ಆಗ್ರಾ: ತಾಜ್ ಮಹಲ್ ಹಾಗೂ ಮುಸ್ಲಿಮ್ ಸಮತಿ ವಿರುದ್ಧ ಹಿಂದೂ ಮಹಾಸಭಾ ಕೋರ್ಟ್ ಮೆಟ್ಟಿಲೇರಿದೆ. ಅನುಮತಿ ಇಲ್ಲದೆ ತಾಜ್ ಮಹಲ್ ಒಳಗಡೆ ಮುಸ್ಲಿಮರು ಶಹಜಹಾನ್ ಸ್ಮರಾರ್ಥ ಉರೂಸ್ ಆಚರಿಸುತ್ತಿದ್ದಾರೆ. ಈ ವೇಳೆ ಎಲ್ಲಾ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ನೀಡಲಾಗುತ್ತಿದೆ. ಈ ಉರೂಸ್ ಆಚರಣೆಗೆ ತಡೆ ನೀಡಬೇಕು ಎಂದು ಹಿಂದೂ ಮಹಾಸಭಾ ಆಗ್ರಾ ಸಿವಿಲ್ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಅರ್ಜಿಯನ್ನು ಪುರಸ್ಕರಿಸಿರುವ ಕೋರ್ಟ್ ಮಾರ್ಚ್ 4 ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.
ಫೆಬ್ರವರಿ 6 ರಿಂದ 8ರ ವರೆಗೆ ತಾಜ್ ಮಹಲ್ ಒಳಗೆಡೆ ಮುಸ್ಲಿಮರು ಶಹಜಹಾನ್ ಸ್ಮರಣಾರ್ಥ ಉರೂಸ್ ಆಚರಿಸುತ್ತಾರೆ. ಶಹಜಹಾನ್ 369ನೇ ಉರುಸ್ ಆಚರಣೆಗೆ ಮುಸ್ಲಿಮ್ ಸಮಿತಿ ಸಜ್ಜಾಗಿದೆ. ಎಲ್ಲಾ ತಯಾರಿ ಮಾಡಿಕೊಂಡಿದೆ. ಉರೂಸ್ ಆಚರಣೆ ಹಾಗೂ ಈ ವೇಳೆ ಮುಸ್ಲಿಮರಿಗೆ ಉಚಿತ ಪ್ರವೇಶವನ್ನು ಪ್ರಶ್ನಿಸಿ ಹಿಂದೂ ಮಹಾಸಭಾ ಅರ್ಜಿ ಸಲ್ಲಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಹಿಂದೂಮಹಾಸಭಾ ವಕ್ತಾರ ಸಂಜಯ್ ಜಾಟ್, ಮಾಹಿತಿ ಹಕ್ಕು ಕಾಯ್ದೆ ಅಡಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ತಾಜ್ ಮಹಲ್ ಕುರಿತು ಮಾಹಿತಿ ಕೇಳಲಾಗಿತ್ತು. ತಾಜ್ ಮಹಲ್ ಒಳಗಡೆ ಉರೂಸ್ ನಡೆಸಲು ಅನುಮತಿ ಕೊಟ್ಟವರು ಯಾರು? ಮೊಘಲ್ ಆಳ್ವಿಕೆಯಲ್ಲಿ ಕೊಡಲಾಗಿತ್ತೆ? ಅಥವಾ ಬ್ರಿಟಿಷ್ ಸರ್ಕಾರ ನೀಡಿತ್ತೆ? ಅಥವಾ ಸ್ವಾತಂತ್ರ್ಯ ಬಳಿಕ ಭಾರತ ಸರ್ಕಾರ ಅನುಮತಿ ನೀಡಿತ್ತೆ? ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ಭಾರತೀಯ ಪುರಾತತ್ವ ಇಲಾಖೆ ಉತ್ತರ ನೀಡಿದೆ. ಈ ರೀತಿಯ ಯಾವುದೇ ಅನುಮತಿಯನ್ನು ಭಾರತ ಸರ್ಕಾರ, ಪುರಾತತ್ವ ಇಲಾಖೆ ನೀಡಲಾಗಿಲ್ಲ ಎಂದಿದೆ. ಉರೂಸ್ ಮುಸ್ಲಿಮ್ ಸಮಿತಿಗೆ ಮೊಘಲ್ ಅಥವಾ ಬ್ರಿಟಿಷ್ ಸರ್ಕಾರದಲ್ಲಿ ಅನುಮತಿ ನೀಡಿರುವ ದಾಖಲೆ ಇಲ್ಲ ಎಂದು ಪುರಾತತ್ವ ಇಲಾಖೆ ಹೇಳಿದೆ ಎಂದು ಹೇಳಿದ್ದಾರೆ.