ಮಂಡ್ಯ: ಅಯೋಧ್ಯಾ ರಾಮಮಂದಿರ ಉದ್ಘಾಟನೆ ಮೋದಿಮಯ, ಬಿಜೆಪಿಮಯ ಮಾತ್ರ ಆಗಿದೆ. ಕರ್ನಾಟಕದ ಸಚಿವ ಸಂಪುಟ ಸದಸ್ಯರನ್ನೇ ಕರೆದಿಲ್ಲ. ರಾಮಮಂದಿರ ಹೋರಾಟ ಮಾಡಿದ ಅಡ್ವಾನಿ ಅವ್ರನ್ನೆ ಬರಬೇಡಿ ಎಂದವರು ಅವರು. ಅಪೂರ್ಣ ಮಂದಿರ ಉದ್ಘಾಟನೆಗೆ ಮಠಗಳೇ ವಿರೋಧಿಸಿವೆ. ಇದು ಚುನಾವಣೆಗಾಗಿ ಉದ್ಘಾಟನೆ ನಡೆತಿರೋ ಕಾರ್ಯಕ್ರಮ. ನಾವು ಹೋಗುವುದಿಲ್ಲ ಎಂದು ಕೃಷಿಸಚಿವ ಚಲುರಾಯಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ರಾಜ್ಯದ ಸಿಎಂ ಸಿದ್ದರಾಮಯ್ಯರನ್ನೆ ಕರೆದಿಲ್ಲ. ಇದು ಕನ್ನಡಿಗರಿಗೆ ಮಾಡಿದ ಅಪಮಾನ ಅಲ್ವಾ ಎಂದು ಪ್ರಶ್ನಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಮಮಂದಿರ ಉದ್ಘಾಟನೆ ನಮಗೂ ಸಂತಸ, ನಾವೂ ರಾಮಭಕ್ತರೇ. ಆದರೆ ಚುನಾವಣೆ ದೃಷ್ಟಿಯಿಂದ ಮಾಡುವುದು ಸರಿಯಲ್ಲ. ಬಿಜೆಪಿಯವರು ದೇವರು, ದೇವಸ್ಥಾನ ಇಟ್ಟುಕೊಂಡು ಚುನಾವಣೆ ನಡೆಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದಲ್ಲಿ ರಜೆ ಘೋಷಣೆ ಮಾಡಿ, ದೇಶಕ್ಕೆ ರಜೆ ಕೊಡಿಸಲಿ. ಅಪರೂಪಕ್ಕೆ ಯುಪಿ ಸಿಎಂರನ್ನ ಪಕ್ಕಕ್ಕೆ ಕರೆದುಕೊಳ್ತಾರೆ. ಅಮಿತ್ ಶಾ ಕೂಡ ಇಲ್ಲ. ಕಾರ್ಯಕ್ರಮ ಎಲ್ಲ ಮೋದಿಯವರದೇ ದೊಡ್ಡ ದೊಡ್ಡ ಫೋಟೊಗಳು, ರಾಮನದ್ದು ಚಿಕ್ಕ ಫೋಟೊಗಳು. ದೇವರನ್ನು ಮುಂದಿಟ್ಟು ರಾಜಕೀಯ ಮಾಡುತ್ತಿರುವ ಬಿಜೆಪಿಯವರಿಗೆ ಜನ ಉತ್ತರ ಕೊಡುವ ದಿನ ಬರುತ್ತದೆ. ಈ ಚುನಾವಣೆಯಲ್ಲೇ ಬರಬಹುದು ಅಥವಾ ಮುಂದಿನ ಚುನಾವಣೆಯಲ್ಲಾದ್ರು ಆಗಬಹುದು ಎಂದರು.