Home ಟಾಪ್ ಸುದ್ದಿಗಳು ರಾಜ್ಯದ ಹಲವೆಡೆ ಧಾರಾಕಾರ ಮಳೆ: ತಕ್ಷಣ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

ರಾಜ್ಯದ ಹಲವೆಡೆ ಧಾರಾಕಾರ ಮಳೆ: ತಕ್ಷಣ ಪರಿಹಾರ ಕಾರ್ಯ ಕೈಗೆತ್ತಿಕೊಳ್ಳಲು ಸಿಎಂ ಸೂಚನೆ

ಬೆಂಗಳೂರು, ಜು.23: ರಾಜ್ಯದ ಮುಂಬೈ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ತಕ್ಷಣವೇ ಪರಿಹಾರ ಕಾರ್ಯ ಕೈಗೊಳ್ಳುವಂತೆ ಪ್ರವಾಹ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದ್ದಾರೆ.


ಜಿಲ್ಲಾಧಿಕಾರಿಗಳಿಂದ ವಸ್ತುಸ್ಥಿತಿ ಮಾಹಿತಿ ಪಡೆದ ನಂತರ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ಜನ, ಜಾನುವಾರಗಳ ರಕ್ಷಣೆಗೆ ಧಾವಿಸುವಂತೆ ಸೂಚಿಸಿದ್ದಾರೆ. ಸರ್ಕಾರದಿಂದ ಹೆಚ್ಚಿನ ನೆರವು ಬೇಕಾದಲ್ಲಿ ಕೂಡಲೇ ಕರೆ ಮಾಡಿ ತಿಳಿಸುವಂತೆಯೂ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.


ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಮೂರು – ನಾಲ್ಕು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಜನಜೀವನಕ್ಕೆ ತೊಂದರೆ ಉಂಟಾಗಿದೆ. ಖಾನಾಪುರ, ಸಂಕೇಶ್ವರ ಮತ್ತು ಬೆಳಗಾವಿಯ ಬಹುತೇಕ ಅಪಾರ್ಟ್ಮೆಂಟ್ಗಳಿಗೆ ನೀರು ನುಗ್ಗಿದೆ. ಸಾವಿರಾರು ಎಕರೆ ಜಲಾವೃತಗೊಂಡು ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಸಂಭವಿಸಿದೆ. ಪೂನಾ, ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತವಾಗಿದೆ.


ಧಾರವಾಡ-ಹಿರೇಬಾಗೇವಾಡಿ ಹಾಗೂ ಹತ್ತರಗಿಯ ಹೊಟೇಲ್ ನಾಕಾದಿಂದ ಮಹಾರಾಷ್ಟ್ರಕ್ಕೆ ತೆರಳುವ ವಾಹನಗಳು ಪರ್ಯಾಯ ಮಾರ್ಗದ ಮೂಲಕ ಹೋಗುತ್ತಿವೆ. ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆಗಳ ಮೇಲೆ ನೀರು ಹರಿಯುತ್ತಿರುವುದರಿಂದ ಸುಮಾರು 70 ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.

ಕೇರಳದ ವಯನಾಡಿನಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಮೈಸೂರು ಜಿಲ್ಲೆ ಕಬಿನಿ ಜಲಾಶಯದಿಂದ 30 ಸಾವಿರ ಕ್ಯೂಸೆಕ್ ನೀರು ಹೊರಬಿಡಲಾಗುತ್ತಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಹಲವು ಕಡೆ ರೈತರ ಜಮೀನುಗಳು ಮುಳುಗಡೆಯಾಗಿವೆ. ಸೂಳೆಕಟ್ಟೆ ಸೇತುವೆ ಮುಳುಗಡೆಯಾಗಿರುವುದರಿಂದ ಬೇಗೂರು, ಕಂದೇಗಾಲ, ಬಿದರಹಳ್ಳಿ, ಕಳಸೂರು, ಕೆಂಚನಹಳ್ಳಿ ಮುಂತಾದ ಗ್ರಾಮಗಳಿಗೆ ಸಂಚಾರ ಸ್ಥಗಿತವಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ.


