Home ಟಾಪ್ ಸುದ್ದಿಗಳು ಹಿಜಾಬ್ ವಿಚಾರಣೆ ನಾಳೆಗೆ ಮುಂದೂಡಿಕೆ: ಇಂದಿನ ವಾದ ಪ್ರತಿವಾದ ಹೀಗಿತ್ತು….

ಹಿಜಾಬ್ ವಿಚಾರಣೆ ನಾಳೆಗೆ ಮುಂದೂಡಿಕೆ: ಇಂದಿನ ವಾದ ಪ್ರತಿವಾದ ಹೀಗಿತ್ತು….

ಬೆಂಗಳೂರು: ಹಿಜಾಬ್ ಧರಿಸಿ ಕಾಲೇಜಿಗೆ ತೆರಳುವುದಕ್ಕೆ ಸಂಬಂಧಿಸಿದಂತೆ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿರುವ ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಇಂದು ಕೂಡ ವಿಚಾರಣೆ ಮುಂದುವರಿಸಿದೆ.

ವಕೀಲ ತಾಹಿರ್ : ನ್ಯಾಯಾಲಯದ ಮಧ್ಯಂತರ ಆದೇಶವನ್ನು ಸರ್ಕಾರ ದುರುಪಯೋಗ ಮಾಡಿದೆ. ಸಮವಸ್ತ್ರ ಕಡ್ಡಾಯ ಮಾಡಿರುವ ಕಾಲೇಜುಗಳಿಗೆ ಮಾತ್ರ ನ್ಯಾಯಾಲಯದ ಮಧ್ಯಂತರ ಆದೇಶ ಅನ್ವಯಿಸುತ್ತದೆ. ಆದರೆ ಸಮವಸ್ತ್ರ ಕಡ್ಡಾಯ ಮಾಡದಿರುವ ಕಾಲೇಜುಗಳೂ ಹಿಜಾಬ್‌ ತೆಗೆಯುವಂತೆ ವಿದ್ಯಾರ್ಥಿಗಳಿಗೆ ಒತ್ತಾಯ ಮಾಡುತ್ತಿವೆ.

ಸಿಜೆ ಅವಸ್ಥಿ : ಸ್ಪಷ್ಟನೆಗೆ ಮನವಿ ಸಲ್ಲಿಸಿ.

ಎಜಿ ಪ್ರಭುಲಿಂಗ ನಾವದಗಿ : ಆಧಾರರಹಿತ ಆರೋಪಗಳಿಗೆ ನಾವು ಪ್ರತಿಕ್ರಿಯಿಸಲಾಗದು. ವಕೀಲರು ಸೂಕ್ತವಾದ ಮನವಿ ಸಲ್ಲಿಸಲಿ.

ವಕೀಲ ದೇವದತ್‌ ಕಾಮತ್‌ : ಸರ್ಕಾರದ ಆದೇಶದಲ್ಲಿ ಉಲ್ಲೇಖಿಸಿರುವ ಸಾರ್ವಜನಿಕ ಸುವ್ಯವಸ್ಥೆ ಉಲ್ಲೇಖಿಸುತ್ತಿದ್ದಾರೆ. ಎಜಿ ಅವರು ನಿನ್ನೆ ಅದು ಸಾರ್ವಜನಿಕ ಸುವ್ಯವಸ್ಥೆ ಅಲ್ಲ ಎಂಬುದಾಗಿ ಹೇಳಿದ್ದಕ್ಕೆ ಉಲ್ಲೇಖ. ಸಂವಿಧಾನದ ಕನ್ನಡ ಭಾಷಾಂತರದಲ್ಲಿ ಎಲ್ಲೆಲ್ಲಿ ಸಾರ್ವಜನಿಕ ಸುವ್ಯವಸ್ಥೆ ಬಳಸಲಾಗಿದೆ ಎಂದು ಪರಿಶೀಲಿಸಿದ್ದೇನೆ. ಅದು ಸಾರ್ವಜನಿಕ ಸುವ್ಯವಸ್ಥೆ ಎಂದು ಇದೆ. ಅವರು ಭಾಷಾಂತರ ಓದಿಲ್ಲ ಎಂಬುದು ಆಶ್ಚರ್ಯಕರ ಸಂಗತಿ.

ನ್ಯಾ. ದೀಕ್ಷಿತ್‌ : ನಾವು ಸರ್ಕಾರದ ಆದೇಶವನ್ನು ವ್ಯಾಖ್ಯಾನಿಸುತ್ತಿದ್ದೇವೆ. ಸಂವಿಧಾನದಲ್ಲಿ ಏನು ಬಳಸಲಾಗಿದೆ ಎಂಬುದನ್ನು ಆಧರಿಸಿ ಜಿಒದಲ್ಲಿನ ಪದವನ್ನು ನಾವು ವ್ಯಾಖ್ಯಾನಿಸಲಾಗದು.

