ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಸೆಕ್ಸ್ ವಿಡಿಯೋ ಪ್ರಕರಣ ವಿಶ್ವದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದ್ದು, ನೂರಾರು ಹಿಂದು ಮಹಿಳೆಯರ ಮಾಂಗಲ್ಯ ಹರಣ ಮಾಡಿದ ಪ್ರಕರಣ ಎಂದು ಸಚಿವ ಕೃಷ್ಣಬೈರೇಗೌಡ ಅವರು ಬುಧವಾರ ಹೇಳಿದ್ದಾರೆ.
ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ನನ್ನ ಜ್ಞಾನದ ಪ್ರಕಾರ, ಪ್ರಜ್ವಲ್ ರೇವಣ್ಣ ಪ್ರಕರಣ ಪ್ರಪಂಚದ ಅತಿದೊಡ್ಡ ಲೈಂಗಿಕ ದೌರ್ಜನ್ಯ ಪ್ರಕರಣವಾಗಿದ್ದು, ಇದರ ಬಗ್ಗೆ ಚರ್ಚೆಯಾಗಬೇಕು. ಮಹಿಳೆಯರ ಮಾನದ ಬಗ್ಗೆ ಮಾತನಾಡಬೇಕಾಗಿತ್ತು. ಆದರೆ ಬೇರೆಯದೆ ವಿಚಾರ ಚರ್ಚೆ ಆಗುತ್ತಿದೆ. ಗಮನ ಬೇರೆಡೆ ಸೆಳೆದು ಹಗರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದರು.
‘ಇಷ್ಟೊಂದು ಹಿಂದೂ ಮಹಿಳೆಯರ ಮಾಂಗಲ್ಯವನ್ನು ಕಿತ್ತುಕೊಂಡು, ಕುಟುಂಬಗಳನ್ನು ಒಡೆದು ಹಾಕಿದ ಮತ್ತೊಂದು ಪ್ರಕರಣ ಇದ್ದರೆ ತಿಳಿಸಿ’ ಎಂದ ಕೃಷ್ಣ ಬೈರೇಗೌಡ, “ಇದು ಪ್ರಮುಖ ಪ್ರಕರಣವಾಗಿದೆ. ಆರೋಪಗಳ ಬಗ್ಗೆ ತನಿಖೆ ಮಾಡಬೇಕು, ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಮತ್ತು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಇದು ನಮ್ಮ ಉದ್ದೇಶ ಎಂದರು.