Home ರಾಜ್ಯ ‘ಗೃಹ ಆರೋಗ್ಯ ಯೋಜನೆ’: ಜನ ಸಾಮಾನ್ಯರಿಗೆ ಏನು ಉಪಯೋಗ? ಇಲ್ಲಿದೆ ವಿವರ

‘ಗೃಹ ಆರೋಗ್ಯ ಯೋಜನೆ’: ಜನ ಸಾಮಾನ್ಯರಿಗೆ ಏನು ಉಪಯೋಗ? ಇಲ್ಲಿದೆ ವಿವರ

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜನರು ತಮಗೆ ಸಕ್ಕರೆ ಕಾಯಿಲೆ, ರಕ್ತದೊತ್ತಡ ಇದ್ದರೂ ತಪಾಸಣೆ ಮಾಡಿಸಿಕೊಳ್ಳುತ್ತಿಲ್ಲ, ಚಿಕಿತ್ಸೆ ಪಡೆದುಕೊಳ್ಳುತ್ತಿಲ್ಲ. ಇದಕ್ಕಾಗಿ ಆರೋಗ್ಯ ಇಲಾಖೆ, ರಾಜ್ಯದ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಇಂದಿನಿಂದ ರಾಜ್ಯದಲ್ಲಿ ಹೊಸ ಯೋಜನೆಯನ್ನು ಜಾರಿಗೊಳಿಸುತ್ತಿದೆ.


ಏನಿದು ಗೃಹ ಆರೋಗ್ಯ ಯೋಜನೆ?
ಹಳ್ಳಿ ಪ್ರದೇಶಗಳ ಜನರ ಆರೋಗ್ಯದ ಮಟ್ಟ ಸುಧಾರಿಸುವ ಮತ್ತು ಸಾಂಕ್ರಾಮಿಕವಲ್ಲದ ರೋಗಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಯೋಜನೆಯೇ ಗೃಹ ಆರೋಗ್ಯ ಯೋಜನೆ. ಗೃಹ ಆರೋಗ್ಯ ಯೋಜನೆ ಮೂಲಕ ಆರೋಗ್ಯ ಇಲಾಖೆ ಸಿಬ್ಬಂದಿ ಮನೆಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡಲಿದ್ದಾರೆ. ಬಿಪಿ, ಶುಗರ್ ಇದ್ದವರಿಗೆ ಇನ್ನು ಮುಂದೆ ಮನೆಗೆ ಔಷಧಗಳನ್ನು ಉಚಿತವಾಗಿ ತಲುಪಿಸಲಾಗುತ್ತದೆ.


ಈ ಮೊದಲು ರಕ್ತದೊತ್ತಡ, ಸಕ್ಕರೆ ಕಾಯಿಲೆ ಅಂದರೆ ಅದು ಶ್ರೀಮಂತರ ಕಾಯಿಲೆ ಅಂತ ಹೇಳುತ್ತಿದ್ದರು. ಆಧುನಿಕ ಜೀವನ ಶೈಲಿ, ಅತಿಯಾದ ಒತ್ತಡದಲ್ಲಿ ಕೆಲಸ ಮಾಡೋದು, ಆರೋಗ್ಯದ ಬಗ್ಗೆ ಹೆಚ್ಚಿನ ಜನರು ಕಾಳಜಿ ವಹಿಸದೇ ಇರೋದು, ನಿಯಮಿತವಾಗಿ ವ್ಯಾಯಾಮ, ಉತ್ತಮ ಆಹಾರ ಪದ್ದತಿಯನ್ನು ಅನುಸರಿಸದೇ ಇರೋದರಿಂದ ಹೆಚ್ಚಿನ ಜನರಿಗೆ ಬಿಪಿ, ಶುಗರ್ ಬರಲು ಕಾರಣವಾಗುತ್ತಿದೆ. ಅನೇಕರು ಆರಂಭದಲ್ಲಿಯೇ ತಪಾಸಣೆ ಮಾಡಿಸಿಕೊಂಡು, ಅದಕ್ಕೆ ಬೇಕಾದ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ.