ವಕೀಲ ದೇವದತ್‌ ಕಾಮತ್‌ : ಸಾರ್ವಜನಿಕ ಸುವ್ಯವಸ್ಥೆ ಎಂಬ ಪದವು ಎರಡು ಅರ್ಥ ಹೊಂದಿರಲಾರದು ಎಂಬುದು ನನ್ನ ವಾದ. ಸಂವಿಧಾನದಲ್ಲಿ ಪಬ್ಲಿಕ್‌ ಆರ್ಡರ್‌ ಎಂದರೆ ಸಾರ್ವಜನಿಕ ಸುವ್ಯವಸ್ಥೆ. ಸರ್ಕಾರದ ಆದೇಶದಲ್ಲಿ ಸರ್ಕಾರವು ನಿರ್ದಿಷ್ಟ ಪದವನ್ನು ಬಳಸಿದರೆ ಅದು ಸಂವಿಧಾನದಲ್ಲಿ ಇರುವ ಪದದ ಅರ್ಥವನ್ನೇ ನೀಡಬೇಕು. ಸಾರ್ವಜನಿಕ ಸುವ್ಯವಸ್ಥೆ ಎಂಬ ಪದವನ್ನು ಸಂವಿಧಾನದಲ್ಲಿ ಒಂಭತ್ತು ಬಾರಿ ಬಳಕೆ ಮಾಡಲಾಗಿದೆ. ಪಬ್ಲಿಕ್‌ ಆರ್ಡರ್‌ ಎಂದರೆ ಸಾರ್ವಜನಿಕ ಸುವ್ಯವಸ್ಥೆ. ಸರ್ಕಾರದ ಆದೇಶದಲ್ಲಿ ಬಳಸಲಾಗಿರುವ ಆ ಪದವು ಬೇರೆ ಅರ್ಥ ಹೊಂದಿರಲಾಗದು.
ನಿನ್ನೆ ಪೀಠವು ನಾವು 25(1)ನೇ ವಿಧಿ ಬಗ್ಗೆ ಮಾತ್ರ ಮಾತನಾಡುತ್ತಿದ್ದೇವೆ. ಆದರೆ, 25(2)ನೇ ವಿಧಿ ಬಗ್ಗೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿತ್ತು. 25(2) ನೇ ವಿಧಿಯಡಿ ಸುಧಾರಣೆಗಾಗಿ ಅಗತ್ಯ ಧಾರ್ಮಿಕ ಆಚರಣೆಯನ್ನು ತುಂಡರಿಸಬಹುದೇ?
ಇದಕ್ಕೆ ಸರ್ದಾರ್‌ ಸೈದ್ನಾ ತಾಹೀರ್‌ ಸೈಫುದ್ದೀನ್‌ ವರ್ಸಸ್‌ ಬಾಂಬೆ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠವು ಉತ್ತರಿಸಿದೆ. ದಾವೂದಿ ಬೊಹ್ರಾ ಸಮುದಾಯದಲ್ಲಿ ಬಹಿಷ್ಕಾರ ಪದ್ಧತಿಯನ್ನು ತಡೆಯಲು ಕಾನೂನನ್ನು ತರಲಾಗಿತ್ತು. ಇದು ಅತ್ಯಗತ್ಯ ಧಾರ್ಮಿಕ ಆಚರಣೆ ಎಂದು ಹೇಳಿ ನ್ಯಾಯಾಲಯವು ಅದನ್ನು ವಜಾ ಮಾಡಿತ್ತು.
25(2)(ಎ) ಅಥವಾ (ಬಿ) ವಿಧಿ ಅಡಿಯಲ್ಲಿ ಸಾರ್ವಜನಿಕ ಆದೇಶ, ನೈತಿಕತೆ ಅಥವಾ ಆರೋಗ್ಯದ ವಿಚಾರವನ್ನು ಹೊರತುಪಡಿಸಿ ಅಗತ್ಯ ಧಾರ್ಮಿಕ ಆಚರಣೆ (ERP)ಯನ್ನು ಮೊಟಕುಗೊಳಿಸಲಾಗುವುದಿಲ್ಲ.
ಸುಪ್ರೀಂ ಕೋರ್ಟ್‌ ನಿರ್ದೇಶನದ ಪ್ರಕಾರ ಧಾರ್ಮಿಕ ಆಚರಣೆಯು ಅಸಹ್ಯಕರವಾಗಿದ್ದರೆ, ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಅಥವಾ ನೈತಿಕತೆಯ ಆಧಾರದ ಮೇಲೆ ರಾಜ್ಯವು ಅದನ್ನು ನಿರ್ಬಂಧಿಸಬಹುದು.
ಈ ಪ್ರಕರಣದಲ್ಲಿ, ಶಿರವಸ್ತ್ರ ಧರಿಸುವ ಆಚರಣೆಯು ಹಾನಿರಹಿತವಾದದ್ದು.
ಸಂವಿಧಾನದ 25ನೇ ವಿಧಿಯ ಮೂಲತತ್ವವೆಂದರೆ ಅದು ಯಾವುದೇ ನಂಬಿಕೆಯ ಆಚರಣೆಯನ್ನು ರಕ್ಷಿಸುತ್ತದೆ. ಆದರೆ, ಕೇವಲ ಧಾರ್ಮಿಕ ಗುರುತು ಅಥವಾ ಆಡಂಬರದ ದೇಶಭಕ್ತಿ ಪ್ರದರ್ಶನವಲ್ಲ.
ನನ್ನ ಶಾಲೆ ಮತ್ತು ಕಾಲೇಜು ದಿನಗಳಲ್ಲಿ ನಾನು ಕತ್ತಿಗೆ ರುದ್ರಾಕ್ಷಿ ಹಾಕಿಕೊಳ್ಳುತ್ತಿದ್ದೆ. ಇದು ನನ್ನ ಧಾರ್ಮಿಕ ಗುರುತು ಪ್ರದರ್ಶಿಸಲು ಅಲ್ಲ. ಇದು ನನ್ನ ಸೃಷ್ಟಿಕರ್ತನ ಜೊತೆ ಇದ್ದೇನೆ, ಒಂದು ರೀತಿಯಲ್ಲಿ ರಕ್ಷಣೆಗೆ ಒಳಗಾಗಿದ್ದೇನೆ ಎಂಬುದಕ್ಕಾಗಿತ್ತು.

