Home ಟಾಪ್ ಸುದ್ದಿಗಳು ಬೆಂಗಳೂರು ನಗರದಲ್ಲಿ ಭಾರಿ ಮಳೆ: ವಾಹನ ಸವಾರರ ಪರದಾಟ

ಬೆಂಗಳೂರು ನಗರದಲ್ಲಿ ಭಾರಿ ಮಳೆ: ವಾಹನ ಸವಾರರ ಪರದಾಟ

ನವೆಂಬರ್ 17ರವರೆಗೆ ರಾಜಧಾನಿಯಲ್ಲಿ ಮಳೆಯ ಮುನ್ಸೂಚನೆ

ಬೆಂಗಳೂರು; ಬೆಂಗಳೂರು ನಗರದಲ್ಲಿ ಭಾನುವಾರ ಕೊಂಚ ಬಿಡುವು ನೀಡಿದ್ದ ಮಳೆರಾಯ ಸೋಮವಾರ ಸಂಜೆಯಿಂದ ಮತ್ತೆ ಆರ್ಭಟಿಸುತ್ತಿದ್ದಾನೆ. ಸಂಜೆ 4 ಗಂಟೆಯಿಂದ ಗಡುಗಿನ ಆರ್ಭಟದೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ವಾಹನ ಸವಾರರು, ಜನರು ಪರದಾಡುವಂತಾಗಿದೆ.

ಜಯನಗರ, ಹನುಂತನಗರ, ವಿದ್ಯಾಪೀಠ ವೃತ್ತ, ಕತ್ರಿಗುಪ್ಪೆ, ರಾಮಕೃಷ್ಣ ಆಶ್ರಮ ಸರ್ಕಲ್, ಶಾಂತಿನಗರ, ಮೆಜೆಸ್ಟಿಕ್, ಲಾಲ್ ಭಾಗ್, ಕೆ. ಆರ್.‌ ಸರ್ಕಲ್, ರಿಚ್‌ಮಂಡ್ ಸರ್ಕಲ್, ವಿಲ್ಸನ್ ಗಾರ್ಡನ್, ಕೋರಮಂಗಲ, ಜೆ. ಪಿ. ನಗರ, ಜೆ.ಸೊ. ನಗರ ಸೇರಿದಂತೆ ವಿವಿಧ ಕಡೆ ಮಳೆಯ ಆರ್ಭಟ ಜೋರಾಗಿದೆ.

 ಹಲವು ರಸ್ತೆಗಳು ಜಲಾವೃತಗೊಂಡಿದ್ದು, ಕಚೇರಿಗಳಿಂದ ಮನೆಗೆ ತೆರಳುವ ವಾಹನ ಸವಾರರು ಮಳೆಯಿಂದಾಗಿ ಪರದಾಡಿದರು. ಅಂಗಡಿಗಳ ಕೆಳಗೆ, ಫ್ಲೈ ಓವರ್ ಕೆಳಗೆ ಜನರು ನಿಂತಿರುವ ದೃಶ್ಯ ಸಾಮನ್ಯವಾಗಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಬೆಂಗಳೂರು ನಗರದಲ್ಲಿ ಕಳೆದ ವಾರದಿಂದ ನಿರಂತರವಾಗಿ ಮಳೆಯಾಗುತ್ತಿದೆ. ಕಳೆದ ವಾರ ತಾಪಮಾನ 17 ರಿಂದ 18 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿತ್ತು. ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ನವೆಂಬರ್ 17ರ ತನಕ ಮಳೆ ಮುಂದುವರೆಯಲಿದೆ ಎಂದು ಹೇಳಿದೆ.

ಬೆಂಗಳೂರು ನಗರದಲ್ಲಿ ಇನ್ನೂ 48 ಗಂಟೆಗಳ ಕಾಲ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇದರ ಜೊತೆಗೆ ಮೋಡ ಕವಿದ, ಶೀತಗಾಳಿಯ ವಾತಾವರಣವೂ ಮುಂದುವರೆಯಲಿದೆ.

Join Whatsapp
Exit mobile version