ಕಠ್ಮಂಡು : ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರ 8,848.86 ಮೀಟರ್ ಎಂದು ಪ್ರಕಟಿಸಲಾಗಿದೆ. 1954ರಲ್ಲಿ ಭಾರತ ಅಳತೆ ಮಾಡಿದುದಕ್ಕಿಂತ 0.86 ಮೀಟರ್ ಅಥವಾ 86 ಸೆ.ಮೀ. ಹೆಚ್ಚು ಎಂದು ನೇಪಾಳ ಮತ್ತು ಚೀನಾ ಜಂಟಿಯಾಗಿ ಇಂದು ಪ್ರಕಟಿಸಿವೆ.
2015ರ ವಿನಾಶಕಾರಿ ಭೂಕಂಪ ಮತ್ತು ವಿವಿಧ ಕಾರಣಗಳಿಗಾಗಿ ಮೌಂಟ್ ಎವರೆಸ್ಟ್ ಅನ್ನು ಅಳೆಯಲು ನೇಪಾಳ ನಿರ್ಧರಿಸಿತ್ತು. ಅದರಂತೆ ನೇಪಾಳ ಮತ್ತು ಚೀನಾ ಜಂಟಿಯಾಗಿ ಈ ಸರ್ವೇ ಕಾರ್ಯ ಆರಂಬಿಸಿದ್ದವು. ಆ ಪ್ರಕಾರ, ಸರ್ವೇ ಮುಗಿದಿದ್ದು ಈಗ ಮೌಂಟ್ ಎವರೆಸ್ಟ್ ನ ಪರಿಷ್ಕೃತ ಎತ್ತರ ಪ್ರಕಟಿಸಲಾಗಿದೆ.
1954ರಲ್ಲಿ ಭಾರತ ನಡೆಸಿದ್ದ ಮಾಪನದ ಪ್ರಕಾರ ಮೌಂಟ್ ಎವರೆಸ್ಟ್ ಎತ್ತರ 8,848 ಮೀಟರ್ ಆಗಿತ್ತು. ಚೀನಾ ಕೂಡ 1975 ಮತ್ತು 2005ರಲ್ಲಿ ಮೌಂಟ್ ಎವರೆಸ್ಟ್ ಎತ್ತರ ಸಂಶೋಧಿಸಿದ್ದು, ಆ ವೇಳೆ ಕ್ರಮವಾಗಿ 8,848.13 ಮತ್ತು 8,844.43 ಮೀಟರ್ ಎಂದು ಅದು ಪ್ರಕಟಿಸಿತ್ತು. ಆಗ ಭಾರತಕ್ಕಿಂತ 4 ಮೀಟರ್ ಕಡಿಮೆ ಎತ್ತರವನ್ನು ಚೀನಾ ಗುರುತಿಸಿತ್ತು. ಆದರೆ, ಈಗ ಭಾರತದ 1954ರ ಲೆಕ್ಕಾಚಾರದ ಹತ್ತಿರವಾದ, ಲೆಕ್ಕಾಚಾರವನ್ನು ಚೀನಾ ಮತ್ತು ನೇಪಾಳ ಜಂಟಿಯಾಗಿ ಪ್ರಕಟಿಸಿವೆ.