►ಯಾರಿಗೂ ತಮ್ಮ ಧರ್ಮ ಬಿಟ್ಟು ಬದುಕಿ ಎಂದು ಹೇಳಲು ಸಾಧ್ಯವಿಲ್ಲ
ಮಂಗಳೂರು: ಹಿಜಾಬ್ ವಿವಾದ ಇಡೀ ದೇಶಕ್ಕೆ ದೊಡ್ಡ ಅಪಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರು, ಕೇಸರಿ ಹಾಗೂ ಹಿಜಾಬ್ ವಿಚಾರವಾಗಿ ಪಕ್ಷದ ನಿಲುವು ಏನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ ಸಂವಿಧಾನವೇ ನಮ್ಮ ಧರ್ಮ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ನಾವೆಲ್ಲರೂ ಒಪ್ಪಿದ್ದೇವೆ. ಈ ವಿಚಾರ ನ್ಯಾಯಾಲಯದ ಮೆಟ್ಟಿಲೇರಿದ್ದು, ನ್ಯಾಯಾಲಯದ ತೀರ್ಪು ಏನೇ ಬಂದರೂ ನಾವದನ್ನು ಸ್ವಾಗತಿಸುತ್ತೇವೆ. ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಅವರು ಶಿಕ್ಷಣ ಎಲ್ಲರ ಹಕ್ಕು, ಸರಸ್ವತಿ ಎಲ್ಲರಿಗೂ ಸಿಗುವಂತಾಗಬೇಕು ಎಂದಿದ್ದಾರೆ. ಅವರ ನಿಲುವೇ ನಮ್ಮ ನಿಲುವು. ನಾನು ಈ ಹಿಂದೆ ಸಾಕಷ್ಟು ಬಾರಿ ಹೇಳಿದ್ದೇನೆ. ಧರ್ಮ ಯಾವುದಾದರೂ ತತ್ವವೊಂದೇ, ನಾಮ ನೂರಾದರೂ ದೈವ ಒಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ಕರ್ಮ ಹಲವಾದರೂ ನಿಷ್ಠೆ ಒಂದೇ, ದೇವನೊಬ್ಬ ನಾಮ ಹಲವು. ನಾವು ಜಾತಿ, ಧರ್ಮದ ವಿಚಾರದಲ್ಲಿ ಜನರನ್ನು ಬೇರೆ ಮಾಡಬಾರದು’ ಎಂದರು.
‘ಕೇಸರಿ ಶಾಲು ಯಾಕೆ ಬಂತು ಎಂದು ನಮಗೆ ಗೊತ್ತಿದೆ. ಮೊದಲು ನಾವು ದೇಶ ಉಳಿಸಬೇಕಿದೆ. ಆ ಬಗ್ಗೆ ಚಿಂತಿಸುತ್ತಿದ್ದೇವೆ. ದೇಶದಲ್ಲಿ ಹಣದುಬ್ಬರ, ತೆರಿಗೆ ಹೊರೆ, ಬೆಲೆ ಏರಿಕೆ ಮೂಲಕ ದಿನನಿತ್ಯ ಜನರ ಜೇಬು ಪಿಕ್ ಪಾಕೇಟ್ ಆಗುತ್ತಿದೆ. ಬೀದಿಬದಿ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ. ಯಾರಿಗೂ ಸರ್ಕಾರ ಸಹಾಯ ಮಾಡಿಲ್ಲ. ಆರ್ಥಿಕವಾಗಿ, ಮಾನಸಿಕವಾಗಿ ಕುಗ್ಗಿದ್ದಾರೆ. ಈ ವರ್ಗದವರಿಗೆ ಬ್ಯಾಂಕ್ ನಿಂದ ಯಾವುದೇ ರೀತಿಯ ಸಹಕಾರವೂ ದೊರೆತಿಲ್ಲ. ಸರ್ಕಾರ ಕೋವಿಡ್ ಸಂತ್ರಸ್ತರಿಗೆ ಪರಿಹಾರ ನೀಡುತ್ತಿಲ್ಲ. ಈ ವರ್ಗದವರಿಗೆ ಶಕ್ತಿ ತುಂಬಬೇಕು. ಜನಸಾಮಾನ್ಯರು ನೆಮ್ಮದಿಯಾಗಿ ಬದುಕಲು ಉದ್ಯೋಗ ಬೇಕು. ಆ ಬಗ್ಗೆ ನಾವೆಲ್ಲರೂ ಚಿಂತನೆ ಮಾಡಬೇಕು ಎಂದರು.
