ನವದೆಹಲಿ: ‘ಹಿಂದುತ್ವವಾದಿಗಳು ಯಾವಾಗಲೂ ದ್ವೇಷ ಮತ್ತು ಹಿಂಸೆಯನ್ನು ಮಾತ್ರ ಹರಡುತ್ತಾರೆ’ ಎಂದು ಸಂಸದ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ. ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ‘ಹಿಂದುತ್ವವಾದಿಗಳು ಯಾವಾಗಲೂ ದ್ವೇಷ ಮತ್ತು ಹಿಂಸೆಯನ್ನು ಮಾತ್ರ ಹರಡುತ್ತಾರೆ. ಹಿಂದು-ಮುಸ್ಲಿಂ-ಸಿಖ್-ಕ್ರಿಶ್ಚಿಯನ್ನರು ಇದರ ಪರಿಣಾಮವನ್ನು ಅನುಭವಿಸುತ್ತಾರೆ, ಆದರೆ ಇನ್ನು ಮುಂದೆ ಅಲ್ಲ’ ಎಂದು ಟ್ವೀಟ್ ಮಾಡಿದ್ದಾರೆ.
ಹರಿದ್ವಾರದಲ್ಲಿ ಇತ್ತೀಚೆಗೆ ‘ಧರ್ಮ್ ಸಂಸದ್’ ಹೆಸರಿನಲ್ಲಿ ಮೂರು ದಿನಗಳ ಕಾಲ ನಡೆದ ಸಮ್ಮೇಳನವೊಂದರಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಭಾಷಣ ಮಾಡಿದ ವೀಡಿಯೋಗಳು ವೈರಲ್ ಆಗಿ, ತೀವ್ರ ಆಕ್ರೋಶಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಮಾತುಗಳು ಮಹತ್ವ ಪಡೆದಿವೆ.
ರಾಹುಲ್ ಗಾಂಧಿಯ ಜೊತೆಗೆ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಹಾಗೂ AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಉವೈಸಿ ಸೇರಿದಂತೆ ಹಲವು ಮಂದಿ ‘ಧರ್ಮ್ ಸಂಸದ್’ ಕಾರ್ಯಕ್ರಮದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾರ್ಯಕ್ರಮ ಆಯೋಜಕರ ವಿರುದ್ಧ ನಿರ್ದ್ಯಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಿಯಾಂಕಾ ಗಾಂಧಿ ಒತ್ತಾಯಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಈ ವಿಷಯದಲ್ಲಿ ಮೌನ ವಹಿಸಿರುವುದನ್ನು ಪ್ರಶ್ನಸಿರುವ ರಾಜ್ಯಸಭಾ ಸಂಸದ ಜೈರಾಮ್ ರಮೇಶ್ ‘ಸಭ್’ಕಾ ಸಾಥ್ ಸಬ್ ಕಾ ವಿಕಾಸ್ ಸಬ್’ಕಾ ವಿಶ್ವಾಸ್ ಟೋಟಲ್ ಬಕ್ವಾಸ್’ ಎಂದು ವ್ಯಂಗ್ಯವಾಡಿದ್ದಾರೆ.
ಮತ್ತೊಂದೆಡೆ ತಮ್ಮ ಹಳೇಯ ಭಾಷಣದ ಒಂದು ಸಣ್ಣ ತುಣುಕನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ಸಂಘ ಪರಿವಾರದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡಿರುವ AIMIM ಮುಖ್ಯಸ್ಥ, ಸಂಸದ ಅಸಾದುದ್ದೀನ್ ಉವೈಸಿ ‘ಕಾನ್ಪುರದಲ್ಲಿ ಮಾಡಿದ ಒಂದು ಘಂಟೆಯ ಭಾಷಣದಿಂದ ಕೇವಲ 45 ಸೆಕೆಂಡ್’ನ ವೀಡಿಯೋವನ್ನು ಮಾತ್ರ ಶೇರ್ ಮಾಡುವುದು ಧರ್ಮ್ ಸಂಸದ್’ನ ದ್ವೇಷ ಭಾಷಣಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಮಾಡುವ ತಂತ್ರವಲ್ಲದೆ ಇನ್ನೇನೂ ಅಲ್ಲ ಎಂದು ಹೇಳಿ ಸರಣಿ ಟ್ವೀಟ್’ಗಳನ್ನು ಮಾಡಿದ್ದಾರೆ.