ಭಾರತೀಯ ರಾಯಭಾರ ಕಚೇರಿಯ ಪ್ರಮಾದ : ಸೌದಿ ಅರೇಬಿಯಾದಲ್ಲಿ ಹಿಂದೂ ವ್ಯಕ್ತಿಯ ಶವವನ್ನು ಮುಸ್ಲಿಮರ ವಿಧಿ ಪ್ರಕಾರ ದಫನ !

Prasthutha|

►ಮೃತನ ಸಮಾಧಿ ಪತ್ತೆ ಹಚ್ಚಿದ ಸೌದಿ ಪ್ರಾಧಿಕಾರ
►ಅವಶೇಷ ಪಡೆಯುವ ಪತ್ನಿಯ ಹೋರಾಟಕ್ಕೆ ಕೊನೆಗೂ ಜಯ !

- Advertisement -

ದೆಹಲಿ : ಸೌದಿ ಅರೇಬಿಯಾದಲ್ಲಿನ ಜೆದ್ದಾ ಭಾರತೀಯ ರಾಯಭಾರ ಕಚೇರಿ ಸಿಬ್ಬಂದಿಗಳ ಆಚಾತುರ್ಯದಿಂದ ಸೌದಿಯಲ್ಲಿದ್ದ ಅನಿವಾಸಿ ಭಾರತೀಯ ಹಿಂದೂ ಒಬ್ಬರ ಮೃತದೇಹವನ್ನು ಮುಸ್ಲಿಮ್ ಎಂದು ಪರಿಗಣಿಸಿ ಇಸ್ಲಾಮಿಕ್ ವಿಧಿ ವಿಧಾನಗಳ ಪ್ರಕಾರ ದಫನ ಕಾರ್ಯ ಕೈಗೊಳ್ಳಲಾಗಿತ್ತು. ಪತಿಯ ಮೃತದೇಹಕ್ಕಾಗಿ ಕಾದು ಕೂತಿದ್ದ ಪತ್ನಿಗೆ ಜೆದ್ದಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಸಂದೇಶ ಬಂದಾಗ ಆಘಾತವಾಗಿತ್ತು. ಮೃತರ ಮರಣ ದಾಖಲೆಗಳಲ್ಲಿ ಮುಸ್ಲಿಮನೆಂದು ತಪ್ಪಾಗಿ ಉಲ್ಲೇಖಿಸಿದ್ದರಿಂದಾಗಿ ಮೃತದೇಹವನ್ನು ಸೌದಿಯಲ್ಲೇ  ದಫನ ನಡೆಸಲಾಗಿತ್ತು ಎಂದು ಕಚೇರಿಯ ಸಿಬ್ಬಂದಿಗಳು ತಿಳಿಸಿದ್ದರು.

ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂಜೀವ್ ಕುಮಾರ್ ಕಳೆದ ಜನವರಿ 24 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅವರ ಮೃತದೇಹವನ್ನು ಅಲ್ಲಿನ ಸ್ಥಳೀಯ ಆಸ್ಪತ್ರೆಯೊಂದರಲ್ಲಿ ಇರಿಸಲಾಗಿತ್ತು. ಆದರೆ ಅಚ್ಚರಿಯೆಂಬಂತೆ ಫೆಬ್ರವರಿ 18 ರಂದು ಜೆದ್ದಾದ ಭಾರತೀಯ ರಾಯಭಾರ ಕಚೇರಿಯಿಂದ ಪತ್ನಿ ಅಂಜು ಶರ್ಮಾ ಅವರಿಗೆ ಕರೆ ಬಂದಿತ್ತು. ಆ ಪ್ರಕಾರ, ನಿಮ್ಮ ಪತಿಯ ಮೃತದೇಹವನ್ನು ಮುಸ್ಲಿಮ್ ಎಂದು ಮರಣ ಪ್ರಮಾಣ ಪತ್ರದಲ್ಲಿ ತಪ್ಪಾಗಿ ಪರಿಗಣಿಸಿದ್ದರಿಂದಾಗಿ ಇಲ್ಲಿಯೇ ದಫನ ಮಾಡಲಾಗಿದೆ ಎಂದು ತಿಳಿಸಿದ್ದರು. ಜೊತೆಗೆ ಪತ್ನಿಗೆ ರಾಯಭಾರ ಕಚೇರಿಯಿಂದ ತಮ್ಮ ಪ್ರಮಾದಕ್ಕಾಗಿ ಕ್ಷಮಾಪಣಾ ಪತ್ರವನ್ನೂ ಕಳಿಸಿದ್ದರು.