‘ಹಿಜಾಬ್ ವಿವಾದ ಇಡೀ ದೇಶಕ್ಕೆ ದೊಡ್ಡ ಅಪಮಾನ. ಈ ಕರಾವಳಿ ಭಾಗಕ್ಕೆ ಅದರದೇ ಆದ ಇತಿಹಾಸವಿದೆ. ಇಲ್ಲಿರುವ ದೇವಾಲಯ, ಧರ್ಮಕ್ಷೇತ್ರಗಳನ್ನು ಹುಡುಕಿಕೊಂಡು ಎಲ್ಲ ಮೂಲೆಗಳಿಂದ ಜನ ಬರುತ್ತಾರೆ. ಇಲ್ಲಿ ನೂರಾರು ಕಿ.ಮೀ. ಸಮುದ್ರವಿದೆ. ಆ ಮೂಲಕ ಉದ್ಯೋಗ ಸೃಷ್ಟಿಸಲು ನೆರವಾಗಲಿದೆ. ಕೇವಲ 40-50 ಕಿ.ಮೀ ಸಮುದ್ರ ಇರುವ ಗೋವಾ ಯಾವ ರೀತಿ ಅಭಿವೃದ್ಧಿ ಹೊಂದಿದೆ, ಈ ಭಾಗದಲ್ಲಿ ಏನಾಗಿದೆ ಎಂದು ನಾವು ಹೇಳಬೇಕಾದ ಅಗತ್ಯವಿಲ್ಲ. ಈ ಭಾಗದ ಹಿರಿಯರು ದೇಶಕ್ಕೆ ದೊಡ್ಡ ಬ್ಯಾಂಕುಗಳನ್ನು ಕೊಡುಗೆಯಾಗಿ ಕೊಟ್ಟಿದ್ದಾರೆ. ಅತಿ ಹೆಚ್ಚು ವೈದ್ಯರು, ಇಂಜಿನಿಯರ್ ಗಳು ಸೇರಿದಂತೆ ಅತಿ ದೊಡ್ಡ ಪ್ರಮಾಣದಲ್ಲಿ ಮಾನವ ಶಕ್ತಿಯನ್ನು ಈ ಭಾಗ ದೇಶಕ್ಕೆ ಕೊಟ್ಟಿದೆ ಎಂದರು.
