Home ರಾಜ್ಯ ಹಿಂದುತ್ವ ರಾಜಕಾರಣ ಬಹುಳ್ಯ ಭಾರತಕ್ಕೆ ಮಾರಕ: ಕೋಟಿಗಾನಹಳ್ಳಿ ರಾಮಯ್ಯ

ಹಿಂದುತ್ವ ರಾಜಕಾರಣ ಬಹುಳ್ಯ ಭಾರತಕ್ಕೆ ಮಾರಕ: ಕೋಟಿಗಾನಹಳ್ಳಿ ರಾಮಯ್ಯ

ಬೆಂಗಳೂರು: ಪತ್ರಿಕೋದ್ಯಮದಲ್ಲಿ ದಲಿತ ಪ್ರಾತಿನಿಧ್ಯತೆ ಇಲ್ಲವಾಗುತ್ತಿದೆ. ಇದರಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಪ್ರಾತಿನಿಧ್ಯ ಅಶಯಕ್ಕೆ ಧಕ್ಕೆ ಉಂಟಾಗಿದೆ. ಇದನ್ನು ಪ್ರಶ್ನಿಸಬೇಕಾದ ಮಾಧ್ಯಮ ಕಾರ್ಪೋರೇಟ್ ಪೋಷಣೆಯ ಲ್ಲಿ ಮೈಮರೆತಿದೆ ಎಂದು ಹಿರಿಯ ಪತ್ರಕರ್ತರೂ, ಜನಸಂಸ್ಕೃತಿ ಚಿಂತಕರೂ ಆದ ಕೋಟಿಗಾನಹಳ್ಳಿ ರಾಮಯ್ಯ ವಿಶ್ಲೇಷಿಸಿದ್ದಾರೆ. ಕರ್ನಾಟಕ ರಾಜ್ಯ ಎಸ್ಸಿ ,ಎಸ್ಟಿ ಸಂಪಾದಕರ ಸಂಘ ಶುಕ್ರವಾರ ನಗರದ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ‘ದಿ.ಬಿ.ರಾಚಯ್ಯ ದತ್ತಿ ನಿಧಿ ಪ್ರಶಸ್ತಿ ವಾರ್ಷಿಕ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದರು.


ಮಾದರಿ ಪತ್ರಿಕೋದ್ಯಮ ಸಮಾಜಮುಖಿಯಾಗಲು ಸಾಧ್ಯವಿಲ್ಲ. ಪತ್ರಕರ್ತರು ಮಾದರಿಯಿಂದ ಹೊರಬರದ ಹೊರತು ಸಮಾಜ ಸ್ವಾಸ್ಥ್ಯ ಅಸಾಧ್ಯ. ಅಂತಹ ಮಾದರಿ ಪತ್ರಕರ್ತರಿಂದ ಸಮಾಜ ಯಾವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯ, ನಮಗೆ ನಮ್ಮದೇ ಮಾದರಿಯನ್ನು ಕಟ್ಟಿಕೊಳ್ಳಬೇಕು. ಇದಕ್ಕಾಗಿ ಅಂಬೇಡ್ಕರ್ ಅವರನ್ನು ಅರಿತುಕೊಳ್ಳಬೇಕು ಎಂದರು.


ಹಿಂದುತ್ವ ರಾಜಕಾರಣ ಬಲಿಷ್ಠವಾಗುತ್ತಿದೆ. ಈ ಬೆಳವಣಿಗೆ ದೇಶಕ್ಕೆ ಮಾರಕ. ಹಿಂದು ಅಜೆಂಡಾ ಪ್ರತಿಷ್ಠಿತವಾಗುತ್ತಿದೆ. ಬಹುಳ್ಯ ಭಾರತ ಇದರಿಂದ ಸಾಧ್ಯವಿಲ್ಲ. ಬಹು ಸಂಸ್ಕೃತಿಯ ಭಾರತ ಪ್ರಜಾಮುಖಿಯಾಗಿ ಬೆಳೆಯಲು ಅಂಬೇಡ್ಕರ್ ರಚನೆಯ ಸಂವಿಧಾನವೇ ಕಾರಣವಾಗಿದೆ. ಅಂತಹ ಸಂವಿಧಾನ ಪಾಲನೆ ಕಡ್ಡಾಯವಾಗಬೇಕಿದೆ ಎಂದು ಸಲಹೆ ನೀಡಿದರು.


ಉತ್ತರ ಭಾರತದಲ್ಲಿ ಇಂಗ್ಲಿಷ್ ಗುಡಿಗಳನ್ನು ಕಟ್ಟಿದ್ದಾರೆ. ಅಲ್ಲಿ ಎ ಬಿ ಸಿ ಡಿ ಮಂತ್ರ ಜಪಿಸಲಾಗುತ್ತಿದೆ. ನಮ್ಮಲ್ಲೂ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಗುಡಿಗಳನ್ನು ನಿರ್ಮಿಸಬೇಕಿದೆ. ಅಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಆಶಯ ಮಂತ್ರವಾಗಿಸಬೇಕಿದೆ. ಈ ಮೂಲಕ ದಲಿತರು ಒಳ್ಳೆಯ ಪತ್ರಕರ್ತರಾಗಿ ನೆಲೆಗೊಳ್ಳಬೇಕು ಎಂದು ಕರೆ ನೀಡಿದರು.

Join Whatsapp
Exit mobile version