►ಕಾರ್ಮಿಕರಲ್ಲಿ ಹೆಚ್ಚಿನವರು ಆದಿವಾಸಿಗಳು ಮತ್ತು ದಲಿತರು!
ನ್ಯೂಯಾರ್ಕ್: ಮಂದಿರ ನಿರ್ಮಾಣಕ್ಕೆ ಕಾರ್ಮಿಕರನ್ನು ಶೋಷಣೆ ಮಾಡುತ್ತಿರುವ ಹಿಂದೂ ಸಂಘಟನೆಯ ವಿರುದ್ಧ ಅಮೆರಿಕದಲ್ಲಿ ದೂರು ದಾಖಲಾಗಿದೆ.
ಭಾರತದ ಕಾರ್ಮಿಕರಿಗೆ ಆಮಿಷವೊಡ್ಡಿ ಅಮೆರಿಕಕ್ಕೆ ಕರೆತಂದು ಶೋಷಣೆ ಮಾಡಲಾಗಿದೆ ಎಂದು ಬೋಚಸನ್ವಾಸಿ ಅಕ್ಷರ ಪುರುಷೋತ್ತಮ್ ಸ್ವಾಮಿನಾರಾಯಣ ಸಂಸ್ಥೆ (ಬಿಎಪಿಎಸ್) ಎಂಬ ಸಂಘಟನೆಯ ವಿರುದ್ಧ ದೂರು ದಾಖಲಾಗಿತ್ತು.
ಸಂಘಟನೆಯ ಅಧೀನದಲ್ಲಿ ಕಡಿಮೆ ವೇತನಕ್ಕೆ ಅಮೆರಿಕದ ದೇವಾಲಯಗಳಲ್ಲಿ ಕೆಲಸ ಮಾಡಲು ನೂರಾರು ಕೆಲಸಗಾರರನ್ನು ಬಲವಂತಪಡಿಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಕಾರ್ಮಿಕರಲ್ಲಿ ಹೆಚ್ಚಿನವರು ಆದಿವಾಸಿಗಳು ಮತ್ತು ದಲಿತರು ಎಂದು ವರದಿಯಾಗಿದೆ.
ಕಾರ್ಮಿಕರು ಕಳೆದ ಮೇ ತಿಂಗಳಲ್ಲಿ US ಜಿಲ್ಲಾ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಅಟ್ಲಾಂಟಾ, ಚಿಕಾಗೋ, ಲಾಸ್ ಏಂಜಲೀಸ್ ಮತ್ತು ಹ್ಯೂಸ್ಟನ್ ನಲ್ಲಿ ದೇವಾಲಯ ನಿರ್ಮಾಣಕ್ಕೆಂದು ಹೇಳಿ ಭಾರತದಿಂದ ಕಾರ್ಮಿಕರನ್ನು ಕರೆತರಲಾಗಿದೆ ಎಂದು ಆರೋಪಿಸಿ ಫೆಡರಲ್ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿತ್ತು.
ಮಾನವ ಕಳ್ಳಸಾಗಣೆ, ಬಲವಂತದ ಕೆಲಸ, ಪಿತೂರಿ, ಗುಲಾಮಗಿರಿ, ಕನಿಷ್ಠ ವೇತನ ನೀಡದಿರುವುದು ಮತ್ತು ವಲಸೆ ದಾಖಲೆಗಳ ಫೋರ್ಜರಿ ಇತ್ಯಾದಿ ಸೆಕ್ಷನ್‌ಗಳ ಅಡಿಯಲ್ಲಿ ಸಂಘಟನೆಯ ವಿರುದ್ಧ ಪ್ರಕರಣ ದಾಖಲಾಗಿದೆ.
ನ್ಯೂಜೆರ್ಸಿಯ ಸ್ವಾಮಿನಾರಾಯಣ ದೇವಸ್ಥಾನವನ್ನು ನಿರ್ಮಿಸಲು ಕೇವಲ ಒಂದು ಡಾಲರ್ ಗೆ ದುಡಿಯಲು ಕಾರ್ಮಿಕರಿಗೆ ಬಲವಂತಪಡಿಸಲಾಗಿದೆ.
ರಿಲೀಜಿಯಸ್ ವೀಸಾ (ಆರ್-1 ವೀಸಾ) ದಲ್ಲಿ ಅಮೆರಿಕಕ್ಕೆ ಬಂದಿದ್ದ ಆರು ಮಂದಿ ಈ ದೂರು ದಾಖಲಿಸಿದ್ದಾರೆ. 2018 ರಿಂದ ಈ ವೀಸಾದಲ್ಲಿ 200 ಕ್ಕೂ ಹೆಚ್ಚು ಭಾರತೀಯರು ಅಮೆರಿಕಕ್ಕೆ ಆಗಮಿಸಿದ್ದಾರೆ ಎಂದು ಅಂದಾಜಿಸಲಾಗಿದೆ.