ವಕೀಲ ದೇವದತ್‌ ಕಾಮತ್‌ : ಇದು ಧಾರ್ಮಿಕ ಗುರುತಿನ ಪ್ರದರ್ಶನವಲ್ಲ. ಇದು ನಂಬಿಕೆಯ ಆಚರಣೆ. ಅದನ್ನು ವಿರೋಧಿಸಲು ಯಾರೂ ಶಾಲು ಹಾಕಿಕೊಳ್ಳಲಿಲ್ಲ. ಇದು ಧಾರ್ಮಿಕ ಗುರುತು ತೋರಿಸುವುದು ಮಾತ್ರವಲ್ಲ. ಅದನ್ನು ಮೀರಿದ್ದಾಗಿದೆ ಎಂಬುದನ್ನು ತೋರಿಸಬೇಕಿದೆ.
ಇದಕ್ಕೆ ನಮ್ಮ ಗ್ರಂಥ, ವೇದ, ಉಪನಿಷ್‌ಗಳಲ್ಲಿ ಅನುಮತಿಸಿದ್ದರೆ ಅದನ್ನು ರಕ್ಷಿಸುವುದು ನಿಮ್ಮ ಆದ್ಯ ಕರ್ತವ್ಯ. ಇಲ್ಲದಿದ್ದರೆ ಸಂವಿಧಾನದ ೨೫ನೇ ವಿಧಿ ಅನ್ವಯಿಸದು.
ರಾಜ್ಯವು ಅವಲಂಬಿಸಿರುವ ಶಾಸನವು ಸುಧಾರಣೆಯ ಉದ್ದೇಶ ಹೊಂದಿರಬೇಕು. ಸರ್ಕಾರವು ಶಿಕ್ಷಣ ಕಾಯಿದೆ ಅವಲಂಬಿಸಿದೆ. ಆದರೆ, ಆ ಕಾನೂನು ಹಿಜಾಬ್ ನಿಷೇಧ ಅಥವಾ ಕೆಲವು ಸಾಮಾಜಿಕ ಸುಧಾರಣೆಗಾಗಿ ಜಾರಿಗೊಳಿಸಲಾದ ಕಾನೂನು ಎಂದು ತೋರುವುದಿಲ್ಲ. ಆ ಕಾನೂನು ನಿರ್ದಿಷ್ಟ ಉದ್ದೇಶ ಹೊಂದಿರಬೇಕು.

ವಕೀಲ ಕಾಮತ್‌ : ಹಿಜಾಬ್‌ ಕುರಿತಾಗಿ ಅದು ಒಂದು ಹಕ್ಕೇ ಎನ್ನುವ ಬಗ್ಗೆ ಇಸ್ಲಾಮೇತರ ಇತರೆ ದೇಶಗಳ/ನ್ಯಾಯಿಕ ವ್ಯಾಪ್ತಿ ಏನು ಹೇಳಿದೆ ಎನ್ನುವ ಬಗ್ಗೆ ನಾವು ತಿಳಿಯಲು ಪ್ರಯತ್ನಿಸಿದೆವು.