‘ಇದೊಂದು ಜ್ಞಾನಭೂಮಿ. ವಿಶ್ವದ ಅನೇಕ ಕಡೆಗಳಿಂದ ಇಲ್ಲಿಗೆ ಓದಲು ಬರುತ್ತಾರೆ. ಪಿಯುಸಿ ಓದಲು ನಮ್ಮ ರಾಜ್ಯದ ಹಲವು ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ವಿದ್ಯಾರ್ಥಿಗಳು ಈ ಭಾಗಕ್ಕೆ ಬರುತ್ತಾರೆ. ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಅಟಲ್ ಬಿಹಾರಿ ವಾಜಪೇಯಿ ಅವರು ಬೆಂಗಳೂರು ವಿಮಾನ ನಿಲ್ದಾಣ ಉದ್ಘಾಟನೆ ಸಮಯದಲ್ಲಿ, ಇಷ್ಟು ದಿನ ವಿಶ್ವ ನಾಯಕರು ದೆಹಲಿಗೆ ಬಂದು ಭಾರತದ ಬೇರೆ ಪ್ರದೇಶಕ್ಕೆ ಹೋಗುತ್ತಿದ್ದರು. ಆದರೆ ಈಗ ಮೊದಲು ಬೆಂಗಳೂರಿಗೆ ಬಂದು ನಂತರ ದೆಹಲಿಗೆ ಆಗಮಿಸುತ್ತಿದ್ದಾರೆ ಎಂದಿದ್ದರು. ಇಲ್ಲಿ ವಿದ್ಯಾವಂತರು, ಮಾನವ ಶಕ್ತಿ, ಸಂಸ್ಕೃತಿ ಇದೆ ಎಂದು ಹೇಳಿದ್ದರು. ಇಲ್ಲಿ ಉದ್ಯೋಗ ಸೃಷ್ಟಿಸಲು ಪ್ರಯತ್ನಿಸದೇ, ಅವರ ಜೀವನಕ್ಕೆ ದಾರಿ ಕಲ್ಪಿಸಿಕೊಡದೇ, ಸಂಪತ್ತು ಸದ್ಬಳಕೆ ಮಾಡಿಕೊಳ್ಳದೇ, ಧಾರ್ಮಿಕ ವಿಚಾರವಾಗಿ ಮಕ್ಕಳ ಭಾವನೆ ಕೆರಳಿಸಿ ರಾಜ್ಯವನ್ನು ಹಾಳು ಮಾಡಲಾಗುತ್ತಿದೆ. ಇಡೀ ದೇಶ ಹಾಗೂ ವಿಶ್ವದಲ್ಲಿ ಈ ಕುರಿತು ಚರ್ಚೆ ನಡೆಯುತ್ತಿದೆ ಎಂದು ಡಿಕೆಶಿ ಹೇಳಿದರು.
‘ಶಾಲೆ, ಕಾಲೇಜಿಗೆ ವಿದ್ಯಾಭ್ಯಾಸಕ್ಕೆ ಹೋದಾಗ ನಾವು ಯಾರನ್ನೂ ವಿಭಿನ್ನವಾಗಿ ಕಾಣಲು ಸಾಧ್ಯವಿಲ್ಲ. ಒಬ್ಬರು ಕುಂಕುಮ ಇಟ್ಟುಕೊಂಡರೆ, ಮತ್ತೊಬ್ಬರು ಓಲೆ, ಬಳೆ ತೊಡುತ್ತಾರೆ. ಕೆಲವರು ಉಂಗುರ ತೊಟ್ಟರೆ ಮತ್ತೊಬ್ಬರು ಬೇರೆ ಹಾಕಿಕೊಳ್ಳುತ್ತಾರೆ. ಅವರ ಪದ್ಧತಿ ಅವರು ಪಾಲಿಸುತ್ತಾರೆ. ಯಾರಿಗೂ ತಮ್ಮ ಧರ್ಮ ಬಿಟ್ಟು ಬದುಕಿ ಎಂದು ಹೇಳಲು ಸಾಧ್ಯವಿಲ್ಲ. ಕಾನೂನಿದೆ, ಪದ್ಧತಿ ಇದೆ. ಅದನ್ನು ಪಾಲಿಸಿಕೊಂಡು ಹೋದರೆ ತಪ್ಪೇನು? ಇಲ್ಲದ್ದನ್ನು ಹುಟ್ಟು ಹಾಕಿ ಚುನಾವಣೆಯಲ್ಲಿನ ಸೋಲನ್ನು, ತಮ್ಮ ವೈಫಲ್ಯವನ್ನು ಮರೆಮಾಚಲು, ಸಮಾಜದಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ. ನಾವದನ್ನು ಖಂಡಿಸುತ್ತೇವೆ ಎಂದರು.
