ಚೆನ್ನೈ: ಟ್ರ್ಯಾಕ್ ನಲ್ಲಿ ಪ್ರತಿಸ್ಪರ್ಧಿಯ ಕಾರಿಗೆ ಢಿಕ್ಕಿ ಹೊಡೆದು ಖ್ಯಾತ ಕಾರು ರೇಸರ್ ಮೃತಪಟ್ಟ ದಾರುಣ ಘಟನೆ ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ನಡೆದಿದೆ.
ಕೆ.ಇ ಕುಮಾರ್ (59) ಭೀಕರ ಅಪಘಾತದಲ್ಲಿ ಮೃತಪಟ್ಟ ಕಾರು ರೇಸರ್.
ಮದ್ರಾಸ್ ಇಂಟರ್‌ನ್ಯಾಶನಲ್ ಸರ್ಕ್ಯೂಟ್‌ನಲ್ಲಿ ಭಾನುವಾರ ಮುಂಜಾನೆ ಭಾರತೀಯ ರಾಷ್ಟ್ರೀಯ ಕಾರ್ ರೇಸಿಂಗ್ ಚಾಂಪಿಯನ್‌ಶಿಪ್ ನ ಎಂಆರ್‌ಎಫ್, ಎಂಎಂಎಸ್ ಸಿ, ಎಫ್ ಎಂಎಸ್ ಸಿಐ ರೇಸಿಂಗ್ ಸ್ಪರ್ಧೆಯ ಎರಡನೇ ಸುತ್ತು ನಡೆಯುತ್ತಿರುವಾಗ ಈ ದುರ್ಘಟನೆ ಸಂಭವಿಸಿದೆ.
ರೇಸ್ ನಲ್ಲಿರುವಾಗ ಕುಮಾರ್ ಅವರ ಕಾರು ಪ್ರತಿಸ್ಪರ್ಧಿಯ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ವೇಗದಲ್ಲಿದ್ದ ಕಾರು ಟ್ರ್ಯಾಕ್ ತಪ್ಪಿ ಪಲ್ಟಿಯಾಗಿ, ಬೇಲಿಗೆ ಹೋಗಿ ಗುದ್ದಿದೆ. ತಕ್ಷಣವೇ ರೇಸ್ ನಿಲ್ಲಿಸಿ, ಸಂಪೂರ್ಣ ನಜ್ಜುಗುಜ್ಜಾಗಿದ್ದ ಕಾರಿನಿಂದ ಕುಮಾರ್ ಅವರನ್ನು ಹೊರ ತೆಗೆದು ಕೂಡಲೇ ಆಸ್ಪತ್ರಗೆ ರವಾನಿಸಲಾಗಿತ್ತು. ಆದರೆ ಗಂಭೀರವಾಗಿ ಗಾಯಗೊಂಡ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.