Home ಟಾಪ್ ಸುದ್ದಿಗಳು ಪೀಣ್ಯ ಫ್ಲೈಓವರ್’ನಲ್ಲಿ ಮತ್ತೆ ಭಾರೀ ವಾಹನಗಳ ಸಂಚಾರ ನಿರ್ಬಂಧ

ಪೀಣ್ಯ ಫ್ಲೈಓವರ್’ನಲ್ಲಿ ಮತ್ತೆ ಭಾರೀ ವಾಹನಗಳ ಸಂಚಾರ ನಿರ್ಬಂಧ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿ 4ರ ಪೀಣ್ಯ ಮೇಲು ಸೇತುವೆ (ಫ್ಲೈಓವರ್) ರಸ್ತೆಯ ಮೇಲೆ ಮತ್ತೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ.


ಕಳೆದ ವರ್ಷ ಪೀಣ್ಯ ಫ್ಲೈಓವರ್’ನ ಎರಡು ಪಿಲ್ಲರ್’ನ ಕೇಬಲ್ ಗಳಲ್ಲಿ ತಾಂತ್ರಿಕ ಸಮಸ್ಯೆ ಕಂಡು ಬಂದ ಕಾರಣ 3-4 ತಿಂಗಳುಗಳ ಕಾಲ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿತ್ತು.

ಪಿಲ್ಲರ್’ಗಳಿಗೆ ಕೇಬಲ್ ಅಳವಡಿಸಿದ ಬಳಿಕ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್’ಸಿ) ಭಾರಿ ವಾಹನಗಳ ಓಡಾಡಿಸಿ ತಪಾಸಣೆ ಮಾಡಿ ಸಂಚಾರಕ್ಕೆ ಗ್ರಿನ್ ಸಿಗ್ನಲ್ ನೀಡಿತ್ತು. ಆದರೆ ಈಗ ಮತ್ತೆ ಭಾರೀ ವಾಹನಗಳ ಓಡಾಟಕ್ಕೆ ನಿರ್ಬಂಧಿಸಲಾಗಿದೆ.


ಫ್ಲೈಓವರ್’ನ ಎಲ್ಲಾ ಪಿಲ್ಲರ್’ಗಳಲ್ಲಿ ಕೇಬಲ್ ಕಿತ್ತು ಬರುವ ಆತಂಕ ಎದುರಾಗಿದ್ದು, ಕೇಬಲ್ ಕಿತ್ತು ಬರುವುದಕ್ಕೂ ಮುಂಚೆಯೇ ಹೊಸ ಕೇಬಲ್’ಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.


ಇದಕ್ಕಾಗಿ ಟೆಂಡರ್ ಕೂಡ ನೀಡಿದ್ದು ಫೆಬ್ರವರಿ ತಿಂಗಳಲ್ಲಿ ಕೆಲಸ ಶುರುವಾಗುವ ಸಾಧ್ಯತೆ ಇದೆ. ಹಾಗಾಗಿ ಭಾರೀ ವಾಹನ ಓಡಾಟ ನಡೆಸಿದರೆ ಪಿಲ್ಲರ್ ಮತ್ತು ಫ್ಲೈಓವರ್ ಕೇಬಲ್’ಗಳು ಕಿತ್ತು ಬರುವ ಸಾಧ್ಯತೆ ಇರುವುದರಿಂದ ಮುಂದಿನ ನಾಲ್ಕು ತಿಂಗಳವರೆಗೂ ಭಾರೀ ವಾಹನಗಳ ನಿರ್ಬಂಧಿಸಲಾಗಿದೆ.


ಫ್ಲೈಓವರ್’ನ ಪ್ರವೇಶ ದ್ವಾರದಲ್ಲೇ ಸಂಚಾರ ಪೊಲೀಸರು ಮತ್ತು ಹೋಮ್ ಗಾರ್ಡ್’ಗಳು ಬ್ಯಾರಿಕೇಡ್ ಹಾಕಿ ಭಾರೀ ವಾಹನಗಳ ಓಡಾಟಕ್ಕೆ ಬ್ರೇಕ್ ಹಾಕುತ್ತಿದ್ದಾರೆ.


ಪೀಣ್ಯ ಫ್ಲೈಓವರ್ 120 ಪಿಲ್ಲರ್ ಗಳನ್ನು ಒಳಗೊಂಡಿದ್ದು, 240 ಕೇಬಲ್’ಗಳನ್ನು ಅಳವಡಿಸಬೇಕಾಗಿದೆ. ಪ್ರತಿ ಪಿಲ್ಲರ್’ಗೂ ಎರಡೆರಡು ಕೇಬಲ್’ಗಳನ್ನು ಅಳವಡಿಸಬೇಕಿದ್ದು ಮೂರು ತಿಂಗಳ ಸಮಯ ತೆಗೆದುಕೊಳ್ಳಲಿದೆ.


ಕೇಬಲ್ ಅಳವಡಿಸಿದ ಬಳಿಕ ಐಐಎಸ್’ಸಿ ಅವರು ಫ್ಲೈಓವರ್ ಮೇಲೆ ಪ್ರಾಯೋಗಿಕವಾಗಿ ಭಾರೀ ವಾಹನಗಳನ್ನು ಓಡಾಡಿಸಿ ತಪಾಸಣೆ ಮಾಡಲಿದ್ದಾರೆ. ಆ ತಪಾಸಣೆಯಲ್ಲಿ ಪಾಸ್ ಆದರೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಕೊಡಬಹುದು.


23 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಈ ಫ್ಲೈಓವರ್ ಬೆಂಗಳೂರು ಮತ್ತು ರಾಜ್ಯದ ಜಿಲ್ಲೆಗಳಿಗೆ ಒಂದು ರೀತಿ ಆರ್ಥಿಕ ಚೇತರಿಕೆಯ ಕೊಂಡಿ ಆಗಿದ್ದು, ಇದರ ದುರಸ್ತಿ ಕಾರ್ಯ ಆದಷ್ಟು ಬೇಗ ಆಗಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

Join Whatsapp
Exit mobile version