ಬೆಂಗಳೂರು: ಹಿಜಾಬ್ ವಿವಾದ ಬಿಜೆಪಿ, ಆರ್ ಎಸ್ಎಸ್ ನ ಹಿಡನ್ ಅಜೆಂಡಾ. ಜನ ಸಾಮಾನ್ಯರಿಗೆ ಇದು ಗೊತ್ತಾಗುವುದಿಲ್ಲ. ಕಾರಣ, ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡಲಿಲ್ಲ. ಕರಾವಳಿ ಭಾಗದಲ್ಲಿ ಸರ್ಕಾರದ ವಿರುದ್ಧ ಜನ ನಿಂತರು. ಅದನ್ನು ಸರಿ ಮಾಡಿಕೊಳ್ಳಲು ಹಿಜಾಬ್ ವಿಚಾರ ಎಳೆದು ತಂದಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಈ ಹಿಂದಿನಿಂದಲೂ ಧರಿಸುತ್ತಿದ್ದರು. ಈಗ ಸ್ತಬ್ಧಚಿತ್ರದ ವಿಚಾರದಲ್ಲಿ ಆಗಿರುವ ಡ್ಯಾಮೇಜ್ ನಿಯಂತ್ರಿಸಲು ಈ ವಿವಾದ ತಂದಿದ್ದಾರೆ. ಇದನ್ನು ಬಿಜೆಪಿಯವರೇ ಆರಂಭಿಸಿದ್ದಾರೆ. ಈ ವಿಚಾರ ಈಗಲೇ ಯಾಕೆ ವಿವಾದವಾಗಿದೆ. ಬಿಜೆಪಿಯ ಹಿಡನ್ ಅಜೆಂಡಾವನ್ನು ಜನ ಅರ್ಥ ಮಾಡಿಕೊಂಡರೆ ಇವರಿಗೆ ಛಿಮಾರಿ ಹಾಕುತ್ತಾರೆ’ ಎಂದರು.
ಕಾಂಗ್ರೆಸ್ ವಾರ್ಡ್ ಮರುವಿಂಗಡಣೆ ವೇಳೆ ತಪ್ಪು ಮಾಡಿದ್ದು, ಅದನ್ನು ಈಗ ಸರಿ ಮಾಡಲಾಗುತ್ತಿದೆ ಎಂಬ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಕಾಂಗ್ರೆಸ್ ನವರು ಅಧಿಕಾರದಲ್ಲಿದ್ದಾಗ ಇದೇ ರೀತಿ ಮಾಡಿದ್ದರು ನಾವು ಸರಿಮಾಡುತ್ತಿದ್ದೇವೆ ಎಂದು ಯಾವ ಬಿಜೆಪಿ ನಾಯಕರು ಹೇಳುತ್ತಿದ್ದಾರೆ? ಹಿಂದೆ 2010ಕ್ಕೂ ಮುನ್ನ ಕ್ಷೇತ್ರ ಮರುವಂಗಡಣೆ ಮಾಡಿದಾಗ ಯಡಿಯೂರಪ್ಪ ಅವರ ಸರ್ಕಾರವಿತ್ತು, ನಾವು ಅಧಿಕಾರದಲ್ಲಿ ಇರಲಿಲ್ಲ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಪುಣರು. 2009ರಲ್ಲಿ ಮರುವಿಂಗಡಣೆ ಮಾಡಿ 198 ವಾರ್ಡ್ ಗಳನ್ನು ಮಾಡಿದ್ದು ಬಿಜೆಪಿಯವರು, ನಾವಲ್ಲ. ಜನರನ್ನು ತಪ್ಪುದಾರಿಗೆ ಎಳೆಯುವುದರಲ್ಲಿ ನಿಸ್ಸೀಮರು. ಅಧಿಕಾರಿಗಳು ಮಾಡಬೇಕಾದ ಮರುವಿಂಗಡಣೆಯನ್ನು ಬಿಜೆಪಿ ಶಾಸಕರು, ಸಂಸದರ ಕಚೇರಿಯಲ್ಲಿ ಆರ್ ಎಸ್ಎಸ್ ಮುಖಂಡರು ತಮಗೆ ಬೇಕಾದ ರೀತಿಯಲ್ಲಿ ಮಾಡುತ್ತಿದ್ದಾರೆ. ನಾವು ಯಾವಾಗ ತಪ್ಪಾಗಿ ಮಾಡಿದ್ದೇವೆ ಎಂದು ಹೇಳಲಿ. ಬರಲಿ ನಮ್ಮ ಜತೆ ಚರ್ಚೆಗೆ’ ಎಂದು ಸವಾಲೆಸೆದರು.
