Home ಟಾಪ್ ಸುದ್ದಿಗಳು ಅಪ್ರಾಪ್ತ ವಯಸ್ಸಿನ ಪತ್ನಿ ಗರ್ಭಿಣಿಯಾಗಲು ಕಾರಣನಾದ ಮುಸ್ಲಿಂ ಪತಿಯ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಅಪ್ರಾಪ್ತ ವಯಸ್ಸಿನ ಪತ್ನಿ ಗರ್ಭಿಣಿಯಾಗಲು ಕಾರಣನಾದ ಮುಸ್ಲಿಂ ಪತಿಯ ವಿರುದ್ಧದ ಪೋಕ್ಸೋ ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ಬೆಂಗಳೂರು: ಅಪ್ರಾಪ್ತ ವಯಸ್ಸಿನ ಪತ್ನಿಯನ್ನು ಗರ್ಭಿಣಿಯಾಗಲು ಕಾರಣನಾಗಿದ್ದ ಮುಸ್ಲಿಂ ಪತಿಯ ವಿರುದ್ಧದ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ನಿಯಂತ್ರಣ ಕಾಯಿದೆ (ಪೋಕ್ಸೊ) ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ. ಸಂತ್ರಸ್ತೆ ಮತ್ತು ಆರೋಪಿಯು ರಾಜಿ ಆಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಪ್ರಕರಣವನ್ನು ಮುಕ್ತಾಯಗೊಳಿಸಿದೆ.

ಪ್ರಕರಣ ರದ್ದು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರಿದ್ದ ಏಕಸದಸ್ಯ ಪೀಠವು ಆದೇಶ ಮಾಡಿದೆ.

“ಉಭಯ ಪಕ್ಷಕಾರರು ಸಲ್ಲಿಸಿರುವ ಜಂಟಿ ಮೆಮೊದಲ್ಲಿ ವ್ಯಾಜ್ಯವನ್ನು ಇತ್ಯರ್ಥಪಡಿಸಿಕೊಂಡಿರುವುದಾಗಿ ಹೇಳಿದ್ದಾರೆ. ಪ್ರಕರಣದ ಸನ್ನಿವೇಶ ಮತ್ತು ದಾಖಲೆಗಳನ್ನು ಪರಿಗಣಿಸಿದರೆ ಪ್ರಕರಣವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಜತೆಗೆ ಸಂತ್ರಸ್ತೆ ಪ್ರತಿಕೂಲ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ ತನಿಖೆ ನಡೆದರೂ ಅದು ವ್ಯರ್ಥವಾಗುತ್ತದೆ. ಹೀಗಾಗಿ, ಪ್ರಕರಣವನ್ನು ರದ್ದುಗೊಳಿಸಲಾಗುತ್ತಿದೆ’ʼ ಎಂದು ಪೀಠ ಆದೇಶ ಮಾಡಿದೆ.

ಮೊಹಮ್ಮದ್ ಸಮೀಮ್ ಮತ್ತು ಹರಿಯಾಣ ರಾಜ್ಯ ಪ್ರಕರಣದಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ನೀಡಿರುವ ಪ್ರಕರಣಗಳನ್ನು ಪರಿಗಣಿಸಿ ಈ ಆದೇಶ ಮಾಡಲಾಗಿದೆ.

ಅದರಂತೆ ಅರ್ಜಿದಾರರ ವಿರುದ್ಧದ ಪೋಕ್ಸೊ ಕಾಯಿದೆ ಸೆಕ್ಷನ್ 5(ಎಲ್), 6 ಮತ್ತು 17, ಐಪಿಸಿ ಸೆಕ್ಷನ್ 376, 372(2)(ಎನ್) ಮತ್ತು ಬಾಲ್ಯ ವಿವಾಹ ನಿರ್ಬಂಧ ಕಾಯಿದೆ ಸೆಕ್ಷನ್ 9 ಮತ್ತು 11ರಡಿ ದಾಖಲಾಗಿದ್ದ ಪ್ರಕರಣವನ್ನು ರದ್ದು ಮಾಡಿದೆ.

ಪ್ರಕರಣದ ಹಿನ್ನೆಲೆ: ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯಕೀಯ ತಪಾಸಣೆಗೆ ಹೋಗಿದ್ದಾಗ 17 ವರ್ಷ 2 ತಿಂಗಳಾಗಿರುವ ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿರುವ ಅಂಶ ಬೆಳಕಿಗೆ ಬಂದಿತ್ತು. ಆ ಕುರಿತಂತೆ ಬೆಂಗಳೂರಿನ ಚಂದ್ರ ಲೇಔಟ್ ಪೊಲೀಸರು ಆರೋಪಿ ಪತಿಯ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದರು.

ಆದರೆ, ಆರೋಪಿ ತಾನು ತಪ್ಪೆಸಗಿಲ್ಲ, ಮೊಹಮದ್ದೀಯನ್ ಕಾನೂನು ಪ್ರಕಾರ 15 ವರ್ಷ ಆದ ನಂತರ ಬಾಲಕಿಯನ್ನು ಮದುವೆಯಾಗಬಹುದು. ಅದರಂತೆ ನಾನು ಮದುವೆಯಾಗಿದ್ದೇನೆ. ಇದೀಗ ಸಂತ್ರಸ್ತೆ ವಯಸ್ಕಳಾಗಿದ್ದು, ಮಗುವಿಗೆ ಜನ್ಮ ನೀಡಿದ್ದಾರೆ. ಆ ಮಗುವಿಗೆ ಈಗ ಎರಡು ತಿಂಗಳು. ಇಬ್ಬರೂ ಜೊತೆಯಾಗಿ ಬದುಕುತ್ತಿದ್ದೇವೆ. ಹೀಗಾಗಿ, ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.

(ಕೃಪೆ: ಬಾರ್ & ಬೆಂಚ್)

Join Whatsapp
Exit mobile version