ಮೈಸೂರು: ಹಿಂದಿನ ಬಿಜೆಪಿ ಸರಕಾರ ಆದೇಶಿಸಿದ್ದ ಹಿಜಾಬ್ ನಿಷೇಧವನ್ನು ವಾಪಸ್ ತೆಗೆಯೋದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಕರ್ನಾಟಕದಲ್ಲಿ ಹಿಜಾಬ್‌ಗೆ ನಿಷೇಧ ರದ್ದಾಗಲಿದೆ ಎಂದಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಕವಲಂದೆ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಸೂಚನೆ ನೀಡಿದ್ದೇನೆ. ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಬೋಗಸ್. ಬಟ್ಟೆ, ಉಡುಪು, ಜಾತಿ, ಆಧಾರದ ಮೇಲೆ ಜನರನ್ನು ವಿಭಜಿಸುವ, ಸಮಾಜವನ್ನು ವಿಭಜಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹೀಗಾಗಿ ಹಿಜಾಬ್ ನಿಷೇಧವನ್ನು ವಾಪಸ್ ಪಡೆಯಲು ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಆಹಾರ, ಉಡುಪಿನ ಸಂಸ್ಕೃತಿ ಬಗ್ಗೆ ಬಿಜೆಪಿ ವಿಚಾರಗಳನ್ನು ಖಂಡಿಸಿದ ಸಿಎಂ, ರಾಜ್ಯದಲ್ಲಿ ನೋ ಹಿಜಾಬ್ ಬ್ಯಾನ್, ಇನ್ನು ಮುಂದೆ ಹಿಜಾಬ್ ಧರಿಸಿ ಹೋಗಿ ಎಂದು ಹೇಳಿದ್ದಾರೆ.
ಬಿಜೆಪಿಯವರು ಟೋಪಿ ಹಾಕಿಕೊಂಡವರು, ಗಡ್ಡ ಬಿಟ್ಟವರು ಎಂದೆಲ್ಲಾ ಭೇದಭಾವ ಮಾಡುತ್ತಾರೆ. ಆದರೆ, ನಾವು ಯಾವುದೇ ಜಾತಿ, ಧರ್ಮಕ್ಕೆ ಕಟ್ಟುಬಿದ್ದಿಲ್ಲ. ನಮ್ಮ ಯೋಜನೆಗಳು ಜಾತಿ ಧರ್ಮಕ್ಕೆ ಸೀಮಿತವಾಗಿಲ್ಲ. ಎಲ್ಲಾ ಬಡಜನರಿಗೂ ನಮ್ಮ ಯೋಜನೆಗಳು ತಲುಪಬೇಕು ರೂಪಿಸಿದ್ದೇವೆ ಎಂದರು.