Home ಜಾಲತಾಣದಿಂದ ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

ಅಶ್ವಥ್‌ ನಾರಾಯಣ್‌ಗೆ ಹೈಕೋರ್ಟ್‌ನಿಂದ ತಾತ್ಕಾಲಿಕ ರಿಲೀಫ್‌

ಬೆಂಗಳೂರು: ಟಿಪ್ಪು ರೀತಿ ಸಿದ್ದರಾಮಯ್ಯರನ್ನು ಮುಗಿಸಬೇಕು ಎಂದಿದ್ದ ಮಾಜಿ ಸಚಿವ ಅಶ್ವಥ್‍ ನಾರಾಯಣ್‍ಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್ ನೀಡಿದೆ.

ಮೊನ್ನೆ ಮೈಸೂರಿನ ದೇವರಾಜ ಠಾಣೆಯಲ್ಲಿ ದಾಖಲಾಗಿದ್ದ FIR ರದ್ದತಿಗೆ ನಿರ್ದೇಶನ ನೀಡುವಂತೆ ಕೋರಿ ಅಶ್ವಥ್‍ನಾರಾಯಣ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಅಶ್ವಥ್‍ನಾರಾಯಣ್ ವಿರುದ್ಧದ FIR ಗೆ ಸಂಬಂಧಿಸಿದ ತನಿಖೆಗೆ ನಾಲ್ಕು ವಾರ ತಡೆ ನೀಡಿ ಆದೇಶ ನೀಡಿದೆ.

ಅಶ್ವಥ್‍ನಾರಾಯಣ್ ವಿರುದ್ಧದ ತನಿಖೆಗೆ ನಾಲ್ಕು ವಾರ ತಡೆ ನೀಡಲಾಗಿದ್ದು, ಅಷ್ಟರೊಳಗೆ ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಬೇಕು ಎಂದು ಸೂಚಿಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ವಿಚಾರಣೆ ಮುಂದೂಡಿದೆ.

ಅರ್ಜಿದಾರರ ಪರ ಹಿರಿಯ ವಕೀಲ ಪ್ರಭುಲಿಂಗ ನಾವಡಗಿ ಹಾಜರಾಗಿ, ಮೊದಲೆರಡು ದೂರುಗಳನ್ನು ಎನ್‍ಸಿಆರ್ ಹಾಕಿ ಮುಕ್ತಾಯ ಮಾಡಿರುವುದಕ್ಕೆ ಪೊಲೀಸರು ಮಾಹಿತಿ ಕೊಡಬೇಕು. ಸರ್ಕಾರ ಬದಲಾದ ಮಾತ್ರಕ್ಕೆ ರಾತ್ರೋರಾತ್ರಿ ಏನು ಬದಲಾವಣೆ ಆಗಿದೆ. ಪೊಲೀಸರು ಈ ರೀತಿ ನಡೆದುಕೊಳ್ಳಲಾಗದು ಎಂದು ಆಕ್ಷೇಪಿಸಿದರು. ಈ ವಾದಕ್ಕೆ ರಾತ್ರೋರಾತ್ರಿ ಏನು ಬದಲಾಗಿದೆ ಎಂದು ನೀವು ಕೇಳುವಂತಿಲ್ಲ ಎಂದು ಲಘುಧಾಟಿಯಲ್ಲಿ ನ್ಯಾಯಪೀಠ ಹೇಳಿತು.

ಎನ್‍ಸಿಆರ್ ಬಳಿಕ ಅದೇ ಪ್ರಕರಣಕ್ಕೆ ಸಂಬಂಧಿಸಿ ಎಫ್‍ಐಆರ್ ದಾಖಲಿಸಲಾಗದು ಎಂಬ ಅರ್ಜಿದಾರರ ಪರ ವಕೀಲರ ವಾದವನ್ನು ಮೇಲ್ನೋಟಕ್ಕೆ ಒಪ್ಪಲಾಗದು. ಇದನ್ನು ಮುಂದಿನ ಹಂತದಲ್ಲಿ ಪರಿಗಣಿಸಲಾಗುವುದು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

Join Whatsapp
Exit mobile version