Home ಟಾಪ್ ಸುದ್ದಿಗಳು ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ಛೀಮಾರಿ: ಎಫ್‌ಐಆರ್ ರದ್ದು ಕೋರಿ ಹಾಕಿದ್ದ ಅರ್ಜಿ ವಜಾ

ಶಾಸಕ ಹರೀಶ್ ಪೂಂಜಾಗೆ ಹೈಕೋರ್ಟ್ ಛೀಮಾರಿ: ಎಫ್‌ಐಆರ್ ರದ್ದು ಕೋರಿ ಹಾಕಿದ್ದ ಅರ್ಜಿ ವಜಾ

ಬೆಂಗಳೂರು: ತನ್ನ ವಿರುದ್ಧ ದಾಖಲಾದ ಎಫ್‌ಐಆ‌ರ್ ರದ್ದು ಕೋರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಪೊಲೀಸರು ಚಾರ್ಜ್ ಶೀಟ್ ಹಾಕಿರುವುದರಿಂದ ಕೆಳಗಿನ ಕೋರ್ಟಿನಲ್ಲೇ ಅರ್ಜಿ ಸಲ್ಲಿಸಿ ಇತ್ಯರ್ಥ ಮಾಡಿಕೊಳ್ಳುವಂತೆ ಸೂಚಿಸಿದೆ.

ಅಲ್ಲದೆ ಅರ್ಜಿ ಸ್ವೀಕರಿಸಿದ ನ್ಯಾಯಾಧೀಶ ಕೃಷ್ಣ ಎಸ್. ದೀಕ್ಷಿತ್, ಪೊಲೀಸರ ಮೇಲೆ ನಿಂದಿಸಿದ್ದನ್ನು ಕಟು ಶಬ್ದಗಳಲ್ಲಿ ಖಂಡಿಸಿದೆ. ಹರೀಶ್ ಪೂಂಜ ವರ್ತನೆಗೆ ಛೀಮಾರಿ ಹಾಕಿ, ಇದೇ ರೀತಿಯಾದರೆ ಮುಂದೆ ನ್ಯಾಯಾಧೀಶರ ಕರ್ತವ್ಯಕ್ಕೂ ನೀವು ಅಡ್ಡಿ ಪಡಿಸಬಹುದು ಎಂದು ಹೇಳಿದ್ದಾರೆ.

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಯುವಮೋರ್ಚಾ ಮುಖಂಡ ಶಶಿರಾಜ್ ಶೆಟ್ಟಿ ಬಂಧನಕ್ಕೆ ವಿರುದ್ಧವಾಗಿ ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಠಾಣೆಗೆ ನುಗ್ಗಿ ಪೊಲೀಸರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಬಳಿಕ ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆಗೆ ಪ್ರತಿಭಟನೆ ನಡೆಸಿ, ಪೊಲೀಸರನ್ನು ನಿಂದಿಸಿದ್ದರು. ಎರಡು ಘಟನೆಗೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸರು ಎರಡು ಪ್ರತ್ಯೇಕ ಎಫ್‌ಐ‌ರ್ ದಾಖಲು ಮಾಡಿದ್ದರು. ಶಾಸಕರನ್ನು ಬಂಧಿಸುವುದಕ್ಕೂ ಪೊಲೀಸರು ಮುಂದಾಗಿದ್ದರು. ಆದರೆ ಬಿಜೆಪಿ ಕಾರ್ಯಕರ್ತರ ಹೈಡ್ರಾಮಾ ಹಿನ್ನೆಲೆಯಲ್ಲಿ ಬಂಧನ ಕ್ರಮವನ್ನು ಪೊಲೀಸರು ಕೈಬಿಟ್ಟಿದ್ದರು.

ಇದರ ಬೆನ್ನಲ್ಲೇ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದ ಹರೀಶ್ ಪೂಂಜ ಪರ ವಕೀಲರು, ಎಫ್‌ಐಆರ್ ರದ್ದು ಪಡಿಸಲು ಕೇಳಿಕೊಂಡಿದ್ದರು.

Join Whatsapp
Exit mobile version