ಕಾಮತ್‌ರಿಂದ ಆಂಟೋನಿ ವರ್ಸಸ್‌ ಗವರ್ನಿಂಗ್‌ ಬಾಡಿ ಕುರಿತಾದ ದಕ್ಷಿಣ ಆಫ್ರಿಕಾ ತೀರ್ಪಿನ ಉಲ್ಲೇಖ.

ನ್ಯಾ. ದೀಕ್ಷಿತ್‌: ಅದು ಧಾರ್ಮಿಕ ದೇಶವೇ?

ವಕೀಲ ಕಾಮತ್‌ : ಇಲ್ಲ. ನಾನು ಉಲ್ಲೇಖಿಸುತ್ತಿರುವ ವ್ಯಾಪ್ತಿಯಲ್ಲಿ ಲಿಖಿತ ಸಂವಿಧಾನವಿದೆ.

ದಕ್ಷಿಣಾ ಆಫ್ರಿಕಾದಲ್ಲಿನ ಸಾಂವಿಧಾನಿಕ ನ್ಯಾಯಾಲಯದ ಮತ್ತೊಂದು ತೀರ್ಪಿನ ಉಲ್ಲೇಖ.

ವಕೀಲ ಕಾಮತ್‌ : ದಕ್ಷಿಣ ಭಾರತ ಮೂಲದ ಹಿಂದೂ ಯುವತಿಯು ಶಾಲೆಯಲ್ಲಿ ಮೂಗುತಿ ಧರಿಸಬಹುದೇ ಎಂಬುದಕ್ಕೆ ಸಂಬಂಧಿಸಿದ್ದಾಗಿತ್ತು. ಶಾಲೆಯ ವಾದವು, ಇದು “ಭಯಂಕರ ಪಥಸಂಚಲನ”ಕ್ಕೆ ಕಾರಣವಾಗುತ್ತದೆ ಎನ್ನುವುದಾಗಿತ್ತು.

ನಾವೆಲ್ಲರೂ ಹೇಗೆ ದ್ವೀಪಗಳಲ್ಲ, ಬದಲಿಗೆ ಅತೀತ ಶಕ್ತಿಯೊಂದರಿಂದ ಹೇಗೆ ಒಗ್ಗೂಡಿದ್ದೇವೆ ಎನ್ನುವ ಬಗ್ಗೆ ತೀರ್ಪಿನಿಂದ ಕೆಲ ಭಾಗವನ್ನು ಓದಿದ ಕಾಮತ್‌.

ವಕೀಲ ಕಾಮತ್‌ :  ನಂಬುವವರ ದೃಷ್ಟಿಯಿಂದ ಆಚರಣೆಯನ್ನು ನೋಡಬೇಕು. ಇದನ್ನೇ ಬಿಜೋ ಇಮ್ಯಾನ್ಯುಯಲ್‌ ಪ್ರಕರಣದಲ್ಲಿ ಹೇಳಲಾಗಿದೆ.

 ವಕೀಲ ಕಾಮತ್‌ :   ತೀರ್ಪಿನ ಸೂಚನೆ ಏನೆಂದರೆ, ನಿರ್ದಿಷ್ಟ ಪ್ರಮಾಣದ ಅವಕಾಶ ಇರಬೇಕು. ನಿರ್ದಿಷ್ಟ ಧರ್ಮ ಅಥವಾ ಸಂಸ್ಕೃತಿ ಸ್ವಾಗತಾರ್ಹವಲ್ಲ ಎಂಬ ಸಂದೇಶವನ್ನು ನೀವು ಸಮುದಾಯದ ಯಾರಿಗೂ ರವಾನಿಸಲು ಸಾಧ್ಯವಿಲ್ಲ.

 

ವಕೀಲ ಕಾಮತ್‌ :   ತೀರ್ಪಿನ ಸೂಚನೆ ಏನೆಂದರೆ, ನಿರ್ದಿಷ್ಟ ಪ್ರಮಾಣದ ಅವಕಾಶ ಇರಬೇಕು. ನಿರ್ದಿಷ್ಟ ಧರ್ಮ ಅಥವಾ ಸಂಸ್ಕೃತಿ ಸ್ವಾಗತಾರ್ಹವಲ್ಲ ಎಂಬ ಸಂದೇಶವನ್ನು ನೀವು ಸಮುದಾಯದ ಯಾರಿಗೂ ರವಾನಿಸಲು ಸಾಧ್ಯವಿಲ್ಲ.