ಮುಂದೆ ನ್ಯಾಯಾಲಯದಲ್ಲಿ ಎಲ್ಲರಿಗೂ ನ್ಯಾಯ ಸಿಗಲಿದೆ. ನಮ್ಮ ಮೊದಲ ಗುರಿ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುವುದು, ಅವರು ನೆಮ್ಮದಿ ಜೀವನ ಮಾಡುವಂತೆ ನೋಡಿಕೊಳ್ಳುವುದು. ಕಾರಣ, ಈ ಭಾಗದ ಜನ ಬೇರೆ ರಾಜ್ಯ ಹಾಗೂ ದೇಶಗಳಿಗೆ ಉದ್ಯೋಗ ಅರಸಿ ಹೋಗುತ್ತಿದ್ದಾರೆ. ಈ ಯುವಕರಿಗೆ ಇಲ್ಲೇ ಉದ್ಯೋಗ ಕಲ್ಪಿಸಿ ಇದನ್ನು ಸಂಪದ್ಭರಿತ ಭೂಮಿಯನ್ನಾಗಿ ಮಾಡಬೇಕು ಎಂಬುದು ನಮ್ಮ ಪಕ್ಷದ ಆಸೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಆದರೆ ಜನರ ಭಾವನೆ ಕೆರಳಿಸಬಾರದು ಎಂಬುದು ನಮ್ಮ ಆಗ್ರಹ’ ಎಂದರು.
ಬಿಜೆಪಿ ನಾಯಕರ ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ಬಿಜೆಪಿ ನಾಯಕರು ಏನೇ ಮಾತನಾಡುವುದಿದ್ದರೂ ತಮ್ಮ ಸಚಿವ ಸಂಪುಟದಲ್ಲಿ ಮಾತನಾಡಲಿ. ಅಧಿಕಾರ ಸ್ವೀಕರಿಸುವಾಗ ಮಾಡಿದ ಪ್ರಮಾಣ ವಚನಕ್ಕೆ ಅವರು ಬದ್ಧರಾಗಿರಲಿ. ಚುನಾವಣೆಗೆ ಸ್ಪರ್ಧಿಸುವಾಗ, ಅಧಿಕಾರ ಸ್ವೀಕರಿಸುವಾಗ ಮಾಡಿದ ಆಣೆಯಂತೆ ನಡೆದುಕೊಳ್ಳಲಿ. ಅವರು ತಮ್ಮ ಪ್ರಮಾಣದ ಸ್ವರೂಪ ಬದಲಾಯಿಸಿ ಈ ರೀತಿ ಮಾತನಾಡಲಿ, ನಂತರ ನಾನು ಉತ್ತರ ನೀಡುತ್ತೇನೆ’ ಎಂದರು.
ಹಿಜಾಬ್ ವಿಚಾರದಲ್ಲಿ ಎಸ್ ಡಿಪಿಐ ಕೈವಾಡದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನನಗೆ ಯಾರೂ ವರದಿ ನೀಡಬೇಕಾದ ಅಗತ್ಯವಿಲ್ಲ. ಯಾರೂ ವರದಿ ಕೊಟ್ಟಿಲ್ಲ. ಇದು ಜನರ ಭಾವನೆ ಕೆರಳಿಸಿ ಯುವಕರು, ವಿದ್ಯಾರ್ಥಿಗಳ ಮನಸ್ಸಲ್ಲಿ ವಿಷಬೀಜ ಬಿತ್ತುವ ಪ್ರಯತ್ನ. ಇದರ ಬಗ್ಗೆ ಮಾತನಾಡುವುದಿಲ್ಲ. ಎಲ್ಲ ಪೋಷಕರು ಈ ವಿಚಾರದಲ್ಲಿ ಆತಂಕಗೊಂಡಿದ್ದಾರೆ’ ಎಂದರು.
