Home ಟಾಪ್ ಸುದ್ದಿಗಳು ಹಿಂದೂ ಧರ್ಮ ಜೀವನ ವಿಧಾನವಾಗಿದ್ದು, ಧರ್ಮಾಂಧತೆಗೆ ಅವಕಾಶ ನೀಡುವುದಿಲ್ಲ: ಸುಪ್ರೀಂಕೋರ್ಟ್

ಹಿಂದೂ ಧರ್ಮ ಜೀವನ ವಿಧಾನವಾಗಿದ್ದು, ಧರ್ಮಾಂಧತೆಗೆ ಅವಕಾಶ ನೀಡುವುದಿಲ್ಲ: ಸುಪ್ರೀಂಕೋರ್ಟ್

►ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಬ್ರಿಟಿಷರು ಜಾರಿಗೆ ತಂದ ಒಡೆದು ಆಳುವ ನೀತಿಯನ್ನು ಮತ್ತೆ ತರಬಾರದು


►ಐತಿಹಾಸಿಕ ಸ್ಥಳಗಳ ಮರುನಾಮಕರಣ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ನ್ಯಾಯಾಲಯ


►ಸಂವಿಧಾನದಲ್ಲಿ ಕಲ್ಪಿಸಿರುವ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ಅರ್ಜಿ ಎಂದ ಪೀಠ


►ನಾವು ಜಾತ್ಯತೀತರಾಗಿದ್ದು ಸಂವಿಧಾನವನ್ನು ರಕ್ಷಿಸಬೇಕಾಗಿದೆ ಎಂದು ನ್ಯಾಯಾಧೀಶರು


►ಗತಕಾಲದ ಬಗ್ಗೆ ಕಳವಳ ವ್ಯಕ್ತಪಡಿಸಿ ಅದನ್ನೆಲ್ಲಾ ಅಗೆದು ಈಗಿನ ಪೀಳಿಗೆ ಮೇಲೆ ಹೊರಿಸಲು ಹೊರಟಿದ್ದೀರಿ


►ನೀವು ನಿರ್ದಿಷ್ಟ ಸಮುದಾಯದತ್ತ ಬೆರಳು ತೋರಿ ಅನಾಗರಿಕ, ಕ್ರೂರಿ ಎನ್ನುತ್ತಿದ್ದೀರಿ


►ದೇಶ ಕುದಿಯುತ್ತಿರಬೇಕು ಎಂದು ಬಯಸುತ್ತಿರುವಿರಾ


ನವದೆಹಲಿ: ಐತಿಹಾಸಿಕ ಸ್ಥಳಗಳು ಮತ್ತು ನಗರಗಳಿಗೆ ಆಕ್ರಮಣಕಾರರು ಇಟ್ಟಿರುವ ಹೆಸರುಗಳನ್ನು ಮರುನಾಮಕರಣ ಮಾಡಬೇಕು ಎಂದು ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾಗೊಳಿಸಿದೆ.


ಸಂವಿಧಾನದಲ್ಲಿ ಕಲ್ಪಿಸಿರುವ ಜಾತ್ಯತೀತ ತತ್ವಗಳಿಗೆ ವಿರುದ್ಧವಾದ ಅರ್ಜಿ ಇದು ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಅರ್ಜಿದಾರರನ್ನು ತರಾಟೆಗೆ ತೆಗೆದುಕೊಂಡಿತು.


“ನಾವು ಜಾತ್ಯತೀತರಾಗಿದ್ದು ಸಂವಿಧಾನವನ್ನು ರಕ್ಷಿಸಬೇಕಾಗಿದೆ. ನೀವು ಗತಕಾಲದ ಬಗ್ಗೆ ಕಳವಳ ವ್ಯಕ್ತಪಡಿಸಿ ಅದನ್ನೆಲ್ಲಾ ಅಗೆದು ಈಗಿನ ಪೀಳಿಗೆ ಮೇಲೆ ಹೊರಿಸಲು ಹೊರಟಿದ್ದೀರಿ. ಹೀಗೆ ಮಾಡುವ ಪ್ರತಿಯೊಂದು ಕೆಲಸವೂ ಸೌಹಾರ್ದತೆಗೆ ಧಕ್ಕೆ ತರುತ್ತದೆ” ಎಂದು ನ್ಯಾಯಾಲಯ ಹೇಳಿತು.