ದಕ್ಷಿಣ ಆಫ್ರಿಕಾದ ಸಾಂವಿಧಾನಿಕ ನ್ಯಾಯಾಲಯವು ಬಾಲಕಿಗೆ ಆಕೆ ತಪ್ಪು ಎಂದು ಹೇಳಲಾಗದು. ಏಕೆಂದರೆ ಇತರರು ಅದೇ ರೀತಿ ಆ ಧರ್ಮ ಅಥವಾ ಸಂಸ್ಕೃತಿಗೆ ಸಂಬಂಧಿಸಿಲ್ಲ ಎಂದು ಹೇಳಿತ್ತು.

ಆ ತೀರ್ಪಿನ 112ನೇ ಪ್ಯಾರಾದಲ್ಲಿ ಬಾಲಕಿಯನ್ನು ಶಾಲೆಯಿಂದ ಹೊರಗಿಡುವುದು  ಒಪ್ಪಲಾಗದು ಎಂದು ಹೇಳಿತ್ತು.

ಇದು ಸಮವಸ್ತ್ರಕ್ಕೆ ಸಂಬಂಧಿಸಿದ ಪ್ರಕರಣವಲ್ಲ. ಆದರೆ, ಇದು ಈಗಾಗಲೇ ಇರುವ ಸಮವಸ್ತ್ರದ ವಿನಾಯಿತಿಗೆ ಸಂಬಂಧಿಸಿದ್ದಾಗಿದೆ ಎಂದು ದಕ್ಷಿಣ ಆಫ್ರಿಕಾ ನ್ಯಾಯಾಲಯ ಆ ವಿಚಾರದಲ್ಲಿ ಹೇಳಿತ್ತು.

ವಕೀಲ ಕಾಮತ್‌ :  ನಮ್ಮ ಪ್ರಕರಣದಲ್ಲಿ ಇದು ಸಮವಸ್ತ್ರ ವಿನಾಯಿತಿಗೆ ಸಂಬಂಧಿಸಿದ್ದೇ ಅಲ್ಲ. ಆದರೆ, ಹೆಚ್ಚುವರಿಯಾಗಿ ಯಾವುದಾದರೂ ಬಣ್ಣದ ಶಿರವಸ್ತ್ರ ಹಾಕುವುದಕ್ಕೆ ಸಂಬಂಧಿಸಿದ್ದಾಗಿದೆ.

ಮೂಗುತಿ ಧರಿಸುವುದಕ್ಕೆ ಅನುಮತಿಸಿದರೆ ಇತರರು ದೇಹದ ವಿವಿಧ ಅಂಗಗಳಿಗೆ ಆಭರಣಗಳನ್ನು ಚುಚ್ಚಿಕೊಳ್ಳುವ ವಿವಿಧ ಪ್ರದರ್ಶನಗಳಿಗೆ ವಿದ್ಯಾರ್ಥಿಗಳನ್ನು ಅನುಮತಿಸಬೇಕಾಗುತ್ತದೆ. ಇದೇ ವಾದವನ್ನು ಇಲ್ಲಿಯೂ ಎತ್ತಲಾಗಿದೆ.

ಈ ವಾದವು ಯಾವುದೇ ಅರ್ಹತೆ ಹೊಂದಿಲ್ಲ. ಏಕೆಂದರೆ ತೀರ್ಪು ಕೇವಲ ಧಾರ್ಮಿಕ ಮತ್ತು ಸಾಂಸ್ಕೃತಿಕ ಆಚರಣೆಗೆ ಮಾತ್ರ ಅನ್ವಯಿಸುತ್ತದೆ ಎಂದು ಹೇಳಿತ್ತು.

ಧರ್ಮ ಮತ್ತು ಸಂಸ್ಕೃತಿಯನ್ನು ತೋರ್ಪಡಿಸುವಿಕೆಯು “ಭಯಂಕರ ಪಥಸಂಚಲನ”ವಾಗಲಾರದು. ಆದರೆ, ಇದು ವೈವಿಧ್ಯತೆಯ ಸುಗಂಧವಾಗಿದೆ. ಇದು ನಮ್ಮ ರಾಷ್ಟ್ರವನ್ನು ಶ್ರೀಮಂತಗೊಳಿಸುತ್ತದೆ ಎಂದು ದಕ್ಷಿಣ ಆಫ್ರಿಕಾದ ನ್ಯಾಯಾಲಯ ಹೇಳಿತ್ತು.

ಸಿಜೆ ಅವಸ್ಥಿ: ಹತ್ತು ನಿಮಿಷಗಳಲ್ಲಿ ವಾದ ಪೂರ್ಣಗೊಳಿಸುತ್ತೇನೆ ಎಂದು ನಿನ್ನೆ ಹೇಳಿದ್ದಿರಿ.

