ಮಂಗಳೂರು : ಜನ ಸಾಮಾನ್ಯರಲ್ಲಿ ಜಾಗೃತಿ ಮೂಡಿಸುವ ಮೂಲಕ ಹೆಚ್ ಐವಿ ಸೋಂಕನ್ನು ತಡೆಗಟ್ಟಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ಎ.ಜೆ. ಶಿಲ್ಪ ಹೇಳಿದರು.
ನಗರದ ದೇರಳಕಟ್ಟೆಯ ಯೆಂಡ್ಯೂರೆನ್ಸ್ ಸಭಾಂಗಣದಲ್ಲಿ ಡಿ.1ರಂದು ನಡೆದ ವಿಶ್ವ ಏಡ್ಸ್ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ನಗರ ಪೊಲೀಸ್, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಮುದಾಯ ಆರೋಗ್ಯ ನರ್ಸಿಂಗ್ ವಿಭಾಗ ಯೇನಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ, ಸ್ವಯಂ ಸೇವಾ ಸಂಘ ಸಂಸ್ಥೆಗಳು, ಎನ್.ಎಸ್.ಎಸ್. ಘಟಕಗಳ ರೆಡ್ ರಿಬ್ಬನ್ ಕ್ಲಬ್, ಪ್ರಜ್ಞಾ ಕೌನ್ಸಿಲಿಂಗ್ ಸೆಂಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.
ಜನರು ಜಾಗೃತರಾಗಿ ಮುಂಜಾಗೃತ ಕ್ರಮ ಕೈಗೊಂಡಾಗ ಮಾತ್ರ ರೋಗಗಳಿಂದ ದೂರವಿರಲು ಸಾಧ್ಯ ಆದ್ದರಿಂದ ಹೆಚ್ ಐವಿ ಸೋಂಕಿನ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಜಾಗರೂಕರನ್ನಾಗಿಸಿಬೇಕು ಎಂದು ಅವರು ತಿಳಿಸಿದರು.
ಹೆಚ್ ಐವಿ ಸೋಂಕಿತರು ತಾರತಮ್ಯಕ್ಕೆ ಒಳಗಾಗದೆ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಕಾನೂನಾತ್ಮಕ ನೆರವು ಬೇಕಾದರೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬೇಕು ಎಂದ ಅವರು, ಹೆಚ್ ಐವಿ ಸೋಂಕಿತರಿಗೆ ಸಾಮಾಜಿಕ ಸೌಲಭ್ಯವನ್ನು ಒದಗಿಸುವ ಕಲ್ಪಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.
ಡಿ.ಹೆಚ್.ಓ ರಾಮಚಂದ್ರ ಬಾಯರಿ ಮಾತನಾಡಿ, ಹೆಚ್ ಐ ವಿ ಸೋಂಕಿನ ತಡೆಗಾಗಿ ಜಾಗತಿಕ ಒಗ್ಗಟ್ಟು ಹಾಗೂ ಜವಾಬ್ದಾರಿ ಹಂಚಿಕೆ ಈ ವರ್ಷದ ವಿಶ್ವ ಏಡ್ಸ್ ದಿನಾಚರಣೆಯ ಘೋಷಣೆಯಾಗಿದೆ. ಗ್ರಾಮೀಣ ಮಟ್ಟದಿಂದ ನಗರದವರೆಗೂ ಜನರಿಗೆ ಅಸುರಕ್ಷಿತ ಲೈಂಗಿಕ ಕ್ರಿಯೆ, ರಕ್ತದಾನ, ತಾಯಿ ಮಗುವಿಗೆ ಸೋಂಕು ಇದೆಯೇ ಎಂಬುವುದನ್ನು ಪರೀಕ್ಷೆಯ ಮೂಲಕ ದೃಢ ಪಡಿಸಿ ಸೂಕ್ತ ಚಿಕಿತ್ಸೆಗೆ ಒಳಪಡಿಸುವುದು, ಮಾದಕ ವ್ಯಸನ ಇವುಗಳ ಕುರಿತು ಅರಿವು ಮೂಡಿಸಿ ಹೆಚ್ ಐವಿ ಸೋಂಕನ್ನು ಮಟ್ಟಹಾಕಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಹೆಚ್ ಐವಿ ಸಮುದಾಯಕ್ಕೆ ಬೆಂಬಲ ನೀಡಿರುವ 3 ಸಂಘ ಸಂಸ್ಥೆಗಳ ಮುಖ್ಯಸ್ಥರನ್ನು ಗುರುತಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಜಿಲ್ಲೆಯ ಉತ್ತಮ ರೆಡ್ ರಿಬ್ಬನ್ ಗಳನ್ನು ಗುರುತಿಸಿ ಗೌರವಿಸಲಾಯಿತು. ಜೊತೆಗೆ ವಿಶ್ವ ಏಡ್ಸ್ ದಿನ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆಯ ವಿಜೇತರಿಗೆ ಪ್ರಶಸ್ತಿ ಫಲಕ ನೀಡಿಲಾಯಿತು.
ಕಾರ್ಯಕ್ರಮದಲ್ಲಿ ಎಸಿಪಿ ರಂಜಿತ್, ಯೆನಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಂ. ವಿಜಯ ಕುಮಾರ್, ಕುಲಸಚಿವ ಡಾ. ಕೆ. ಎಸ್. ಗಂಗಾಧರ ಸೋಮಯಾಜಿ, ವೈದ್ಯಕೀಯ ಅಧೀಕ್ಷಕ ಡಾ. ಸಂಪತ್ತಿಲ ಪದ್ಮನಾಭ, ಯೇನಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಲೀನಾ ಕೆ.ಸಿ., ವೆನ್ಲಾಲಕ್ ಜಿಲ್ಲಾ ಆಸ್ಪತ್ರೆಯ ರಕ್ತ ನಿಧಿ ಕೇಂದ್ರದ ವ್ಶೆದ್ಯಾಧಿಕಾರಿ ಡಾ.ಶರತ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣ & ತಡೆಗಟ್ಟುವ ಘಟಕ ಕಾರ್ಯಕ್ರಮಾಧಿಕಾರಿ ಡಾ ಬದ್ರುದ್ದೀನ್ ಎಮ್.ಎನ್. ಸ್ವಾಗತಿಸಿದರು.