Home ಟಾಪ್ ಸುದ್ದಿಗಳು ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಕಿರುಕುಳ: ಸಿಸಿಟಿವಿ ದೃಶ್ಯಾವಳಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಕಿರುಕುಳ: ಸಿಸಿಟಿವಿ ದೃಶ್ಯಾವಳಿ ಸಲ್ಲಿಸಲು ಹೈಕೋರ್ಟ್‌ ಸೂಚನೆ

ಬೆಂಗಳೂರು: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್‌ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಕಿರುಕುಳ ನೀಡಲಾಗಿದೆ ಎಂಬ ಬಗ್ಗೆ ವಿಧಿ ವಿಜ್ಞಾನ ಪ್ರಯೋಗಾಲಯ ಹಾಗೂ ಎನ್‌ಐಎ ಕಚೇರಿಯಲ್ಲಿನ ಸಿಸಿಟಿವಿಯ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ವಿಶೇಷ ಕೋರ್ಟ್‌ಗೆ ಸಲ್ಲಿಸುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ.

ಪ್ರಕರಣದ ಪ್ರಮುಖ ಆರೋಪಿ ಮುಹಮ್ಮದ್‌ ಸೈಯದ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾ. ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ನ್ಯಾ. ಜಿ.ಬಸವರಾಜ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಎಫ್ಎಸ್‌ಎಲ್‌ ಮತ್ತು ಎನ್‌ಎಐ ಕಚೇರಿಗಳಲ್ಲಿ 2022ರ ನವೆಂಬರ್‌ ತಿಂಗಳ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದರೆ ಅದನ್ನು ಪಡೆದುಕೊಂಡು ವಿಶೇಷ ಕೋರ್ಟ್‌ಗೆ ಸಲ್ಲಿಸಬೇಕು ಎಂದು ವಿಧಿ ವಿಜ್ಞಾನ ಪ್ರಯೋಗಾಲಯ ಮತ್ತು ಎನ್‌ಐಎ ಇದರ ಕಂಪ್ಯೂಟರ್‌ ವಿಭಾಗಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ವಿಲೇವಾರಿ ಮಾಡಿತು.

ಅಲ್ಲದೆ, ಅರ್ಜಿದಾರರ ಕೋರಿಕೆಯಂತೆ ಎನ್‌ಐಎ ಅಧಿಕಾರಿಗಳ ಕರೆ ದಾಖಲೆಗಳನ್ನು ನೀಡಲಾಗದು. ಏಕೆಂದರೆ ಭಾರತೀಯ ಸಾಕ್ಷ್ಯ ಕಾಯ್ದೆ -1872 ಸೆಕ್ಷನ್‌ 124 ಮತ್ತು 126 ಪ್ರಕಾರ, ಅಧಿಕಾರಿಗಳ ನಡುವೆ ಹಲವು ಗೌಪ್ಯ ಅಧಿಕೃತ ಸಂವಹನ ನಡೆದಿರುತ್ತದೆ. ಅದನ್ನು ಬಹಿರಂಗಪಡಿಸಲಾಗದು ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

Join Whatsapp
Exit mobile version