ವಕೀಲ ಕಾಮತ್‌ :  ಹೌದು. ಆದರೆ, ನ್ಯಾಯಾಲಯ ನಿನ್ನೆ ಎತ್ತಿದ ಪ್ರಶ್ನೆಗಳಿಗೆ ಉತ್ತರಿಸುವುದು ನನ್ನ ಕರ್ತವ್ಯ. ಇಂದು ಖಂಡಿತಾ ನನ್ನ ವಾದವನ್ನು ಪೂರ್ಣಗೊಳಿಸುವೆ.

ಪಶ್ಚಿಮ ಬಂಗಾಳ ಸರ್ಕಾರವು ಭೋಬಿಶೈವೋತರ್‌ ಭೋತ್‌ ಸಿನಿಮಾಗೆ ನಿರ್ಬಂಧ ವಿಧಿಸಿದ್ದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ನ್ಯಾ. ಡಿ ವೈ ಚಂದ್ರಚೂಡ್‌ ಅವರು ಅಸಹಿಷ್ಣುತೆ ಹೆಚ್ಚುತ್ತಿರುವುದರ ಕುರಿತು ಮಾತನಾಡಿದ್ದರ ಉಲ್ಲೇಖ.

ವಕೀಲ ಕಾಮತ್‌ :  ಇನ್ನು ಯಾವುದೇ ತೀರ್ಪುಗಳನ್ನು ಉಲ್ಲೇಖಿಸಿ ನಿಮಗೆ ಸಮಸ್ಯೆ ಮಾಡುವುದಿಲ್ಲ. ನನ್ನ ಲಿಖಿತ ವಾದದಲ್ಲಿ ನಾನು ಎಲ್ಲವನ್ನೂ ಹೇಳಿದ್ದೇನೆ. ಇನ್ನು ಹತ್ತು ನಿಮಿಷದಲ್ಲಿ ವಾದ ಪೂರ್ಣಗೊಳಿಸುವೆ.

ಮೂಲಭೂತ ಹಕ್ಕುಗಳನ್ನು ತಡೆಯಲು ಚುಡಾಯಿಸುವವರು ವಿಶೇಷಾಧಿಕಾರ (ವಿಟೋ) ಬಳಸಲು ಬಿಡಲಾಗದು. ಈ ತತ್ವವನ್ನು ನ್ಯಾ. ಚಂದ್ರಚೂಡ್‌ ಮತ್ತು ನ್ಯಾ ಗುಲಾಂ ಅಬ್ಬಾಸ್‌ ಅಲಿ ಅವರು ಭಾರತದಲ್ಲಿಯೂ ಪರಿಗಣಿಸಿದ್ದಾರೆ.

ಮೂಲಭೂತ ಸ್ವಾತಂತ್ರ್ಯಗಳ ಜಾರಿಗಾಗಿ ಪರಿಸ್ಥಿತಿ ಸೃಷ್ಟಿಸುವುದು ರಾಜ್ಯದ ಸಕಾರಾತ್ಮಕ ಬಾಧ್ಯತೆಯಾಗಿದೆ.

ನಮ್ಮದು ಟರ್ಕಿಯ ಜಾತ್ಯತೀತವಾದವಲ್ಲ. ನಮ್ಮದು ಸಕಾರಾತ್ಮಕ ಜಾತ್ಯತೀತವಾದ. ನಮ್ಮಲ್ಲಿ ಸರ್ಕಾರವು ಎಲ್ಲಾ ಧರ್ಮೀಯರ ಮೂಲಭೂತ ಹಕ್ಕುಗಳು ಮತ್ತು ಧಾರ್ಮಿಕ ಸ್ವಾತಂತ್ರ್ಯಕ್ಕೆ ಅನುವು ಮಾಡಿಕೊಡುತ್ತದೆ. ಇಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾಗಿ ಪರಿಗಣಿಸಲಾಗುತ್ತದೆ.

ನಾವು ಯಾವುದೇ ಧಾರ್ಮಿಕ ಚಿಹ್ನೆಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದಿಲ್ಲ ಎಂದು ಹೇಳುವ ಟರ್ಕಿ ಅಲ್ಲ. ಹೀಗಾಗಿ ಹಿಜಾಬ್ ನಿಷೇಧವನ್ನು ನ್ಯಾಯಾಲಯ ಎತ್ತಿ ಹಿಡಿದಿತ್ತು. ಆದರೆ, ಅವರ ಸಂವಿಧಾನ ಸಂಪೂರ್ಣ ಭಿನ್ನವಾಗಿದೆ. ನಮ್ಮ ಸಂವಿಧಾನವು ವಿಭಿನ್ನ ನಂಬಿಕೆಗಳನ್ನು ಗುರುತಿಸುತ್ತದೆ.