ಈ ವಿಚಾರದಲ್ಲಿ ಕಾಂಗ್ರೆಸ್ ನ ಮುಸಲ್ಮಾನ ನಾಯಕರು ಮೌನವಾಗಿರುವುದೇಕೆ ಎಂಬ ಪ್ರಶ್ನೆಗೆ, ‘ಈ ವಿಚಾರದಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಮಾತನಾಡಿದ್ದಾರೆ. ಪಕ್ಷದ ಅಧ್ಯಕ್ಷನಾಗಿ ನಾನು ಮಾತನಾಡುತ್ತಿದ್ದೇನೆ. ಈ ವಿಚಾರದಲ್ಲಿ ಇಡೀ ಕಾಂಗ್ರೆಸ್ ಪಕ್ಷದ್ದು ಒಂದೇ ನಿಲುವು. ನಮ್ಮ ಧರ್ಮ ರಾಷ್ಟ್ರಧ್ವಜ, ನಮ್ಮ ಧರ್ಮ ಸಂವಿಧಾನ. ಇದು ಕೇವಲ ಮುಸಲ್ಮಾನರು ಅಥವಾ ಒಂದು ಸಮುದಾಯದ ವಿಚಾರವಲ್ಲ. ನಾವು ಯಾರನ್ನೂ ಬೆಂಬಲಿಸುತ್ತೇವೆ ಎಂಬುದಕ್ಕಿಂತ, ಸಂವಿಧಾನ ಉಳಿಸಿಕೊಂಡು ಹೋಗುವ ಬಗ್ಗೆ ಆಲೋಚಿಸಬೇಕು’ ಎಂದರು.
ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಬೇಕು. ನಿಮ್ಮಲ್ಲಿ ಜಾತ್ರೆಗಳಿಗೆಲ್ಲಾ ಅವಕಾಶ ಕೊಟ್ಟಿದ್ದಾರೆ. ರಾಮನಗರದಲ್ಲಿ ಎಲ್ಲದಕ್ಕೂ ನಿರ್ಬಂಧ ಹಾಕಿದ್ದಾರೆ ಎಂದು ಉತ್ತರಿಸಿದರು.
ಪಕ್ಷದ ಸದಸ್ಯತ್ವ ನೋಂದಣಿ:
ಸ್ವಾತಂತ್ರ್ಯ ಬಂದ 75 ವರ್ಷಗಳ ನಂತರ ಅನೇಕ ಬೆಳವಣಿಗೆಗಳಾಗಿವೆ. ಇಂದು ರಾಜ್ಯ ಹಾಗೂ ರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕೋವಿಡ್ ಪಿಡುಗಿನ ಒಂದೊಂದೇ ಅಲೆ ಬರುತ್ತಿದೆ. ರಾಷ್ಟ್ರ ನಾಯಕರು, ರಾಜ್ಯ ಸರ್ಕಾರಗಳು ಹೇಳಿದ್ದನ್ನೆಲ್ಲಾ ಜನ ಕೇಳಿದ್ದಾರೆ. ಚಪ್ಪಾಳೆ ತಟ್ಟು ಎಂದಾಗ ತಟ್ಟಿದ್ದಾರೆ, ದೀಪ ಹಚ್ಚಿ ಎಂದಾಗ ಹಚ್ಚಿದ್ದಾರೆ, ಲಾಕ್ ಡೌನ್, ಸೀಲ್ ಡೌನ್ನ್ ಮಾಡಿದ್ದಾರೆ, ಲಸಿಕೆ ತಗೊಳ್ಳಿ ಎಂದಿದ್ದಾರೆ. ಎಲ್ಲವನ್ನು ನಾವು ಪಾಲಿಸಿದ್ದೇವೆ.
