ನವದೆಹಲಿ: ಹಿಜಾಬ್ ನಿಷೇಧದ ವಿರುದ್ಧದ ಅರ್ಜಿಗಳನ್ನು ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪಿನ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಚೆಯರ್ಮೆನ್ ಒಎಂಎ ಸಲಾಂ ತೀವ್ರ ನಿರಾಶೆ ವ್ಯಕ್ತಪಡಿಸಿದ್ದಾರೆ.
ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವಲ್ಲ ಎಂಬ ಮುಸ್ಲಿಮ್ ವಿದ್ಯಾರ್ಥಿನಿಯರ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿರುವುದು ತೀವ್ರ ನಿರಾಶಾದಾಯಕವಾಗಿದೆ.ಈ ತೀರ್ಪು ಮೂಲಭೂತ ಹಕ್ಕುಗಳು ಮತ್ತು ಬಹುತ್ವದ ಸಾಂವಿಧಾನಿಕ ಮೌಲ್ಯಗಳ ಸ್ಪೂರ್ತಿಗೆ ವಿರುದ್ಧವಾಗಿದೆ. ಹಿಜಾಬ್ ಅನ್ನು ತಮ್ಮ ನಂಬಿಕೆ ಮತ್ತು ಅಸ್ಮಿತೆಯ ಅವಿಭಾಜ್ಯ ಅಂಗವಾಗಿ ನಂಬುವ ದೇಶದ ಮುಸ್ಲಿಮ್ ಮಹಿಳೆಯರ ಭಾವನೆಗಳಿಗೆ ಸಂಬಂಧಿಸಿದ ನ್ಯಾಯಾಲಯದ ಸಂವೇದನಾಶೀಲತೆಯು ಆಘಾತಕಾರಿಯಾಗಿದೆ.
ಇಸ್ಲಾಮ್ ಧರ್ಮದ ಗ್ರಂಥದಲ್ಲಿರುವ ಪಠ್ಯದ ಬಗ್ಗೆ ತಮ್ಮ ತಿಳುವಳಿಕೆಗೆ ಅನುಗುಣವಾಗಿ ಬಹುಪಾಲು ವಿಶ್ವಾಸಿಗಳು ಮಾನ್ಯ ಮಾಡಿರುವ ಆಚರಣೆಗೆ ವಿರುದ್ಧವಾಗಿ ಧಾರ್ಮಿಕ ಪಠ್ಯಗಳನ್ನು ವ್ಯಾಖ್ಯಾನಿಸುವ ಮೂಲಕ ನ್ಯಾಯಾಲಯವು ಹೊಸ ಸಂಪ್ರದಾಯವನ್ನು ಪರಿಚಯಿಸುತ್ತಿದೆ. ಯಾವುದೇ ಕಾರಣಕ್ಕೂ ಇದನ್ನು ಸ್ವೀಕರಿಸಲಾಗದು. ಇದು ಮುಸ್ಲಿಮ್ ಮಹಿಳೆಯರ ತಮ್ಮ ಆಯ್ಕೆಯ ಉಡುಗೆಗಳನ್ನು ಧರಿಸುವ ಮೂಲಭೂತ ಹಕ್ಕಿನ ವಿಚಾರವಾಗಿತ್ತೇ ವಿನಃ, ಇಸ್ಲಾಮ್ನಲ್ಲಿ ಯಾವುದು ಅಗತ್ಯ ಅಥವಾ ಅನಿವಾರ್ಯವಲ್ಲ ಎಂಬುದು ಆಗಿರಲಿಲ್ಲ. ಒಂದು ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಧಾರ್ಮಿಕ ಗ್ರಂಥದ ಪಠ್ಯವನ್ನು ವ್ಯಾಖ್ಯಾನಿಸಿಕೊಳ್ಳುವ ಹಕ್ಕನ್ನು ವಿಶ್ವಾಸಿಗಳಿಗೆ ಬಿಡಬೇಕಿತ್ತು ಎಂದು ಒಎಂಎ ಸಲಾಂ ತಿಳಿಸಿದ್ದಾರೆ.
ಕೇಸರಿ ಶಾಲಿನೊಂದಿಗೆ ಹಿಜಾಬನ್ನು ಹೋಲಿಸಿರುವುದನ್ನು ಗಮನಿಸಿದರೆ, ನ್ಯಾಯಾಲಯವು ಸಂಘಪರಿವಾರದ ತಂತ್ರಗಳಲ್ಲಿ ಮುಗ್ಗರಿಸಿರುವುದು ಕಂಡು ಬರುತ್ತದೆ. ಈ ತೀರ್ಪು, ತಮ್ಮಿಚ್ಛೆಯ ಉಡುಗೆ ಧರಿಸಿದ ಕಾರಣಕ್ಕಾಗಿ ಮುಸ್ಲಿಮ್ ಮಹಿಳೆಯರ ಮೇಲಿನ ಕಿರುಕುಳವನ್ನು ಮುಂದುವರಿಸಲು ಬಲಪಂಥೀಯ ಗುಂಪುಗಳಿಗೆ ನೀಡಲಾದ ಮಾನ್ಯತೆಯ ರೀತಿಯಲ್ಲಿ ಬಳಕೆಯಾಗಲಿದೆ ಎಂಬ ಕಳವಳವಿದೆ. ಪಾಪ್ಯುಲರ್ ಫ್ರಂಟ್ ಈ ತೀರ್ಪನ್ನು ತಿರಸ್ಕರಿಸುತ್ತದೆ ಮತ್ತು ಇದನ್ನು ಎದುರಿಸಲು ಕಾನೂನಾತ್ಮಕ ಮತ್ತು ಪ್ರಜಾಸತ್ತಾತ್ಮಕ ಅವಕಾಶಗಳನ್ನು ಜೊತೆಯಾಗಿ ಶೋಧಿಸುವಂತೆ ಸಮುದಾಯ ನಾಯಕರನ್ನು ಆಗ್ರಹಿಸುತ್ತಿದ್ದೇವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.