Home ಟಾಪ್ ಸುದ್ದಿಗಳು ಯುದ್ಧಾಪರಾಧಗಳಿಗಾಗಿ ಇಸ್ರೇಲನ್ನು ಹೊಣೆಯಾಗಿಸಬೇಕು: ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ

ಯುದ್ಧಾಪರಾಧಗಳಿಗಾಗಿ ಇಸ್ರೇಲನ್ನು ಹೊಣೆಯಾಗಿಸಬೇಕು: ನಿರ್ಣಯ ಅಂಗೀಕರಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ

ಜಿನೆವಾ: ಗಾಝಾ ಪಟ್ಟಿಯಲ್ಲಿ ಮಾನವೀಯತೆಯ ವಿರುದ್ಧದ ಹಾಗೂ ಸಂಭವನೀಯ ಯುದ್ಧಾಪರಾಧಗಳಿಗಾಗಿ ಇಸ್ರೇಲನ್ನು ಹೊಣೆಯಾಗಿಸಬೇಕೆಂದು ಕರೆ ನೀಡುವ ನಿರ್ಣಯವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಅಂಗೀಕರಿಸಿದೆ.

ನಿರ್ಣಯದ ಪರವಾಗಿ 22 ರಾಷ್ಟ್ರಗಳು ಮತ ಹಾಕಿದರೆ, ಅಮೆರಿಕ, ಜರ್ಮನಿ ಸೇರಿದಂತೆ 6 ದೇಶಗಳು ಮಾತ್ರ ವಿರುದ್ಧವಾಗಿ ಮತ ಹಾಕಿವೆ. ನಿರ್ಣಯ ಅಂಗೀಕಾರಗೊಂಡ ಬಳಿಕ ಹಲವು ಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಹರ್ಷೋದ್ಘಾರ ಮಾಡಿದ್ದಾರೆ.

13 ರಾಷ್ಟ್ರಗಳು ಮತದಾನದಿಂದ ದೂರ ಉಳಿದಿವೆ.

ನಿರ್ಣಯವು, ಇಸ್ರೇಲ್ ಪ್ಯಾಲೆಸ್ತೀನ್ ಪ್ರದೇಶದಲ್ಲಿ ಸಂಭವನೀಯ ಯುದ್ಧಾಪರಾಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧ ಸೇರಿದಂತೆ ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆ ಹಾಗೂ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಗಂಭೀರ ಉಲ್ಲಂಘನೆಯ ಬಗ್ಗೆ ತೀವ್ರ ಕಳವಳವನ್ನು ವ್ಯಕ್ತಪಡಿಸಿದೆ. 33,000ಕ್ಕೂ ಅಧಿಕ ಜನರ ಹತ್ಯೆಗೆ ಕಾರಣವಾದ ಗಾಝಾ ಯುದ್ಧದಲ್ಲಿ ಜನಾಂಗೀಯ ಹತ್ಯೆ ನಡೆದಿರುವ ಸಾಧ್ಯತೆಯ ಬಗ್ಗೆ ಎಚ್ಚರಿಕೆ ನೀಡಿರುವ ಮಂಡಳಿ ಇಸ್ರೇಲ್‍ಗೆ ಎಲ್ಲಾ ಶಸ್ತ್ರಾಸ್ತ್ರಗಳ ಮಾರಾಟವನ್ನು ಸ್ಥಗಿತಗೊಳಿಸುವಂತೆ ಆಗ್ರಹಿಸಿದೆ. ಅಂತಾರಾಷ್ಟ್ರೀಯ ಮಾನವೀಯ ಕಾನೂನು ಮತ್ತು ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನಿನ ಎಲ್ಲಾ ಉಲ್ಲಂಘನೆಗೆ ಹೊಣೆಗಾರಿಕೆಯನ್ನು ಖಾತ್ರಿಪಡಿಸುವ ಅಗತ್ಯವನ್ನು ಒತ್ತಿಹೇಳಿದೆ.

ಹಮಾಸ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆ ಸಂದರ್ಭ ನಾಗರಿಕ ಸಾವುನೋವುಗಳನ್ನು ತಪ್ಪಿಸಲು ಮತ್ತು ಮಾನವೀಯ ನೆರವು ಕಾರ್ಯಕರ್ತರು ತಮ್ಮ ಕಾರ್ಯವನ್ನು ಸುರಕ್ಷಿತ ರೀತಿಯಲ್ಲಿ ಮುಂದುವರಿಸುವುದನ್ನು ಖಾತರಿ ಪಡಿಸಲು ಇಸ್ರೇಲ್ ಅನ್ನು ಪದೇ ಪದೇ ಆಗ್ರಹಿಸಲಾಗಿದೆ. ಆದರೆ ಇದು ಸಾಧ್ಯವಾಗಿಲ್ಲ. ಕೇವಲ 6 ತಿಂಗಳಲ್ಲೇ ಆಧುನಿಕ ಯುಗದ ಯಾವುದೇ ಯುದ್ಧಕ್ಕಿಂತ ಹೆಚ್ಚು ಪ್ರಜೆಗಳು ಈ ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ’ ಎಂದು ಅಮೆರಿಕದ ಖಾಯಂ ಪ್ರತಿನಿಧಿ ಮಿಷೆಲ್ ಟೇಲರ್ ಹೇಳಿದ್ದಾರೆ.

ನಿರ್ಣಯದಲ್ಲಿ ಅಕ್ಟೋಬರ್ 7ರ ದಾಳಿಗಾಗಿ ಹಮಾಸ್ ಅನ್ನು ಖಂಡಿಸುವ ಪದಗಳಿಲ್ಲ ಅಥವಾ ಈ ಕೃತ್ಯಗಳ ಭಯೋತ್ಪಾದಕ ಸ್ವರೂಪದ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದ್ದರಿಂದ ನಿರ್ಣಯದ ವಿರುದ್ಧ ಮತ ಹಾಕಿರುವುದಾಗಿ ಅಮೆರಿಕ ಹೇಳಿದೆ.

Join Whatsapp
Exit mobile version