ಆದರೂ ರೈತರು ಸಂಕಟದಲ್ಲಿದ್ದು, ಬೆಳೆ ಮಾರಲು ಪರದಾಡಿದರು. ಸ್ವಯಂ ವೃತ್ತಿ ಮಾಡುತ್ತಿದ್ದ ಬಟ್ಟೆ ಹೊಲಿಯುವವರು, ಬೀದಿ ವ್ಯಾಪಾರಿಗಳು, ಸವಿತಾ ಸಮಾಜದವರು, ಚಾಲಕರು ಸಂಕಷ್ಟಕ್ಕೆ ಸಿಲುಕಿದರು. ಸರ್ಕಾರ ಇವರಿಗಾಗಿ ಘೋಷಿಸಿದ ಪರಿಹಾರ ಇನ್ನೂ ಇವರ ಕೈ ಸೇರಿಲ್ಲ.
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರು ಪ್ಯಾಕೋಜ್ ಘೋಷಿಸಿತು. ಇದು ಯಾರಿಗೆ ತಲುಪಿತು ಎಂಬ ಮಾಹಿತಿ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದಿದ್ದ ಸರ್ಕಾರ ವಿಫಲವಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಯುವಕರ ಸ್ಥಿತಿ ಏನಾಗಿದೆ ಎಂಬುದಕ್ಕೆ ನಿಮ್ಮ ಜಿಲ್ಲೆಯೇ ಸಾಕ್ಷಿ. ಇತ್ತೀಚಿನ ಬಜೆಟ್ ನಲ್ಲಿ 60 ಲಕ್ಷ ಉದ್ಯೋಗ ನೀಡುತ್ತೇವೆ ಎಂದಿದ್ದಾರೆ.
ಎಲ್ಲ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ನಾವು ಚುನಾವಣೆಗಳನ್ನು ಗಮನಿಸುತ್ತಿದ್ದೇವೆ. ಜನ ರಾಜ್ಯ ಹಾಗೂ ರಾಷ್ಟ್ರದಲ್ಲಿ ಬದಲಾವಣೆ ಬಯಸುತ್ತಿದ್ದಾರೆ. ಬಹಳ ಜನ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಲು ಒಲವು ತೋರಿದ್ದಾರೆ.
ಕಾಂಗ್ರೆಸ್ ಸರ್ಕಾರ ಬ್ಯಾಂಕ್ ಗಳಿಂದ ಹಿಡಿದು ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದು, ಬಿಜೆಪಿ ಸರ್ಕಾರ ಇದನ್ನು ಉಳಿಸಿಕೊಳ್ಳಲಿಲ್ಲ ಎಂದು ಜನ ಆಲೋಚಿಸುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾರ್ಯಕಾರಿ ಸಮಿತಿ ಸಭೆ ಮಾಡಿದ್ದಾರೆ. ಪಕ್ಷದ ಆಂತರಿಕ ಚುನಾವಣೆಯನ್ನು ಸಂವಿಧಾನಬದ್ಧವಾಗಿ ಮಾಡಬೇಕು ಎಂದು 12 ವರ್ಷಗಳ ನಂತರ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಿದ್ದಾರೆ.
18 ವರ್ಷ ತುಂಬಿದ, ಕಾಂಗ್ರೆಸ್ ಸಿದ್ಧಾಂತ ಹಾಗೂ ನಾಯಕತ್ವದ ಮೇಲೆ ನಂಬಿಕೆ ಇಟ್ಟಿರುವವರನ್ನು ಸದಸ್ಯರಾಗಿ ಮಾಡಲು ಈ ಅಭಿಯಾನ ಆರಂಭಿಸಿದೆ. ಕಳೆದ ವರ್ಷ ನವೆಂಬರ್ 14ರಂದು ಚಾಲನೆ ನೀಡಿದೆವು.ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಅಭಿಯಾನ ಆರಂಭಿಸಿದೆವು. ಸದಸ್ಯರ ಮಾಹಿತಿಗಳನ್ನು ಇಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ಆನ್ಲೈನ್ ಅಭಿಯಾನಕ್ಕೆ ಒತ್ತು ನೀಡಿ ಡಿಜಿಟಲ್ ಸದಸ್ಯತ್ವ ನೋಂದಣಿ ಆರಂಭಿಸಿದ್ದೇವೆ.
