುಗ್ಗಿದ್ದಾರೆ.

ಈ ವೇಳೆ ಅಲ್ಲಿದ್ದ ಪೊಲೀಸರು ಎಬಿವಿಪಿ ಕಾರ್ಯಕರ್ತರನ್ನು ಬಾಗಿಲ ಬಳಿ ತಡೆದಾಗ ಪೊಲೀಸರು ಹಾಗೂ ವಿದ್ಯಾರ್ಥಿ ಕಾರ್ಯಕರ್ತರ ನಡುವೆ ನೂಕಾಟ ತಳ್ಳಾಟ, ವಾಗ್ವಾದ ನಡೆದಿದೆ.

ಅಕ್ರೋಶಗೊಂಡ ಕೆಲ ಕಾರ್ಯಕರ್ತರು ನಿವಾಸದ ಬಳಿಯ ಹೂ ಕುಂಡಗಳನ್ನು ಧ್ವಂಸಗೈದು ಆಕ್ರೋಶ ವ್ಯಕ್ತಪಡಿಸಿದರು. ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು ನೂರಾರು ಎಬಿವಿಪಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ.

ಗೃಹ ಸಚಿವ ಆರಗ ಜ್ಞಾನೇಂದ್ರ ಶಿವಮೊಗ್ಗ ಜಿಲ್ಲೆಯಲ್ಲಿ ಇದ್ದಾರೆ.

Join Whatsapp
Exit mobile version