ಅರ್ಜಿದಾರರು ಗತವನ್ನು ಆಯ್ದು ಮರುಪರಿಶೀಲಿಸುತ್ತಿದ್ದಾರೆ ಎಂದ ನ್ಯಾಯಾಲಯ ಒಂದಿಡೀ ಸಮುದಾಯವನ್ನು ಅನಾಗರಿಕ ಎಂದು ಕರೆಯಲು ಮುಂದಾಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತು.
“ನೀವು ಭೂತಕಾಲವನ್ನು ಹೆಕ್ಕಿ ನೋಡುತ್ತಿದ್ದೀರಿ. ಭಾರತ ಇಂದು ಜಾತ್ಯತೀತ ದೇಶವಾಗಿದೆ. ನೀವು ನಿರ್ದಿಷ್ಟ ಸಮುದಾಯದತ್ತ ಬೆರಳು ತೋರಿ ಅನಾಗರಿಕ, ಕ್ರೂರಿ ಎನ್ನುತ್ತಿದ್ದೀರಿ. ದೇಶ ಕುದಿಯುತ್ತಿರಬೇಕು ಎಂದು ಬಯಸುತ್ತಿರುವಿರಾ?” ಎಂದು ನ್ಯಾ. ಜೋಸೆಫ್ ಪ್ರಶ್ನಿಸಿದರು.


ಹಿಂದೂ ಧರ್ಮ ಶ್ರೇಷ್ಠವಾಗಿದ್ದು ಧರ್ಮಾಂಧತೆಗೆ ಅದು ಅವಕಾಶ ನೀಡದು; ಸುಪ್ರೀಂ ಕೋರ್ಟ್
ಹಿಂದೂ ಧರ್ಮ ಶ್ರೇಷ್ಠವಾಗಿದ್ದು ಧರ್ಮಾಂಧತೆಗೆ ಅದು ಅವಕಾಶ ನೀಡದು ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ಹೇಳಿತು. “ಬಹುಶಃ ಆಧ್ಯಾತ್ಮದ ವಿಷಯದಲ್ಲಿ ಹಿಂದೂ ಧರ್ಮವು ಶ್ರೇಷ್ಠ ಧರ್ಮವಾಗಿದೆ. ದಯವಿಟ್ಟು ಅದನ್ನು ಕುಂದಿಸಬೇಡಿ. ಜಗತ್ತು ನಮ್ಮತ್ತ ಯಾವಾಗಲೂ ದೃಷ್ಟಿ ನೆಟ್ಟಿರುತ್ತದೆ. ಇಂದಿಗೂ ಸಹ. ನಾನು ಕ್ರಿಶ್ಚಿಯನ್ ಆದರೆ ಹಿಂದೂ ಧರ್ಮವನ್ನು ಅಷ್ಟೇ ಇಷ್ಟಪಡುತ್ತೇನೆ ಮತ್ತು ಅದನ್ನು ಅಧ್ಯಯನ ಮಾಡಲು ಪ್ರಯತ್ನಿಸಿದ್ದೇನೆ. ನೀವೂ ಯತ್ನಿಸಿ ಅದರ ಶ್ರೇಷ್ಠತೆಯನ್ನು ಅರ್ಥ ಮಾಡಿಕೊಳ್ಳಿ. ಸೀಮಿತ ಉದ್ದೇಶಕ್ಕೆ ಬಳಕೆ ಮಾಡಬೇಡಿ” ಎಂದು ಕಿವಿಮಾತು ಹೇಳಿದರು.


ಇದಕ್ಕೆ ದನಿಗೂಡಿಸಿದ ನ್ಯಾ. ನಾಗರತ್ನ ಅವರು “ಈ ಕಾರಣಕ್ಕಾಗಿಯೇ ಅದು (ಹಿಂದೂ ಧರ್ಮ) ಜೀವನ ವಿಧಾನವಾಗಿದ್ದು ಧರ್ಮಾಂಧತೆಗೆ ಅವಕಾಶ ನೀಡುವುದಿಲ್ಲ. ದೇಶ ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು ಮೊದಲು ಅದನ್ನು ಪರಿಹರಿಸಬೇಕು. ಭಾರತೀಯರನ್ನು ಧರ್ಮದ ಆಧಾರದ ಮೇಲೆ ವಿಭಜಿಸಲು ಬ್ರಿಟಿಷರು ಜಾರಿಗೆ ತಂದ ಒಡೆದು ಆಳುವ ನೀತಿಯನ್ನು ಮತ್ತೆ ತರುವುದು ಬೇಡ” ಎಂದರು.
(ಕೃಪೆ: ಬಾರ್ & ಬೆಂಚ್)

Join Whatsapp
Exit mobile version