►ಸಿಡಿಲು ಬಡಿದು ಮಹಿಳೆ ಸಾವು
ವಿಜಯಪುರ: ಬಿಸಿಲಿನ ಬೇಗೆಗೆ ಬಸವಳಿದ ರಾಜ್ಯದ ಜನತೆಗೆ ಮಳೆ ತಂಪನ್ನು ನೀಡಿದೆ.
ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಭಾರೀ ಮಳೆಯಾಗಿದೆ.
ಸಿಡಿಲು ಬಡಿದು ಮಹಿಳೆ ಸಾವು
ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಅಸುನಿಗಿದ್ದಾರೆ. ತಾಂಬಾ ಗ್ರಾಮದ ನಿವಾಸಿ ಭಾರತಿ ಕೆಂಗನಾಳ(40) ಮೃತ ರ್ದುದೈವಿ. ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ.
ಮಲೆನಾಡು ಭಾಗದಲ್ಲಿಯೂ ವರುಣನ ಸಿಂಚನ
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ತಾಲೂಕಿನ ಖಾಂಡ್ಯ, ಸಂಗಮೇಶ್ವರ ಪೇಟೆ, ಜೇನುಗದ್ದೆ, ಶಿರಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಶಿರಗೋಳದಲ್ಲಿ ರಸ್ತೆಗೆ ಬೃಹತ್ ಅರಳಿ ಮರ ಬಿದ್ದಿದೆ. ಗಾಳಿಸಹಿತ ಭಾರಿ ಮಳೆ ಹಿನ್ನೆಲೆ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ. ಜೊತೆಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ತೀರ್ಥಹಳ್ಳಿ ತಾಲೂಕಿನ ಹಲವೆಡೆಯಲ್ಲಿ ಕಳೆದ ಅರ್ಧ ಗಂಟೆಯಿಂದ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.