ಮುಂದಿನ ನಡೆ ಏನು ಎಂದು ಕೇಳಿದಾಗ, ‘ನಾವು ಮುಖ್ಯ ಆಯುಕ್ತರಾದ ಗೌರವ್ ಗುಪ್ತಾ ಅವರಿಗೆ ಮನವಿ ಕೊಟ್ಟಿದ್ದೇವೆ. ಅವರು ನ್ಯಾಯಯುತವಾಗಿ ಈ ಪ್ರಕ್ರಿಯೆ ಮಾಡಬೇಕು. ಅವರು ಪಕ್ಷಾತೀತವಾಗಿದ್ದು, ಅವರು ತಮ್ಮ ಕರ್ತವ್ಯ ಸರಿಯಾಗಿ ಮಾಡಬೇಕು. ಇದನ್ನು ಸರಿಯಾಗಿ ಮಾಡದಿದ್ದರೆ ನಾವು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇವೆ, ನಂತರ ನ್ಯಾಯಾಲಯದ ಮೊರೆ ಹೋಗುತ್ತೇವೆ. ಬೆಂಗಳೂರು ಇವರ ಆಸ್ತಿಯಲ್ಲ. ವೈಜ್ಞಾನಿಕ ರೀತಿಯಲ್ಲಿ ಮರುವಿಂಗಡಣೆ ಮಾಡಲಿ. ಜನ ಯಾರನ್ನು ಇಷ್ಟಪಡುತ್ತಾರೋ ಅವರನ್ನು ಆಯ್ಕೆ ಮಾಡುತ್ತಾರೆ. ಈ ರೀತಿ ವಾಮಮಾರ್ಗದಲ್ಲಿ ಅಧಿಕಾರದಲ್ಲಿ ಬರಲು ಪ್ರಯತ್ನಿಸಬಾರದು. ಅವರಿಗೆ ಚುನಾವಣೆ ನ್ಯಾಯುತವಾಗಿ ಎದುರಿಸಲು ಸಾಧ್ಯವಾಗದಿದ್ದರೆ, ಇದನ್ನು ರದ್ದು ಮಾಡಿ ತಮಗೆ ಬೇಕಾದವರನ್ನೇ ನಾಮನಿರ್ದೇಶನ ಮಾಡಿಕೊಳ್ಳಲಿ. ಇವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಹೀಗಾಗಿ ತಮಗೆ ಬೇಕಾದವರನ್ನೇ ಆಯ್ಕೆ ಮಾಡಿಕೊಳ್ಳಲಿ ಈ ರೀತಿ ಕಚಡಾ ಕೆಲಸ ಮಾಡುವುದು ಬೇಡ’ ಎಂದರು.
‘ಬಿಜೆಪಿ ಆಯುಕ್ತರ ಬಳಿ ಸಣ್ಣ ದಾಖಲೆಯೂ ಇಲ್ಲ. ಬಿಜೆಪಿಯವರು ಕೊಟ್ಟ ಕರಡನ್ನೇ ನಂತರ ಅಧಿಕಾರಿಗಳು ನೀಡುತ್ತಾರೆ. ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಬೇಕು, ನಿಮ್ಮ ಮೇಲೆ ಗೌರವವಿದೆ, ನೀವು ಬಿಜೆಪಿ ಹೇಳಿದಂತೆ ಕೇಳಬಾರದು ಎಂದು ಮನವಿ ಮಾಡುತ್ತೇವೆ. 198 ವಾರ್ಡ್ ಗಳ ಬದಲು 243 ವಾರ್ಡ್ ಮಾಡುತ್ತೇವೆ, ಬೆಂಗಳೂರಿಗೆ ವಿಶೇಷ ಕಾಯ್ದೆ ತರುತ್ತೇವೆ ಎಂದಾಗ ಬೆಂಗಳೂರಿಗೆ ಒಳ್ಳೆಯದಾಗುತ್ತದೆ ಎಂದು ಎಲ್ಲರೂ ಸಹಕಾರ ನೀಡಿದ್ದೆವು. ಅವರು ಕೇವಲ ಆರು ತಿಂಗಳು ಸಮಯ ಕೇಳಿದ್ದರು. ಆದರೆ ಈಗ ಒಂದೂವರೆ ವರ್ಷವಾಗಿದೆ’ ಎಂದರು.