ಪ್ರವಾಹದಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಭಾರತೀಯ ನೌಕಾ ದಳ ತನ್ನ ರಕ್ಷಣಾ ತಂಡಗಳೊಂದಿಗೆ ಜಿಲ್ಲೆಗೆ ಆಗಮಿಸಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಭಾರತೀಯ ನೌಕಾ ಪಡೆ, ಕಾರವಾರ ನೌಕಾ ನೆಲೆಯಲ್ಲಿ ಹದಿನಾರು ಡೈವರ್ಗಳನ್ನು ರಕ್ಷಣಾ ಸಾಮಗ್ರಿಗಳೊಂದಿಗೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಕದ್ರಾ ಅಣೆಕಟ್ಟು, ಮಲ್ಲಾಪುರ ಕುರ್ನಿಪೇಟೆ, ಕೈಗಾ ಬಳಿ ನೆರೆಯಿಂದಾಗಿ ಸಂಕಷ್ಟಕ್ಕೀಡಾಗಿರುವ ಜನರಿಗೆ ನೆರವು ನೀಡಲು ರಕ್ಷಣಾ ತಂಡಗಳು ಸ್ಥಳಕ್ಕೆ ತೆರಳಿವೆ.
ಕೊಡಗು ಜಿಲ್ಲೆಯಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಕಾವೇರಿ, ಲಕ್ಮಣತೀರ್ಥ ನದಿ ಸೇರಿದಂತೆ ತೊರೆಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ಹಲವೆಡೆ ಮಳೆ ಗಾಳಿಗೆ ಮರಗಳು ಉರುಳಿಬಿದ್ದು, ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಜಿಲ್ಲೆಯಲ್ಲಿ ಇಂದು ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಭಾರಿ ಮಳೆಯಿಂದ ಶಿರಾಡಿ ಘಾಟ್ ರಸ್ತೆ ಕುಸಿದಿರುವ ಹಿನ್ನೆಲೆಯಲ್ಲಿ ಮಂಗಳೂರು – ಬೆಂಗಳೂರು ನಡುವೆ ಸಂಚರಿಸುವ ವಾಹನ ಸವಾರರು ಪರ್ಯಾಯ ಮಾರ್ಗದಲ್ಲಿ ತೆರಳುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದ್ದಾರೆ.
ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವವರು ಚಾರ್ಮಾಡಿ, ಸಂಪಾಜೆ ಅಥವಾ ಬಿಸಿಲೆ ಘಾಟ್ ಮೂಲಕ ಸಂಚರಿಸಬೇಕು ಎಂದು ಅವರು ಸೂಚನೆ ನೀಡಿದ್ದಾರೆ.


ಕೃಷ್ಣಾನದಿ ಪಾತ್ರದಲ್ಲಿ ಮಳೆಯಾಗುತ್ತಿರುವುದರಿಂದ ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರ ಗ್ರಾಮದ ಬಸವಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. 28 ಕ್ರಸ್ಟ್ ಗೇಟ್ಗಳ ಮೂಲಕ ಎರಡೂವರೆ ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ ಎಂದು ಜಲಾಶಯದ ಕಾರ್ಯನಿರ್ವಾಹಕ ಇಂಜಿನಿಯರ್ ಶಂಕರ್ ನಾಯ್ಕೋಡಿ ತಿಳಿಸಿದ್ದಾರೆ.


ಹಲವು ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ:
ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಬಾಗಲಕೋಟೆ, ವಿಜಯಪುರ , ಬೀದರ್, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ರಾಯಚೂರು ಜಿಲ್ಲೆಗಳ ಹೆಚ್ಚಿನ ಭಾಗಗಳಲ್ಲಿ ಸಹ ಮಳೆಯ ಮುನ್ಸೂಚನೆ ಇದೆ.
ದಾವಣಗೆರೆ, ಚಿತ್ರದುರ್ಗ, ಪಾವಗಢ, ಬಳ್ಳಾರಿ, ಹಾವೇರಿ ಜಿಲ್ಲೆಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯ ಮುನ್ಸೂಚನೆ ನೀಡಲಾಗಿದೆ. ಮೈಸೂರು, ಹಾಸನ, ಮಂಡ್ಯ, ಚಾಮರಾಜನಗರ, ರಾಮನಗರ, ಬೆಂಗಳೂರು, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಭಾಗಗಳಲ್ಲಿ ಮೋಡ ಅಥವಾ ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Join Whatsapp
Exit mobile version