ಸಮವಸ್ತ್ರವನ್ನು ಶಿಫಾರಸ್ಸು ಮಾಡಲು ಮತ್ತು ಜಾರಿಗೊಳಿಸಲು ನಿಮಗೆ ಅಧಿಕಾರವಿದೆ ಎಂದು ಭಾವಿಸಿದರೆ, ವಿದ್ಯಾರ್ಥಿಗಳು ಆ ಸಮವಸ್ತ್ರವನ್ನು ಅನುಸರಿಸದ ಕಾರಣ ಅವರನ್ನು ಶಾಲೆಯಿಂದ ಹೊರಹಾಕುವ ಅಧಿಕಾರ ಎಲ್ಲಿದೆ, ಇಲ್ಲಿ ಅನುಪಾತ ತತ್ವ ಬರುತ್ತದೆ.

ಸಿಜೆ ಅವಸ್ಥಿ: ನಿಮ್ಮ ಪ್ರಕರಣದಲ್ಲಿ ವಿದ್ಯಾರ್ಥಿಗಳನ್ನು ಹೊರಗಾಕಲಾಗಿದೆಯೇ?

ವಕೀಲ ಕಾಮತ್‌: ಇಲ್ಲ. ಆದರೆ, ಅವರನ್ನು ತರಗತಿಗೆ ಪ್ರವೇಶಿಸಲು ಬಿಟ್ಟಿಲ್ಲ. ಇದು ಒಂದೇ ಪರಿಣಾಮ ಉಂಟು ಮಾಡುತ್ತದೆ.

ನ್ಯಾ. ದೀಕ್ಷಿತ್‌: ಹೊರಹಾಕುವುದು ಒಂದು ವಿಚಾರ. ಅವಕಾಶ ನಿರಾಕರಣೆ ಇನ್ನೊಂದು ವಿಚಾರ.

ವಕೀಲ ಕಾಮತ್‌: ಸಮವಸ್ತ್ರದ ಬಣ್ಣದ ಶಿರವಸ್ತ್ರ ಹಾಕಿಕೊಳ್ಳಲು ಅವಕಾಶ ಮಾಡಿಕೊಡಿ. ಮಧ್ಯಂತರ ಆದೇಶ ಮುಂದುವರಿಸಬೇಡಿ ಎಂಬುದು ನನ್ನ ಕೋರಿಕೆ.

ಕಾಮತ್‌ ವಾದ ಪೂರ್ಣ. ಸಹೋದ್ಯೋಗಿಗಳಾದ ನಿಶಾಂತ್‌ ಪಾಟೀಲ್‌, ನಿಜಾಮ್‌ ಪಾಷಾ, ಶಾಹುಲ್‌ ಮತ್ತು ನಿಯಾಸ್‌ಗೆ ಧನ್ಯವಾದ ಅರ್ಪಣೆ.

ವಕೀಲ ರವಿವರ್ಮ : ಸರ್ಕಾರ ಇನ್ನಷ್ಟೇ ನಿರ್ಧಾರ ಮಾಡಬೇಕಿದೆ. ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಅದು ಪ್ರಕರಣವನ್ನು ಪರಿಶೀಲಿಸಲಿದೆ. ಇಲ್ಲಿಯ ತನಕ ಸರ್ಕಾರವು ಯಾವುದೇ ತೆರನಾದ ಸಮವಸ್ತ್ರ ಸೂಚಿಸಿಲ್ಲ ಅಥವಾ ಹಿಜಾಬ್‌ ನಿಷೇಧಿಸಿಲ್ಲ.
ಸರ್ಕಾರದ ಆದೇಶ ಉಲ್ಲೇಖಿಸಿ, ನಾನು ಸುವ್ಯವಸ್ಥೆ ವಿಚಾರಕ್ಕೆ ಹೋಗುವುದಿಲ್ಲ. ಅದು ಖಂಡಿತವಾಗಿಯೂ ಅವ್ಯವಸ್ಥೆಯಾಗಿದೆ.
ಸಮವಸ್ತ್ರದ ಕುರಿತು ನಿರ್ಧರಿಸಿಲ್ಲ ಎಂದು ಸರ್ಕಾರವೇ ಹೇಳಿದೆ. ಈ ಪ್ರಶ್ನೆ ನಿರ್ಧರಿಸಲು ಸರ್ಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ.
ಸಮವಸ್ತ್ರವನ್ನು ಪಾಲಿಸಬೇಕು ಎಂದು ಸರ್ಕಾರದ ಆದೇಶದಲ್ಲಿ ಹೇಳಲಾಗಿದೆ. ಹಿಜಾಬ್‌ ನಿಷೇಧಿಸಲಾಗಿಲ್ಲ. ಕಾಲೇಜು ಅಭಿವೃದ್ಧಿ ಸಮಿತಿಯು ಸಮವಸ್ತ್ರ ಸೂಚಿಸಬೇಕು ಎಂಬುದಾಗಿದೆ.
ಕರ್ನಾಟಕ ಶಿಕ್ಷಣ ಕಾಯಿದೆ ಉಲ್ಲೇಖ. ಕಾಲೇಜು ಅಭಿವೃದ್ಧಿ ಸಮಿತಿಯು (ಸಿಡಿಸಿ) ಕಾನೂನುಬಾಹಿರಯಾಗಿದ್ದು, ಕಾಯಿದೆ ಮತ್ತು ಅದರ ನಿಯಮಗಳಿಗೆ ವಿರುದ್ಧವಾಗಿದೆ. ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್‌ ೨(೭)ರ ಉಲ್ಲೇಖ. ಇದರಲ್ಲಿ ಸಕ್ಷಮ ಪ್ರಾಧಿಕಾರ ಎಂದು ಹೇಳಲಾಗಿದೆ. ಸಮವಸ್ತ್ರ ಸೂಚಿಸಲು ಸಿಡಿಸಿಗೆ ಯಾವುದೇ ಅಧಿಕಾರ ನೀಡಲಾಗಿಲ್ಲ.

