ಕೇರಳದಲ್ಲಿ ಭಾರೀ ಮಳೆ: 18 ಮಂದಿ ಸಾವು, ಸೇನೆಯ ಸಹಾಯಬೇಕೆಂದ ಸಿಎಂ ಪಿಣರಾಯಿ ವಿಜಯನ್

Prasthutha|

ತಿರುವನಂತಪುರ: ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವುದರಿಂದ ಕೇರಳದಲ್ಲಿ ವಿಪರೀತವಾಗಿ ಮಳೆ ಸುರಿಯುತ್ತಿದ್ದು,  ಜನಜೀವನ ಅಸ್ತವ್ಯಸ್ತವಾಗಿದೆ.

- Advertisement -

ಇಲ್ಲಿಯವರೆಗೆ ಸುಮಾರು 18 ಮಂದಿ ಮೃತಪಟ್ಟಿದ್ದು,  12ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ.

ಈ ಬಗ್ಗೆ ಚರ್ಚಿಸಲು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ನಿನ್ನೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕೊಟ್ಟಾಯಂ ಸೇರಿ, ಎಲ್ಲ  ಪ್ರವಾಹ ಮತ್ತು ಭೂಕುಸಿತ ಪೀಡಿತ ಪ್ರದೇಶಗಳಿಂದ ಜನರನ್ನು ಸ್ಥಳಾಂತರಗೊಳಿಸಲು ಏನೇನು ವ್ಯವಸ್ಥೆಯ ಅಗತ್ಯವಿದೆಯೋ ಅದನ್ನೆಲ್ಲ ಮಾಡಲಾಗುವುದು ಎಂದು ಹೇಳಿದ್ದಾರೆ.  ಸಭೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ಪಿಣರಾಯಿ ವಿಜಯನ್​, ಕೇರಳದ ಹಲವು ಭಾಗಗಳಲ್ಲಿ ಮಳೆಯಿಂದಾಗಿ ಗಂಭೀರ ಪರಿಸ್ಥಿತಿ ಉಂಟಾಗಿದೆ. ಜನ-ಜಾನುವಾರಗಳ ರಕ್ಷಣೆಗೆ ಏನುಬೇಕಾದರೂ ಮಾಡಲು ನಾವು ಸಿದ್ಧರಿದ್ದೇವೆ. ನಮಗೆ ಈಗ ಭಾರತೀಯ ಸೇನೆಯ ಭೂ, ವಾಯು ಮತ್ತು ನೌಕಾಪಡೆಗಳಿಂದ ಸಹಾಯ ಬೇಕು. ಅಗತ್ಯವಿರುವ ಜಿಲ್ಲೆಗಳಲ್ಲಿ ಎಲ್ಲ ಕಡೆ ಆಶ್ರಯ ಶಿಬಿರಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

- Advertisement -

ಪಥನಾಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ.

 ತಿರುವನಂತಪುರ, ಕೊಲ್ಲಂ, ಅಲಪ್ಪುಳ, ಪಲಕ್ಕಾಡ್, ಮಲಪ್ಪುರಂ, ಕೋಯಿಕ್ಕೋಡ್ ಮತ್ತು ವಯನಾಡ್  ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

Join Whatsapp