ರಾಜ್ಯದ ಗ್ರಾಮೀಣ ಭಾಗ ಸೇರಿದಂತೆ ಅನೇಕರು ತಮಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆಯ ಲಕ್ಷಣಗಳು ಇದ್ದರು ಕೂಡಾ ತಪಾಸಣೆ ಮಾಡಿಸಿಕೊಳ್ಳದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದೇ ಅನೇಕರ ಜೀವಕ್ಕೆ ಕುತ್ತು ತರುತ್ತಿದೆ. ಸಕ್ಕರೆ ಕಾಯಿಲೆ, ಮತ್ತು ರಕ್ತದೊತ್ತದಿಂದ ಹೃದಯಾಘಾತ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅನೇಕ ಆರೋಗ್ಯ ಸಮಸ್ಯೆಗಳಿಗೆ ರಕ್ತದೊತ್ತಡ, ಸಕ್ಕರೆ ಖಾಯಿಲೆಯೇ ಪ್ರಮುಖವಾಗಿ ಕಾರಣವಾಗಿದೆ. ಇದನ್ನು ಮನಗಂಡೇ ಇದೀಗ ರಾಜ್ಯ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಹೊಸದೊಂದು ಆರೋಗ್ಯ ಯೋಜನೆಯನ್ನು ಜಾರಿಗೊಳಿಸುತ್ತಿದೆ.


ಗೃಹ ಆರೋಗ್ಯ ಯೋಜನೆಯಡಿ, ಆರೋಗ್ಯ ಇಲಾಖೆಯ ಸಿಬ್ಬಂದಿ, ರಾಜ್ಯದ ಪ್ರತಿಯೊಬ್ಬರ ಮನೆಗೆ ಹೋಗಿ, ಅವರ ಆರೋಗ್ಯ ತಪಾಸಣೆ ನಡೆಸಲಿದೆ. ನಗರ, ಗ್ರಾಮೀಣ ಪ್ರದೇಶದಲ್ಲಿ ಮುಂದಿನ ಕೆಲ ದಿನಗಳ ಕಾಲ ಮನೆಮನೆಗೆ ಹೋಗಿ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಮಾಹಿತಿ ಪಡೆಯುವದು, ತಪಾಸಣೆ ಮಾಡುತ್ತಾರೆ. ಪ್ರಮುಖವಾಗಿ ಬಿಪಿ, ಶುಗರ್ ಇದೆಯಾ ಎಂಬುದನ್ನು ತಪಾಸಣೆ ನಡೆಸಿ, ಮಾಹಿತಿಯನ್ನು ಸಂಗ್ರಹಿಸಲಿದ್ದಾರೆ. ಯಾರಿಗೆಲ್ಲಾ ಬಿಪಿ, ಶುಗರ್ ಇದೆಯೋ ಅವರ ಮಾಹಿತಿಯನ್ನು ಸಂಗ್ರಹಿಸುವ ಕೆಲಸ ಮಾಡುತ್ತಾರೆ. ಅವರಿಗೆ ಚಿಕಿತ್ಸೆಯ ಅವಶ್ಯಕತೆ ಇದ್ದರೆ ಅವರು ತಗೆದುಕೊಳ್ಳಬೇಕಾದ ಔಷಧಿಗಳನ್ನು ಮನೆ ಬಾಗಿಲಿಗೆ ಹೋಗಿ ತಲುಪಿಸಲಿದ್ದಾರೆ. ಇನ್ನು ಔಷಧಗಳನ್ನು ಉಚಿತವಾಗಿ ಪ್ರತಿ ತಿಂಗಳು ನಿರಂತರವಾಗಿ ಮನೆಗೆ ಕಳುಹಿಸುವ ವ್ಯವಸ್ಥೆಯನ್ನು ಯೋಜನೆಯಡಿ ಮಾಡಲಾಗಿದೆ. ಅನೇಕರು ಸರ್ಕಾರಿ ಆಸ್ಪತ್ರೆಗೆ ಬಂದು ತಗೆದುಕೊಂಡು ಹೋಗಬಹುದಾಗಿದೆ. ತಗೆದುಕೊಂಡು ಹೋಗಲಿಕ್ಕಾಗದೇ ಇದ್ದವರಿಗೆ, ಮನೆಮನೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ಮೂಲಕ ತಲುಪಿಸುವ ಕೆಲಸವನ್ನು ಯೋಜನೆ ಮೂಲಕ ಮಾಡಲಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Join Whatsapp
Exit mobile version