ಸಿಜೆ ಅವಸ್ಥಿ: ಕಾಯಿದೆ ಅಡಿ ಸಿಡಿಸಿಯನ್ನು ವ್ಯಾಖ್ಯಾನಿಸಿಲ್ಲ ಎಂದು ನೀವು ಹೇಳುತ್ತಿದ್ದೀರಿ.

ವಕೀಲ ರವಿವರ್ಮ : ಕಾಯಿದೆ ಅಡಿ ಅದು ಪ್ರಾಧಿಕಾರವಲ್ಲ.

ಸಿಜೆ ಅವಸ್ಥಿ: ನಾಳೆ ವಿಚಾರಣೆ ಮುಂದುವರಿಸೋಣ.

ವಕೀಲ ರವಿವರ್ಮ : ನಾಳೆ ಕಾಲೇಜುಗಳು ಆರಂಭವಾಗುತ್ತಿವೆ. ನಿನ್ನೆ ನಾನು ಒಂದು ಮನವಿ ಸಲ್ಲಿಸಿದ್ದೇನೆ.

ಎಜಿ ನಾವದಗಿ: ಮನವಿ ದೋಷಪೂರಿತವಾಗಿದೆ. ಅದಕ್ಕೆ ನಾವು ಪ್ರತಿಕ್ರಿಯಿಸಲಾಗದು. ದಾಖಲೆಯಲ್ಲಿರುವ ಸಂಗತಿಗಳು ಮತ್ತು ವಾಸ್ತವ ಅಂಶಗಳ ಮೇಲೆ ಮಾತ್ರ ವಕೀಲರಿಂದ ಪ್ರಮಾಣವಾಗುತ್ತದೆ.

ವಕೀಲ ತಾಹೀರ್‌: ಸಿವಿಲ್‌ ನಿಯಮಗಳಡಿ ಅದಕ್ಕೆ ಅವಕಾಶವಿದೆ.

ಸಿಜೆ ಅವಸ್ಥಿ: ಇದು ಸರಿಯಾದ ವಿಧಾನವಲ್ಲ. ಅರ್ಜಿಯೊಂದಿಗೆ ಅರ್ಜಿದಾರರು ಪ್ರಮಾಣ ಮಾಡಿದ ಅಫಿಡವಿಟ್ ಅನ್ನು ನೀಡಬೇಕು. ಇದು ವಕೀಲರಿಗೆ ಸಾಧ್ಯವಿಲ್ಲ. ಈ ಅವ್ಯವಹಾರಕ್ಕೆ ನಾವು ಅವಕಾಶ ನೀಡುವುದಿಲ್ಲ.

ವಕೀಲ ತಾಹೀರ್‌ : ಪ್ರತಿಬಾರಿಯೂ ಉಡುಪಿಯಿಂದ ಬೆಂಗಳೂರಿಗೆ ಅರ್ಜಿದಾರರು ಬರುವುದು ಕಷ್ಟವಾಗುತ್ತದೆ.

ಇದನ್ನು ತಿರಸ್ಕರಿಸಿದ ಪೀಠ.
ನಾಳೆಗೆ ವಿಚಾರಣೆ ಮುಂದೂಡಿಕೆ.

Join Whatsapp
Exit mobile version