ಬೆಂಗಳೂರು : ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳು. ಸಮಾಜದಲ್ಲಿ ಅಹಿತಕರ ಘಟನೆಗಳು ಸಲ್ಲದು. ಹಿಂದೂ-ಮುಸ್ಲಿಮರು ಸಹೋದರರಂತೆ ಬದುಕಬೇಕು. ಇಂತಹ ಘಟನೆಗಳನ್ನು ನಿಲ್ಲಿಸಿ ಎಲ್ಲರೂ ಅವರವರ ಕೆಲಸ ಮಾಡಿಕೊಂಡಿರಬೇಕು. ಪ್ರತಿಯೊಬ್ಬರು ಗೌರವದಿಂದ ಬದುಕಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಿವಿ ಮಾತು ಹೇಳಿದರು.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ-ಮುಸ್ಲಿಮರು ಒಂದೇ ತಾಯಿಯ ಮಕ್ಕಳ ರೀತಿ ಬದುಕಬೇಕು ಎನ್ನುವುದು ನಮ್ಮ ಅಪೇಕ್ಷೆ. ಯಾರೋ ಕಿಡಿಗೇಡಿಗಳು ಇದಕ್ಕೆ ಅಡ್ಡಿಪಡಿಸುವ ಕೆಲಸ ಮಾಡಿದ್ದಾರೆ. ಇಂತಹ ಕೃತ್ಯದಲ್ಲಿ ತೊಡಗಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿಗಳು ಹೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಬೇಕು. ನಾನು ಕೂಡ ಸಮುದಾಯದವರಿಗೆ ಕಿವಿಮಾತು ಹೇಳುತ್ತೇನೆ. ಇದನ್ನು ನಿಲ್ಲಿಸಿ, ನಿಮ್ಮ ನಿಮ್ಮ ಕೆಲಸ ಮಾಡಿಕೊಂಡಿರಿ. ಎಲ್ಲರೂ ಸಹ ಸಂಯಮದಿಂದ ಗೌರವದಿಂದ ಬದುಕಲು ಬಿಡಿ ಎಂದು ಹೇಳಿದರು.