ಇದು ಮಾರ್ಚ್ 31ಕ್ಕೆ ಮುಗಿಯಲಿದ್ದು, ಪ್ರತಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಬ್ಬರು ಮುಖ್ಯ ನೋಂದಣಿದಾರರು ಹಾಗೂ ಪ್ರತಿ ಬೂತ್ ಮಟ್ಟದಲ್ಲಿ ಇಬ್ಬರು ನೋಂದಣಿದಾರರನ್ನು ಮಾಡುತ್ತಿದ್ದೇವೆ. ಬ್ಲಾಕ್ ಅಧ್ಯಕ್ಷರು, ಜಿಲ್ಲಾ ನಾಯಕರು, ಎಲ್ಲ ಘಟಕಗಳ ಅಧ್ಯಕ್ಷರುಗಳು, ಶಾಸಕರನ್ನು ಮುಖ್ಯ ನೋಂದಣಿದಾರರನ್ನಾಗಿ ಮಾಡಿ ಮುಕ್ತ ಅವಕಾಶ ಮಾಡಲಾಗಿದೆ. ಪ್ರತಿ ಬೂತ್ ನಲ್ಲಿ ಒಬ್ಬ ನೋಂದಣಿದಾರಾಗಿ ಮಹಿಳೆಯರನ್ನು ಮಾಡಿದ್ದೇವೆ.
ಮುಖ್ಯ ನೋಂದಣಿದಾರರಾಗಲು 7253 ಅರ್ಜಿ ಬಂದಿದ್ದು, 5848 ಮುಖ್ಯ ನೋಂದಣಿದಾರರ ನೇಮಕವಾಗಿದೆ. ಉಳಿದವರ ಅರ್ಜಿ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ನೋಂದಣಿದಾರರನ್ನು ಭೇಟಿ ಮಾಡಿ ಮಾರ್ಗದರ್ಶನ ನೀಡಬೇಕಾಗಿದೆ. ಇವರುಗಳು ಬೂತ್ ಮಟ್ಟದ ನೋಂದಣಿದಾರರಿಗೆ ತರಬೇತಿ ನೀಡಬೇಕಾಗಿದೆ. ಹೀಗಾಗಿ ರಾಜ್ಯದ ಎಲ್ಲ ಕಡೆ ಪ್ರವಾಸ ಮಾಡಿ ಮುಖ್ಯ ನೋಂದಣಿದಾರರ ಭೇಟಿ ಮಾಡಿ ಮಾರ್ಗದರ್ಶನ ನೀಡುತ್ತಿದ್ದೇನೆ.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಪಕ್ಷದ ಸದಸ್ಯರಾಗಿರುವುದು ಹೆಮ್ಮೆ. ಪಕ್ಷದ ಸದಸ್ಯರಾಗಲು ಎಲ್ಲ ವರ್ಗದ ಜನ ಉತ್ಸಾಹ ತೋರಿರುವ ಹಿನ್ನೆಲೆಯಲ್ಲಿ ಈ ಸದಸ್ಯತ್ವ ನೋಂದಣಿ ಅಭಿಯಾನ ಆರಂಭಿಸಲಾಗಿದೆ.