- Advertisement -

ಆದರೆ ಪಟ್ಟು ಬಿಡದ ಅಂಜು ಶರ್ಮಾ ಪತಿಯ ಮೃತದೇಹಕ್ಕಾಗಿ ದೆಹಲಿ ಹೈಕೋರ್ಟ್ ಮೊರೆ ಹೋದರು.  ನಾನಾಗಲಿ ಅಥವಾ ನನ್ನ ಕುಟುಂಬದವರಾಗಲಿ ಮೃತದೇಹದ ಅಂತಿಮ ಸಂಸ್ಕಾರ ನಡೆಸಲು ಅನುಮತಿ ಪತ್ರ ನೀಡಿರಲಿಲ್ಲ. ಹೀಗಿರುವಾಗ ಸೌದಿಯಲ್ಲಿನ ಸ್ಥಳೀಯ ಪ್ರಾಧಿಕಾರಕ್ಕೆ ಮೃತದೇಹದ ಅವಶೇಷಗಳನ್ನು ಹೊರ ತೆಗೆದು ಅದನ್ನು ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ಅರ್ಜಿಯಲ್ಲಿ ಕೋರಿದ್ದರು. ಮಾತ್ರವಲ್ಲ ಘಟನೆ ನಡೆದು ಏಳು ವಾರಗಳ ನಂತರವೂ ಮೃತದೇಹವನ್ನು ಮರಳಿ ಭಾರತಕ್ಕೆ ಕಳುಹಿಸುವ ವ್ಯವಸ್ಥೆ ಮಾಡದಿರುವ ಜೆದ್ದಾದ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಗಳ ನಿರ್ಲಕ್ಷ್ಯತನದ  ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೋರ್ಟ್ ಗೆ ಕೇಳಿಕೊಂಡಿದ್ದರು. ಭಾರತೀಯ ವಿದೇಶಾಂಗ ಇಲಾಖೆಗೆ ಮೃತದೇಹದ ಅವಶೇಶಗಳನ್ನು ನಿಗದಿತ ಸಮಯ ಮಿತಿಯೊಳಗೆ ಭಾರತಕ್ಕೆ ತರುವಂತೆ ಆದೇಶ ನೀಡುವಂತೆ ಕೂಡಾ ಕೇಳಿಕೊಂಡಿದ್ದರು.

ಅರ್ಜಿ ಆಲಿಸಿದ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರದ ವಿವರಣೆ ಕೇಳಿತ್ತು. ಇಂದಿನ ವಿಚಾರಣೆಯಲ್ಲಿ ಹೈಕೋರ್ಟಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆ, ಸೌದಿ ಸ್ಥಳೀಯ ಆಡಳಿತ ಸಂಜೀವ್ ಕುಮಾರ್ ಅವರ ಮೃತದೇಹ ದಫನಗೈದ ಸ್ಥಳವನ್ನು ಪತ್ತೆ ಹಚ್ಚಿದೆ ಎಂದು ಕೋರ್ಟಿಗೆ ತಿಳಿಸಿದೆ. ಮಾತ್ರವಲ್ಲ ಜೆದ್ದಾದ ಭಾರತೀಯ ರಾಯಭಾರ ಕಚೇರಿಯು ಮೃತದೇಹದ ಅವಶೇಷಗಳನ್ನು ಭಾರತಕ್ಕೆ ಕಳುಹಿಸುವ ಕಾನೂನು ವ್ಯವಸ್ಥೆಗಳ ಸುಸೂತ್ರ ನೆರವಿಗಾಗಿ ಸ್ಥಳೀಯ ಕೋರ್ಟನ್ನು ಸಮೀಪಿಸಿದೆ ಎಂದು ತಿಳಿಸಿದೆ.  

Join Whatsapp