Home ಕರಾವಳಿ ಭಾರಿ ಮಳೆ: ಮರವೂರು ಸೇತುವೆಯ ರಸ್ತೆ ಬಿರುಕು

ಭಾರಿ ಮಳೆ: ಮರವೂರು ಸೇತುವೆಯ ರಸ್ತೆ ಬಿರುಕು

ಮಂಗಳೂರು: ಮುಂಜಾನೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಮರವೂರು ಸೇತುವೆ ಬಳಿ ರಸ್ತೆಯಲ್ಲಿ ಬಿರುಕು ಬಿಟ್ಟಿದೆ.

ರಸ್ತೆ ಬಿರುಕು ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲು ಪಿಡಬ್ಲ್ಯುಡಿ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮರವೂರು ಸೇತುವೆಯ ರಸ್ತೆಯು ಮಂಗಳೂರು ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಿದೆ. ಇತ್ತೀಚೆಗೆ ಮರವೂರು ಸೇತುವೆ ಅಲ್ಪಪ್ರಮಾಣದಲ್ಲಿ ಕುಸಿತ ಕಂಡು ಜನತೆ ಭೀತಿಗೊಳಗಾಗಿದ್ದರು. ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಸೇತುವೆಯ ಮೇಲೆ ವಾಹನ ಸಂಚಾರ, ಜನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು‌. ಆದರೆ ದುರಸ್ತಿ ಬಳಿಕ ಮತ್ತೆ ಸೇತುವೆಯ ಮೇಲಿನಿಂದ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಇಂದು ಸುರಿಯುತ್ತಿರುವ ಮಳೆಗೆ ಸೇತುವೆಯ ಪಕ್ಕದಲ್ಲಿರುವ ರಸ್ತೆಯ ಬದಿ ಸಂಪೂರ್ಣ ಬಾಯ್ದೆರೆದು ನಿಂತಿದೆ‌. ತಕ್ಷಣ ಸ್ಥಳಕ್ಕೆ ಪಿಡಬ್ಲ್ಯುಡಿ ಅಧಿಕಾರಿಗಳನ್ನು ಕಳುಹಿಸಿ ಪರಿಶೀಲನೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅಧಿಕಾರಿಗಳು ದುರಸ್ತಿ ಕಾಮಗಾರಿಯನ್ನು ನಡೆಸುತ್ತಿದ್ದಾರೆ.

ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದ್ದು,  ಶಿಕ್ಷಣ ಇಲಾಖಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವಂತೆ ದ.ಕ. ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

ಮಳೆ ಮುಂದುವರಿದರೆ, ಶುಕ್ರವಾರ ಬೆಳಗ್ಗೆ ಪರಿಸ್ಥಿತಿಯನ್ನು ಅವಲೋಕಿಸಿ ಶಾಲೆಗಳಿಗೆ ರಜೆ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

Join Whatsapp
Exit mobile version