ಈ ನೋಂದಣಿ ಅಭಿಯಾನ ಅವಧಿ ವಿಸ್ತರಣೆ ಆಗುವುದಿಲ್ಲ. ಈಗಾಗಲೇ ನಮ್ಮ ರಾಜ್ಯಕ್ಕೆ ರಿಟರ್ನಿಂಗ್ ಆಫಿಸರ್ ಗಳನ್ನು ನೇಮಕ ಮಾಡಲಾಗಿದೆ. ಸದಸ್ಯತ್ವ ನೋಂದಣಿ ಪೂರ್ಣಗೊಂಡ ನಂತರ ಜಿಲ್ಲಾ ರಿಟರ್ನಿಂಗ್ ಹಾಗೂ ಕ್ಷೇತ್ರವಾರು ರಿಟರ್ನಿಂಗ್ ಆಫಿಸರ್ ನೇಮವಾಗಿ ನಂತರ ಬೂತ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಗುವುದು. ಅಗತ್ಯ ಬಿದ್ದ ಸಂದರ್ಭದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ಅಭಿಪ್ರಾಯವನ್ನು ಆಯಾ ಕ್ಷೇತ್ರದ ಸದಸ್ಯರಿಂದ ಪಡೆಯಬಹುದು.
ಪಕ್ಷದಲ್ಲಿ ಈ ಹಿಂದೆಯೂ ಚುನಾವಣೆಗಳು ನಡೆದಿವೆ. ಈಗಲೂ ಆಗಲಿದೆ, ಮುಂದೆಯೂ ಆಗಲಿದೆ. ಯೂಥ್ ಕಾಂಗ್ರೆಸ್ ನಲ್ಲೂ ಚುನಾವಣೆ ಮೂಲಕ ಆಯ್ಕೆ ಮಾಡಲಾಗಿದೆ.
ಈಗ ಆಗುತ್ತಿರುವ ಸದಸ್ಯತ್ವ ಮತವಾಗಿ ಪರಿವರ್ತನೆಯಾಗುವುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ಸದಸ್ಯರಾಗುವುದು ಒಂದು ಭಾಗ್ಯ. ಕಾಂಗ್ರೆಸ್ ಬಗ್ಗೆ ಚಿಂತನೆ ಇರುವವರು ಮೊದಲು ಸದಸ್ಯರಾಗುತ್ತಾರೆ. ಬೇರೆಯವರು ಕೂಡ ಸದಸ್ಯರಾಗಬಹುದು. ಬೇರೆ ಪಕ್ಷದಲ್ಲಿ ಗುರುತಿಸಿಕೊಂಡಿದ್ದರೂ ನಮ್ಮ ಪಕ್ಷದ ಸದಸ್ಯರಾಗಬಹುದು. ಇದು ದೊಡ್ಡ ಗೌರವ’ ಎಂದರು.
ಇದುವರೆಗೂ ಎಷ್ಟು ಸದಸ್ಯರ ನೋಂದಣಿಯಾಗಿದೆ ಎಂಬ ಪ್ರಶ್ನೆಗೆ, ‘ನಾವು ಈಗಷ್ಟೇ ಆರಂಭಿಸಿದ್ದು, ಓರ್ವ ಮಹಿಳಾ ನೋಂದಣಿಕಾರರು 200ಕ್ಕೂ ಹೆಚ್ಚು ಜನರನ್ನು ನೋಂದಣಿ ಮಾಡಿಸಿದ್ದಾರೆ. ಅವರಿಗೆ ಕರೆ ಮಾಡಿ ಅಭಿನಂದನೆ ಸಲ್ಲಿಸಿದ್ದೇನೆ. ಸುಮಾರು 50 ಲಕ್ಷ ಸದಸ್ಯತ್ವ ನೋಂದಣಿಯ ಗುರಿ ಇದೆ. ಕೆಲವು ಕಡೆ ಬುಕ್ ಕೊಟ್ಟಿದ್ದರೂ, ಡಿಜಿಟಲ್ ಮೂಲಕ ಸದಸ್ಯತ್ವ ಮಾಡಲಾಗುವುದು. ನೋಂದಣಿದಾರರು ಮಾತ್ರ ಸದಸ್ಯತ್ವ ನೋಂದಣಿ ಮಾಡಲು ಸಾಧ್ಯ. ಆದಷ್ಟು ಸುಲಭವಾಗಿ ಈ ಪ್ರಕ್ರಿಯೆ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದರು.